ಸುಳ್ಳಿನ ಬೇಳೆ ಬೇಯಿಸಿಕೊಳ್ಳುವವರು ಬೆದರಿಕೆ ಪತ್ರಗಳನ್ನು ಬರೆಯುತ್ತಾರೆ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2022-11-12 15:53 GMT

ಬೆಂಗಳೂರು, ನ. 12: ‘ಕರ್ನಾಟಕದಲ್ಲಿ ಅನೇಕ ಸಾಹಿತಿಗಳಿಗೆ ಬೆದರಿಕೆಯ ಪತ್ರಗಳು ಬರುತ್ತಿರುತ್ತವೆ. ಏಕೆಂದರೆ ಸತ್ಯವನ್ನು ಕುರಿತು ಮಾತನಾಡುವವರಿಗೆ ಸುಳ್ಳಿನಲ್ಲಿ ಬೇಳೆ ಬೇಯಿಸಿಕೊಳ್ಳುವವರು ಬೆದರಿಕೆ ಪತ್ರಗಳನ್ನು ಬರೆದಿದ್ದಾರೆ’ ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಶನಿವಾರ ಇಲ್ಲಿನ ಕಸಾಪದ ಕುವೆಂಪು ಸಭಾಂಗಣದಲ್ಲಿ ಕರ್ನಾಟಕ ವಿಕಾಸ ರಂಗವು ಆಯೋಜಿಸಿದ್ದ ‘ಕತ್ತಲ ದಾರಿ ದೂರ’ ಕಾದಂಬರಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಕತ್ತಲು ಅಜ್ಞಾನದ ಸಂಕೇತವಾದರೂ, ಬೆಳಕಿನಲ್ಲಿ ಹೊಳೆಯದ ಜ್ಞಾನ ಕತ್ತಲಲ್ಲಿ ಇದ್ದಾಗ ಬರುತ್ತದೆ. ಕತ್ತಲು ಕೆಲವೊಮ್ಮೆ ಹೊರಗಣ್ಣಿಗೆ ಕತ್ತಲು, ಒಳಗಣ್ಣಿಗೆ ಅದು ಬೆಳಕಾಗಿರುತ್ತದೆ. ಕಾದಂಬರಿಯ ವಸ್ತು ಸಮಕಾಲೀನವಾಗಿದೆ’ ಎಂದರು. 

‘ನಮ್ಮ ರಾಜ್ಯದಲ್ಲಿ ಮೂರು ಬಗೆಯ ಸಾಹಿತಿಗಳು ಇದ್ದಾರೆ. ಮೊದಲನೆ ವರ್ಗದವರು ಶಾಂತಿಯ ಸಮಯದಲ್ಲಿ ಕ್ರಾಂತಿಯ ಬಗ್ಗೆ ಮಾತನಾಡುತ್ತಾರೆ. ಇವರು ಸಿದ್ಧಾಂತವಾದಿಗಳು ಆಗಿರುತ್ತಾರೆ. ಎರಡನೆ ವರ್ಗದವರು ಕೆಲೆಗಾಗಿ ಕಲೆಯನ್ನು ಪ್ರತಿಪಾದಿಸುವವರಾಗಿದ್ದಾರೆ. ಅವರು ಸೇಫ್ ಝೋನ್‍ನಲ್ಲಿ ವಾಸವಾಗಿರುತ್ತಾರೆ. ಪ್ರಶಸ್ತಿಗಳಿಗಾಗಿ ಸಾಹಿತ್ಯ ಬರೆಯುತ್ತಾರೆ. ಹಾಗೆಯೇ ಎಲ್ಲರನ್ನು ಮೆಚ್ಚಿಸುವ ಕೆಲಸ ಮಾಡುತ್ತಾರೆ. ಮೂರನೆಯವರು ನಿರಂತರ ಹೋರಾಟವನ್ನು ಮಾಡುತ್ತಾರೆ. ಯಾವುದೇ ರಾಜೀ ಇಲ್ಲದೆ ಬರೆಯುತ್ತಾ, ಹೊರಾಟ ಮಾಡುತ್ತಿರುತ್ತಾರೆ’ ಎಂದು ಅವರು ವಿಶ್ಲೇಷಿಸಿದರು. 

ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ‘ನಮ್ಮ ಮಾತೃ ಭಾಷೆಯಲ್ಲಿ ನಮ್ಮ ಬಗ್ಗೆ ಬರೆಯುವುದು ಅನಿವಾರ್ಯವಾಗಿದೆ. ಇಂದು ಬುದ್ದಿಜೀವಿಗಳಲ್ಲಿ ಅಪ್ರಾಮಾಣಿಕತೆಯು ಹೆಚ್ಚಾಗುತ್ತಿದೆ. ಹಾಗಾಗಿ ಅವರು ಓಲೈಕೆ ಮಾಡಲು ಕಲಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕಾದಂಬರಿಕಾರಿ ದ್ವರನಕುಂಟೆ ಪಾತಣ್ಣ, ಪತ್ರಕರ್ತ ಪಾರ್ವತೀಶ ಬಿಳಿದಾಳೆ ಮತ್ತಿತರರು ಉಪಸ್ಥಿತರಿದ್ದರು. 

Similar News