ಬೆಂಗಳೂರು | ಹೈಕೋರ್ಟ್ ಆದೇಶದ ಬೆನ್ನಲ್ಲೇ ಓಲಾ, ಉಬರ್ ಆಟೋ ದರ ನಿಗದಿಗೆ ನ.14ರಂದು ಸಭೆ

Update: 2022-11-13 15:29 GMT

ಬೆಂಗಳೂರು, ನ.13: ಹೈಕೋರ್ಟ್ ಆದೇಶದ ಬೆನ್ನಲ್ಲೇ ಓಲಾ, ಉಬರ್ ಹಾಗೂ ರ್ಯಾಪಿಡೋ ಆಟೋ ರಿಕ್ಷಾ ದರ ನಿಗದಿ ಸಂಬಂಧ ಸಾರಿಗೆ ಇಲಾಖೆಯು ನ.14ರಂದು ಆ್ಯಪ್ ಕಂಪೆನಿಗಳ ಮುಖ್ಯಸ್ಥರು ಹಾಗೂ ಆಟೋ ರಿಕ್ಷಾ ಯೂನಿಯನ್‍ಗಳ ಸಭೆ ಕರೆದಿದೆ.  

ಓಲಾ, ಉಬರ್ ದುಬಾರಿ ದರ ವಸೂಲಿಗೆ ಕಡಿವಾಣ ಹಾಕಿದ್ದ ಸಾರಿಗೆ ಇಲಾಖೆಗೆ ಆ್ಯಪ್ ಆಧಾರಿತ ಆಟೋರಿಕ್ಷಾ ದರಪಟ್ಟಿಯನ್ನು ಸಿದ್ಧಪಡಿಸಿ ನ.7ಕ್ಕೆ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆ ಕಳೆದ ತಿಂಗಳು ನಡೆದ ಸಭೆಗಳಲ್ಲಿ ದರ ನಿಗದಿ ಕುರಿತು ಕಂಪೆನಿಗಳು ಮತ್ತು ಸರಕಾರದ ನಡುವೆ ಒಮ್ಮತ ಮೂಡಿರಲಿಲ್ಲ. 

ಮತ್ತೊಂದೆಡೆ ಸಭೆ ನಡೆಸಿದ್ದ ಸಾರಿಗೆ ಆಯುಕ್ತರೇ ವರ್ಗಾವಣೆಗೊಂಡಿದ್ದರು. ಹೀಗಾಗಿ, ಹೈಕೋರ್ಟ್‍ಗೆ ಗಡುವಿನೊಳಗೆ ದರಪಟ್ಟಿ ಸಲ್ಲಿಸಿರಲಿಲ್ಲ. ಮತ್ತೆ ಹೈಕೋರ್ಟ್ ನಾಲ್ಕು ವಾರ ಕಾಲಾವಕಾಶ ನೀಡಿ ಒಮ್ಮತದ ದರ ನಿಗದಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ನ.14ರಂದು ಎರಡನೆ ಬಾರಿ ಸಭೆ ನಡೆಸುತ್ತಿದ್ದು, ಈ ಬಾರಿ ದರ ನಿಗದಿಯಾಗುವ ಸಾಧ್ಯತೆ ಹೆಚ್ಚಿದೆ.

ಸಭೆಗೆ ಆಗಮಿಸುವಂತೆ ನಗರದಲ್ಲಿ ಆಟೋರಿಕ್ಷಾ ಚಾಲನೆ ಮಾಡುತ್ತಿರುವ ಎಲ್ಲ ಆ್ಯಪ್ ಆಧಾರಿತ ಆಟೋ ರಿಕ್ಷಾ ಸೇವೆ (ಅಗ್ರಿಗೇಟರ್ಸ್) ಕಂಪೆನಿಗಳಿಗೆ, ಸಾರಿಗೆ ಇಲಾಖೆ ಆಯುಕ್ತರು, ಜಂಟಿ ಆಯುಕ್ತರು, ರಿಕ್ಷಾ ಯೂನಿಯನ್‍ಗಳು, ಆಟೋರಿಕ್ಷಾ ಗ್ರಾಹಕರ ಹಿತರಕ್ಷಣಾ ವೇದಿಕೆಗಳಿಗೆ ನೋಟಿಸ್ ನೀಡಲಾಗಿದೆ. ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ.ಎನ್.ವಿ. ಪ್ರಸಾದ್ ಅವರು ನೇತೃತ್ವದಲ್ಲಿ ಸಭೆಯಲ್ಲಿ ಆ್ಯಪ್ ಆಧಾರಿತ ಆಟೋರಿಕ್ಷಾಗಳಿಗೆ ಪ್ರತಿ ಕಿ.ಮೀ.ದರ ನಿಗದಿ, ಹೆಚ್ಚುವರಿ ದರ ಪಡೆದರೆ ವಿಧಿಸುವ ದಂಡ ಕುರಿತು ಚರ್ಚೆಗಳು ನಡೆಯಲಿವೆ. 

Similar News