ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ 4500 ಬಸ್: ಪ್ರಯಾಣಿಕರಿಗೆ ತೀವ್ರ ಅನಾನುಕೂಲ

Update: 2022-11-12 02:11 GMT

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಬೆಂಗಳೂರು ಭೇಟಿ ವೇಳೆ ಬಿಜೆಪಿ ಕಾರ್ಯಕರ್ತರನ್ನು ಸಮಾರಂಭಕ್ಕೆ ಕರೆದೊಯ್ಯುವ ಸಲುವಾಗಿ ಬಿಎಂಟಿಸಿಯ 2400 ಹಾಗೂ ಕೆಎಸ್ಸಾರ್ಟಿಸಿಯ 2100 ಬಸ್ಸುಗಳನ್ನು ಬಾಡಿಗೆಗೆ ಪಡೆದ ಕಾರಣ ಬಸ್ ಪ್ರಯಾಣಿಕರಿಗೆ ತೀವ್ರ ಅನಾನುಕೂಲ ಉಂಟಾಯಿತು ಎಂದು timesofindia.com ವರದಿ ಮಾಡಿದೆ.

ಇದು ಸಾಲದೆಂಬಂತೆ ಮೋದಿಯವರು ಬೆಂಗಳೂರು ನಗರ ರೈಲು ನಿಲ್ದಾಣದ ಬಳಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಕೆಂಪೇಗೌಡ ಮೆಜೆಸ್ಟಿಕ್ ಟರ್ಮಿನಸ್‍ನಿಂದ ಎರಡು ಗಂಟೆ ಕಾಲ ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿ ಬಸ್ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಹೊರಗಿನಿಂದ ಬರುವ ಬಸ್ಸುಗಳನ್ನು ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಲ್ಲೇ ತಡೆಯಲಾಯಿತು.

ಕಾರ್ಯಾಚರಣೆ ಸ್ಥಗಿತಗೊಳಿಸುವ ಬಗ್ಗೆ ಮುಂಚಿತವಾಗಿ ಯಾವುದೇ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಅಸಂಖ್ಯಾತ ಪ್ರಯಾಣಿಕರು ಪರದಾಟ ಮಾಡಬೇಕಾಯಿತು. "ಪ್ರಧಾನಿ ಭೇಟಿ ಕಾರಣದಿಂದ ಕೆಂಪೇಗೌಡ ಬಸ್ ನಿಲ್ದಾಣದಿಂದ ಬಸ್ ಸೇವೆ ಸ್ಥಗಿತಗೊಳಿಸಲು ಉಪ್ಪಾರಪೇಟೆ ಸಂಚಾರಿ ಪೊಲೀಸ್ ಠಾಣೆಯಿಂದ ಮಾಹಿತಿ ಬಂದಿತ್ತು. ಕೆಲ ಬಸ್ಸುಗಳನ್ನು ಹತ್ತಿರದ ನಿಲ್ದಾಣಗಳಲ್ಲಿ ನಿಲ್ಲಿಸಲಾಯಿತು. ವಿಐಪಿಗಳ ಪ್ರಯಾಣ ಸುಗಮಗೊಳಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಯಿತು" ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಿಎಂಟಿಸಿಯಲ್ಲಿ ಒಟ್ಟು 6800 ಬಸ್ಸುಗಳಿದ್ದು, ಚಾಲಕರ ಕೊರತೆಯಿಂದಾಗಿ ಕೇವಲ 5660 ಬಸ್ಸುಗಳು ಕಾರ್ಯಾಚರಣೆ ನಡೆಸುತ್ತವೆ. ಚಾರ್ಟರ್ಡ್ ಸೇವೆಗಳಿಗಾಗಿ 2400 ಬಸ್ಸುಗಳನ್ನು ನೀಡಲಾಗಿದೆ. ಕನಕದಾಸ ಜಯಂತಿ ರಜೆ ಕಾರಣದಿಂದ ಹಾಗೂ ಮೋದಿ ಭೇಟಿ ಹಿನ್ನೆಲೆಯಲ್ಲಿ ಬೇಡಿಕೆ ಕಡಿಮೆ ಇರಬಹುದು ಎಂಬ ನಿರೀಕ್ಷೆಯಿಂದ ಈ ಕ್ರಮ ಕೈಗೊಂಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

Similar News