ಹೆಣ್ಣಿನ ಚರಿತ್ರೆ ಮತ್ತು ಆಳುವ ಅಹಂಕಾರದ ವಿರುದ್ಧ ವ್ಯವಧಾನದ ಬಲ

Update: 2022-11-13 04:19 GMT

ಕವಯಿತ್ರಿ ನಾಗರೇಖಾ ಗಾಂವಕರ ಅವರ ‘ಸ್ತ್ರೀ - ಸಮಾನತೆಯ ಸಂಧಿಕಾಲದಲ್ಲಿ’ ಕೃತಿಯು ಹೆಣ್ಣಿನ ಕುರಿತು, ಆಕೆಯ ಎದುರಿನ ಹಲವು ತಲ್ಲಣಗಳ ಕುರಿತು ಬರೆದ ಲೇಖನಗಳ ಸಂಕಲನ. ಯುಗ ಯುಗಗಳ ಮೌನದೊಳಗಿನ ಶಕ್ತಿಯು ಹೊರಪ್ರವಹಿಸಿದುದರ ಕಥನವನ್ನು ವಿವಿಧ ನೆಲೆಗಳಿಂದ ನೋಡುತ್ತವೆ ಇಲ್ಲಿನ ಬರಹಗಳು.

ಸ್ತ್ರೀ ಎಂಬ ಯುಗ ಯುಗಗಳ ಮೌನವು ಮಾತನಾಡಲು ತೊಡಗಿದ ಹೊತ್ತಲ್ಲೆಲ್ಲ ಈ ಜಗತ್ತು ತಡವರಿಸಿದೆ ಮತ್ತು ಆ ಮಾತುಗಳನ್ನು ದಮನಿಸಲು ನೋಡಿದೆ. ತಾನು ಮಾತ್ರವೇ ಮಾತನಾಡಬೇಕೆನ್ನುವ ಪುರುಷಾಹಂಕಾರ ಸ್ತ್ರೀಯ ದನಿಯನ್ನು ಅಡಗಿಸಲು ನೋಡಿದಾಗೆಲ್ಲ ಸೋತಿದೆ ಮತ್ತು ಊಹೆಗೂ ಎಟುಕದ ವಿಪ್ಲವವನ್ನು ಎದುರಿಸಿ ನಾಶ ತಂದುಕೊಂಡದ್ದಿದೆ. ಈ ಜಗತ್ತಿನ ಕಥನವೆಂದರೆ ಮೌನ ಮತ್ತು ಅಹಂಕಾರದ ಅಬ್ಬರದ ನಡುವಿನ ಸಂಘರ್ಷದ ಕಥನ.

ಹಾಗೆ ಆದಾಗಲೆಲ್ಲ ಅಹಂಕಾರದ ಅಬ್ಬರವು ಅಡಗಿ ಮೌನದ ಮಾತು ಕೇಳಿಸಿದೆ. ಆದರೂ ಸ್ತ್ರೀ ದನಿಯನ್ನು ಅಡಗಿಸುವ ಅಬ್ಬರ ಅವ್ಯಾಹತವಾಗಿ ಸಾಗಿಯೇ ಇದೆ. ಈ ನಿರಂತರ ಸಂಘರ್ಷವೇ ಜಗದ ಕಥನದ ಧಾರೆ. ಆಧುನಿಕ ಕಾಲವೂ ಇದಕ್ಕೆ ಹೊರತಲ್ಲವಾದರೂ ಸ್ತ್ರೀ ಇವತ್ತು ಹೆಚ್ಚಿನ ಶಕ್ತಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದಾಳೆ ಮತ್ತು ಮಾತನಾಡುತ್ತಿದ್ದಾಳೆ. ಅದರ ನಡುವೆಯೂ ಆಕೆಯ ತಳಮಳಗಳು ಕೊನೆಗೊಂಡಿಲ್ಲದೇ ಇರುವುದು ರಾಮಾಯಣ, ಮಹಾಭಾರತದಂಥ ಮಹಾಕಾವ್ಯಗಳು ಕೊಟ್ಟ ಒಳನೋಟಗಳ ವರ್ತಮಾನವೂ ವಾಸ್ತವವೂ ಆಗಿದೆ.

ನಾಗರೇಖಾ ಗಾಂವಕರ ಅವರ ಈ ಕೃತಿಯಲ್ಲಿ 39 ಲೇಖನಗಳಿವೆ. ಬೇರೆ ಬೇರೆ ಭಾಗಗಳಾಗಿ ಅವರು ಇವನ್ನು ವಿಂಗಡಿಸಿಲ್ಲವಾದರೂ, ಸ್ಥೂಲವಾಗಿ ಇವನ್ನು ಈ ದಿನಮಾನವು ಸ್ತ್ರೀಯನ್ನು ನೋಡುವ, ನೋಡಬಯಸುವ ಬಗೆಯನ್ನು ವಿವರಿಸುವ ಮತ್ತು ವಿಮರ್ಶಿಸುವ ಬರಹಗಳು, ಸಾಹಿತ್ಯದ ನೆಲೆಯಿಂದ ಸ್ತ್ರೀಯನ್ನು ಕಾಣುವ ಬರಹಗಳು, ಹೋರಾಟ ಮತ್ತು ರಾಜಕೀಯ ನೆಲೆಯಲ್ಲಿನ ಗ್ರಹಿಕೆಗಳನ್ನು ಅರಿಯಲೆತ್ನಿಸುವ ಬರಹಗಳೆಂದು ವಿಭಾಗಿಸಬಹುದೆನ್ನಿಸುತ್ತದೆ.

ಹೆಣ್ಣಿನ ಬಗೆಗೆ ಗಂಡು ಬರೆಯುತ್ತ ಬಂದದ್ದನ್ನು ಒರೆಗೆ ಒಡ್ಡುವ ಹಂಬಲ ಒಂದೆಡೆಗಾದರೆ, ಗಂಡು ಬರೆದದ್ದನ್ನು ಮೀರಿ ನೋಡುವ ತವಕ ಮತ್ತು ಮೀರಲಾರದ ಚಡಪಡಿಕೆಯೆರಡೂ ಮುಖಾಮುಖಿಯಾಗುವ ತಲ್ಲಣವು ಇನ್ನೊಂದೆಡೆಯಿಂದ ಈ ಬರಹಗಳನ್ನು ನಿಯಂತ್ರಿಸಿದಂತೆ ಕಂಡರೆ ಅಚ್ಚರಿಯಿಲ್ಲ. ನಾಗರೇಖಾ ಅವರ ನೋಟದಲ್ಲಿ ಇಂತಹ ನಿಯಂತ್ರಣದ ಬಗೆಗಿನ ಗಮನ ಇದ್ದೇ ಇದೆಯಾದರೂ, ಹೆಣ್ಣನ್ನು ನಿಯಂತ್ರಿಸುವ ಈ ಜಗತ್ತಿನ ಚಮತ್ಕಾರ ಮತ್ತು ಸಂಚಿನೆದುರು ಹೆಣ್ಣು ಸೋತುಬಿಡುವ ವಿಪರ್ಯಾಸದ ಭಾಗವಾಗಿಯೂ ಕೆಲವು ಸಲ ಲೇಖಕಿಯ ದನಿ ಕೇಳಿಸುತ್ತದೆ. ಇದನ್ನು ಕೊರತೆಯೆಂದು ನೋಡುವುದಕ್ಕಿಂತ ನನಗೆ ಇದು ಚರಿತ್ರೆಯಲ್ಲೂ ವರ್ತಮಾನದಲ್ಲೂ ಮತ್ತೆ ಮತ್ತೆ ಕಾಡುವ ಸತ್ಯವೆಂದು ಹೇಳಬೇಕೆನ್ನಿಸುತ್ತದೆ.

ಉದಾಹರಣೆಗೆ, ಹೆಣ್ಣಿನ ಉಡುಪು, ಉಡುಗೆಯ ಬಗ್ಗೆ ಗಂಡು ಮಾಡುವ ತೀರಾ ನೀಚ ಮಟ್ಟದ ಟೀಕೆಯನ್ನೇ ಎಷ್ಟೋ ಸಲ ಮಹಿಳೆ ಕೂಡ ಮಾಡುವುದನ್ನು ನಾವು ನೋಡುತ್ತೇವೆ. ಅತ್ಯಾಚಾರಿ ಮಗನೊಬ್ಬನ ಪರವಾಗಿ ತಾಯಿ ಮಾತನಾಡುವಾಗ, ಆಕೆಗೆ ಅತ್ಯಾಚಾರಕ್ಕೆ ಬಲಿಯಾದವಳ ಮತ್ತು ಆಕೆಯ ಕುಟುಂಬದ ಸಂಕಟ ಅರ್ಥವಾಗದೇ ಹೋಗುತ್ತದೆ. ಇಂತಹ ಹಲವು ಜಟಿಲತೆ, ಸಂದಿಗ್ಧತೆಗಳ ನಡುವೆಯೇ ನಾವು ಹೆಣ್ಣಿನ ಅಂತರಂಗವನ್ನು, ಹೆಣ್ಣೆಂಬ ಸತ್ಯವನ್ನು ಕಂಡುಕೊಳ್ಳಬೇಕಿದೆ.

ನಾಗರೇಖಾರ ಬರಹಗಳು ಹೆಚ್ಚು ಗಮನ ಸೆಳೆಯುವುದು ಅವರು ವ್ಯಾಪಕ ಓದಿನ ಅನುನಯದೊಂದಿಗೆ ತಮ್ಮ ಗ್ರಹಿಕೆಗಳನ್ನು ಕೊಡುತ್ತಾರೆಂಬ ಕಾರಣದಿಂದ. ಸ್ವತಃ ಕವಯಿತ್ರಿಯಾಗಿರುವ ಅವರು, ಕನ್ನಡ ಮಾತ್ರವಲ್ಲ ಇಂಗ್ಲಿಷ್ ಸಾಹಿತ್ಯದ ಓದನ್ನು ಮತ್ತು ಚರಿತ್ರೆಯ ವಿಸ್ತಾರದಲ್ಲಿ ಪಡೆಯುವ ನೋಟವನ್ನು ಅನ್ವಯಿಸಿಕೊಳ್ಳುತ್ತ ಚರ್ಚೆಯನ್ನು ಒಂದು ಚೌಕಟ್ಟಿಗೆ ಅಳವಡಿಸುತ್ತಾರೆ. ಮೇಲ್ನೋಟಕ್ಕೇ ಕಾಣುವ ಹಾಗೆ ಇವು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಲೇಖನಗಳು.

ಪುಸ್ತಕ ರೂಪದಲ್ಲಿ ಒಟ್ಟಾಗಿರುವಾಗಲೂ ಇವುಗಳ ದನಿಯಲ್ಲಿ ಒಡಕಿಲ್ಲ, ವಿರೋಧಾಭಾಸವಿಲ್ಲ ಎಂಬುದು ಮುಖ್ಯ. ಹೆಣ್ಣುಭ್ರೂಣಹತ್ಯೆಯಂಥ ಹೀನ ಸಾಮಾಜಿಕ ಗೀಳಿನಿಂದ ಮೊದಲಾಗಿ ಹೆಣ್ಣಿನ ಮೇಲಿನ ನಿರಂತರ ಅತ್ಯಾಚಾರ ಮತ್ತು ಅದನ್ನು ಸಮರ್ಥಿಸಿಕೊಳ್ಳುವ ಅಷ್ಟೇ ಅಸಹ್ಯ ನಡವಳಿಕೆಯವರೆಗೆ, ಲಿಂಗಭೇದದಿಂದ ಮೊದಲಾಗಿ ಸ್ತ್ರೀಯ ವ್ಯಕ್ತಿತ್ವ ವಿಕಸನಕ್ಕಿರುವ ಅಡ್ಡಿಗಳವರೆಗೆ, ಸ್ತ್ರೀಯನ್ನು ಗಂಡು ನೋಡುವ ಬಗೆಯಿಂದ ಮೊದಲಾಗಿ ಗಂಡಿನ ಪ್ರಭಾವದಲ್ಲಿ ಹೆಣ್ಣು ತನ್ನನ್ನು ತಾನು ನೋಡಿಕೊಳ್ಳುವ ರೀತಿಯನ್ನು ರೂಢಿಸಿಕೊಳ್ಳುವಲ್ಲಿಯವರೆಗೆ ಇಲ್ಲಿನ ಬರಹಗಳಲ್ಲಿ ಪರಿಶೀಲನೆಯಿದೆ. ಪ್ರೇಮ, ಕಾಮ, ದಾಂಪತ್ಯ, ಸ್ಥಾನಮಾನ ಎಲ್ಲದರಲ್ಲೂ ಸ್ತ್ರೀ ವಿರುದ್ಧದ ರಾಜಕಾರಣವೊಂದು ವ್ಯವಹರಿಸುವುದನ್ನು ಗುರುತಿಸುವ ಈ ಬರಹಗಳ ಆಳದಲ್ಲಿರುವ ನೋವು, ಶಕ್ತಿಯನ್ನು ಸಂಚಯಿಸುವ ಹಂಬಲದೆಡೆಗೆ ಕಾತರಿಸುತ್ತದೆ.

ಸ್ತ್ರೀಯನ್ನು ಆಳಬಯಸುವ, ಅಂಕೆಯಲ್ಲಿಡಬಯಸುವ ಪುರುಷಾಹಂಕಾರದ ಬಗ್ಗೆ ಮಾತನಾಡುವ ಲೇಖಕಿ, ಅದು ಅಸಹನೆಯಾಗದಂತೆ ವಹಿಸುವ ಎಚ್ಚರದಲ್ಲಿ ಒಂದು ಅಪರೂಪದ ವ್ಯವಧಾನವಿದೆ. ಹೆಣ್ಣಿನ ಚರಿತ್ರೆಯನ್ನು ಗಂಡಿನ ದೃಷ್ಟಿಯಿಂದ ಬಿಡಿಸಿಕೊಂಡು ನೋಡುವ ಮತ್ತು ಮರಳಿ ಕಟ್ಟುವ ಚಲನೆಗೆ ಬೇಕಿರುವುದು ಈ ವ್ಯವಧಾನವೇ. ಹೆಣ್ಣಿನ ಚಾರಿತ್ರ್ಯವಧೆಗೆ ಹವಣಿಸುತ್ತಲೇ ಇರುವ ಕ್ಷುಲ್ಲಕ ರಾಜಕಾರಣವನ್ನು ಎದುರಿಸಲು ಬೇಕಾದ ವ್ಯವಧಾನವೊಂದೇ, ಆಳಬೇಕೆನ್ನುವ ಮನಃಸ್ಥಿತಿಯ ವಿರುದ್ಧದ ಬಲ. ಚರಿತ್ರೆಯನ್ನು ಹೇಗೆಂದರೆ ಹಾಗೆ ಹೊಸಕಿ ಕಟ್ಟುಕಥೆಗಳನ್ನು ಮೆರೆಸಬಲ್ಲವರ ಕಾಲದಲ್ಲಿ, ಚರಿತ್ರೆಯನ್ನು ವರ್ತಮಾನದ ದುರಿತಗಳು ನುಂಗಿಹಾಕದಂತೆ ನೋಡಿಕೊಳ್ಳುತ್ತಲೇ ಹೊಸ ಪರಿಭಾಷೆಯನ್ನು ರೂಢಿಗೆ ತರುವಲ್ಲಿನ ಜರೂರಾಗಿರುವ ಈ ಸಂಯಮದ್ದು ಸಂಕಟಗಳನ್ನು ಅದುಮಿಡುತ್ತಲೇ ಪಲ್ಲವಿಸಬೇಕಾದ ನೆಲೆ.

Similar News