ತನ್ನ ಪ್ರಿಯಕರನ ಜತೆ ಅಪ್ರಾಪ್ತ ವಯಸ್ಸಿನ ಪುತ್ರಿಯ ವಿವಾಹ ಮಾಡಿಸಿದ ಮಹಿಳೆ !

Update: 2022-11-12 03:24 GMT

ಪುಣೆ: ತನ್ನ 28 ವರ್ಷದ ಪ್ರಿಯಕರನ ಜತೆ 15 ವರ್ಷದ ಪುತ್ರಿಯ ವಿವಾಹವನ್ನು ಬಲವಂತವಾಗಿ ಮಾಡಿಸಿದ ಅರೋಪದಲ್ಲಿ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. ತನ್ನ ಪ್ರಿಯಕರನ ಜತೆ ಲೈಂಗಿಕ ಸಂಬಂಧ ಹೊಂದುವಂತೆ ಸಂತ್ರಸ್ತ ಬಾಲಕಿಯನ್ನು ಒತ್ತಾಯಿಸಲಾಗಿದೆ ಎಂದೂ ತಿಳಿದು ಬಂದಿದೆ. ಈ ಬಗ್ಗೆ ndtv.com ವರದಿ ಮಾಡಿದೆ.

ಈ ಘಟನೆ ಹಿನ್ನೆಲೆಯಲ್ಲಿ 36 ವರ್ಷದ ಮಹಿಳೆ ಹಾಗೂ ಆಕೆಯ 28 ವರ್ಷದ ಪ್ರಿಯಕರನನ್ನು ಬಂಧಿಸಲಾಗಿದೆ. ಪೋಕ್ಸೊ ಕಾಯ್ದೆ ಹಾಗೂ ಬಾಲ್ಯವಿವಾಹ ತಡೆ ಕಾಯ್ದೆಯ ನಿಬಂಧನೆಗಳಡಿ ಪ್ರಕರಣ ದಾಖಲಿಸಲಾಗಿದೆ.

"ಬಾಲಕಿ ಎಲ್ಲ ಘಟನಾವಳಿಗಳನ್ನು ತನ್ನ ಸಹಪಾಠಿ ಜತೆಗೆ ಹಾಗೂ ಮಹಿಳಾ ಸಾಮಾಜಿಕ ಕಾರ್ಯಕರ್ತೆ ಜತೆ ಹಂಚಿಕೊಂಡ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಪ್ರಿಯಕರ ಮಹಿಳೆಯ ದೂರದ ಸಂಬಂಧಿ ಎನ್ನಲಾಗಿದ್ದು, ಮಹಿಳೆಯ ಜತೆಗೇ ವಾಸವಿದ್ದ ಎಂದು ಚಂದನ್‍ ನಗರ ಠಾಣೆಯ ಅಧಿಕಾರಿಗಳು ಹೇಳಿದ್ದಾರೆ.

ಈ ವಿವಾಹಕ್ಕೆ ಒಪ್ಪಿಕೊಳ್ಳದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆ ಬಾಲಕಿಗೆ ಬೆದರಿಕೆ ಹಾಕಿದ್ದಳು. ನವೆಂಬರ್ 6ರಂದು ಬಾಲಕಿಯ ವಿವಾಹ ಅಹ್ಮದ್‍ ನಗರದ ದೇವಾಲಯವೊಂದರಲ್ಲಿ ನಡೆದಿದೆ. ತಾಯಿಯ ಪ್ರಿಯಕರ ಬಲವಂತವಾಗಿ ಬಾಲಕಿ ಜತೆ ಲೈಂಗಿಕ ಸಂಪರ್ಕ ನಡೆಸಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Similar News