ನೆಹರೂ ಎಂಬ ರಾಜಕೀಯ ಸಂತ

ಇಂದು ನೆಹರೂ ಜನ್ಮ ದಿನ

Update: 2022-11-14 05:16 GMT

ಭಾರತದ ಚರಿತ್ರೆಯಲ್ಲೇ ಅತ್ಯಂತ ಏಕಾಂಗಿ ನಾಯಕ

 ಭಾರತವನ್ನು ಅರಿತು ಆಳಿದ ಕೊನೆಯ ಪ್ರಧಾನ ಮಂತ್ರಿ ನೆಹರೂ ಅವರೇ ಇರಬೇಕು. ಆ ನಂತರ ಪ್ರಧಾನಿಯಾದ ಬಹುತೇಕ ನಾಯಕರುಗಳಿಗೆ ಚುನಾವಣೆ ಗೆಲ್ಲಲು ತಿಳಿದಿತ್ತು. ಆದರೆ ಭಾರತ ತಿಳಿದಿತ್ತು ಎನ್ನಲಾಗದು. ತಿಳಿದಿದ್ದರೂ, ಅದು ನೆಹರೂ ಅವರಿಗೆ ತಿಳಿದಷ್ಟು ಆಳವಾಗಿ ತಿಳಿದಿತ್ತು ಎನ್ನಲಾಗದು. ಭಾರತವನ್ನು ಅರಿಯದೆ ಚುನಾವಣೆ ಗೆಲ್ಲಲು ಮಾತ್ರ ತಿಳಿದಿರುವ ನಾಯಕತ್ವವೇ ಪ್ರಾಧಾನ್ಯ ಪಡೆಯುತ್ತಿರುವ ಈ ಕಾಲಕ್ಕೆ ನೆಹರೂ ಅನಗತ್ಯ ಟೀಕೆಗಳಿಗೆ ಗುರಿಯಾಗುತ್ತಾರೆ. ಯಾಕೆಂದರೆ, ಭಾರತ ಅರ್ಥ ಆಗದವರಿಗೆ ನೆಹರೂ ಎಂದೂ ಅರ್ಥವಾಗಲಾರರು.

ನೆಹರೂ ಅರ್ಥವಾಗದವರಿಗೆ ಭಾರತ ಎಂದೂ ಅರ್ಥ ಆಗಲಾರದು. ಸ್ವತಂತ್ರ ಭಾರತಕ್ಕೆ ನೆಹರೂ ಅವರ ಕೊಡುಗೆಗಳ ಬಗ್ಗೆ ಹೇಳಲು ಸರಳ ಗಣಿತದ ಸೂತ್ರವೊಂದನ್ನು ಬಳಸಿಕೊಳ್ಳಬಹುದೋ ಏನೋ. ಈ ಸೂತ್ರವನ್ನು ಹಿಂದೊಮ್ಮೆ ಮಾಜಿ ಪ್ರಧಾನ ಮಂತ್ರಿ ಪಿ.ವಿ.ನರಸಿಂಹ ರಾವ್ ತನ್ನ ಕೊಡುಗೆಗಳ ಬಗ್ಗೆ ಪತ್ರಕರ್ತ ಶೇಖರ್ ಗುಪ್ತ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಾಗ ಬಳಸಿಕೊಂಡಿದ್ದರು.

ಯಾವುದೇ ನಾಯಕ ಒಂದರಷ್ಟು ಇದ್ದದ್ದನ್ನು ತನ್ನ ಕಾಲದಲ್ಲಿ ಎರಡರಷ್ಟಾಗಿ ಏರಿಸಿದರೆ ಸಾಧಿಸಿದ ಬೆಳವಣಿಗೆ ಶೇಕಡಾ 100 ಆಗುತ್ತದೆ. ಆದರೆ ಯಾವುದೇ ನಾಯಕ ಹಿಂದೆ ಏನೂ ಇಲ್ಲದ ಸ್ಥಿತಿಯಿಂದ, ಅಂದರೆ ಹಿಂದೆ ಸೊನ್ನೆ ಇದ್ದದ್ದನ್ನು ತನ್ನ ಕಾಲದಲ್ಲಿ ಕಡೇಪಕ್ಷ ಒಂದರಷ್ಟಾದರೂ ಏರಿಸಿದರೆ ಆ ಕೊಡುಗೆ ಎಷ್ಟು? ಗಣಿತದ ಪ್ರಕಾರ ಶೇಕಡಾವಾರು ಲೆಕ್ಕ ಹಾಕಿದರೆ ಸಿಗುವ ಉತ್ತರ infinity ಅಥವಾ ಅನಂತ. ಅಂದರೆ ಅದು ಲೆಕ್ಕ ಹಾಕಲು ಸಾಧ್ಯವಾಗದಷ್ಟು ಅಂತ. ನೆಹರೂ ನಂತರ ಬಂದ ಎಲ್ಲಾ ನಾಯಕರುಗಳ ಅಥವಾ ಪ್ರಧಾನ ಮಂತ್ರಿಗಳ ಕೊಡುಗೆಯನ್ನು ಹಾಗೋ ಹೀಗೋ ಲೆಕ್ಕ ಹಾಕಬಹುದು. ಆದರೆ ನೆಹರೂ ಅವರ ಕೊಡುಗೆಗಳನ್ನು ಲೆಕ್ಕ ಹಾಕಲು ಬರುವುದಿಲ್ಲ. ಯಾಕೆಂದರೆ ಅವರು ಸೊನ್ನೆಯಿಂದ ಪ್ರಾರಂಭಿಸಿದವರು.

ನಂತರ ಬಂದವರೆಲ್ಲಾ ಬೆಳೆಸಿದ್ದು ನೆಹರೂ ಈ ದೇಶಕ್ಕೆ ಹಾಕಿದ ಅಡಿಗಲ್ಲಿನ ಮೇಲೆ. ಹೀಗೆಲ್ಲಾ ಹೇಳುವಾಗ ಇದೇನೋ ವೈಭವೀಕರಣ ಅಂತ ಅನ್ನಿಸಬಹುದು. ಇಲ್ಲಿಯೇ ಇರುವುದು ನೆಹರೂ ಅವರ ವಿಶೇಷ. ಯಾಕೆಂದರೆ, ಅವರ ಬಗ್ಗೆ ಕೇಳಿಬರುವ ಯಾವುದೇ ಆರೋಪಗಳಿಗೆ ಒಂದು ಸಣ್ಣ ಸ್ಪಷ್ಟೀಕರಣ ಕೊಟ್ಟರೂ ಸಾಕು ಅದು ವೈಭವೀಕರಣದಂತೆಯೇ ಕಾಣುತ್ತದೆ. ನೆಹರೂ ಅಡಿಪಾಯವನ್ನು ‘ಆ ರೀತಿ’ ಹಾಕುವುದರ ಬದಲು ‘ಈ ರೀತಿ’ ಹಾಕದೆ ಹೋದದ್ದು ಯಾಕೆ ಅಂತ ಈ ಕಾಲದಲ್ಲಿ ನಿಂತು ಟೀಕಿಸುವವರು ಹಲವರಿದ್ದಾರೆ.

ಒಂದು ವೇಳೆ ನೆಹರೂ ’ಈ ರೀತಿ’ ಅಡಿಪಾಯ ಹಾಕಿದ್ದರೆ ಅವರು ’ಆ ರೀತಿ’ ಯಾಕೆ ಮಾಡಿಲ್ಲ ಅಂತ ಕೇಳುವವರು ಈಗ ಇರುತ್ತಿದ್ದರು. ಇದು ಶೂನ್ಯದಿಂದ ಪ್ರಾರಂಭಿಸುವವರು ಎದುರಿಸಬೇಕಾದ ಸವಾಲು. ಏನೇ ಇರಲಿ, ನೆಹರೂ ಶೂನ್ಯದಿಂದ ಪ್ರಾರಂಭಿಸಿ ದೇಶ ಕಟ್ಟಿದವರು ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಬ್ರಿಟಿಷರೇನೂ ಈ ದೇಶವನ್ನು ನಂದನವನದಂತೆ ಬಿಟ್ಟುಹೋಗಲಿಲ್ಲ. ಬ್ರಿಟಿಷರು ಬಿಟ್ಟುಹೋದ ಸ್ಥಿತಿಯಿಂದ ಭಾರತವನ್ನು ತನ್ನ 17 ವರ್ಷಗಳ ಆಡಳಿತದ ಅವಧಿಯಲ್ಲಿ ಜಗತ್ತು ಗಮನಿಸುವ ಮಟ್ಟಿಗೆ ತಂದು ನಿಲ್ಲಿಸಿ 1964ರಲ್ಲಿ ಸಂದುಹೋದ ನೆಹರೂ ಅವರಿಗೆ ಯಾರೂ ಹೋಲಿಕೆಯಿಲ್ಲ. ಯಾಕೆಂದರೆ, ಇನ್ಯಾರೂ ಶೂನ್ಯದಿಂದ ಪ್ರಾರಂಭಿಸಿ ದೇಶ ಕಟ್ಟುವ ಅವಕಾಶವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.

ನೆಹರೂ ಹುಟ್ಟಿದ್ದು 1889ರಲ್ಲಿ. ವಿಶೇಷವೆಂದರೆ, ಸ್ವಾತಂತ್ರ ಭಾರತದ ಭವಿಷ್ಯವನ್ನು ದೊಡ್ಡ ಮಟ್ಟಿಗೆ ರೂಪಿಸಿದ ಮಹಾನ್ ನಾಯಕರುಗಳೆಲ್ಲರೂ ಹುಟ್ಟಿದ್ದು 1860-1900ರ ಮಧ್ಯೆ. ಅದು ಭಾರತದ ಚರಿತ್ರೆಯ ರಮ್ಯ ಕಾಲವೇನೂ ಅಲ್ಲ. ಆದರೆ ಈ ನಾಯಕರುಗಳೆಲ್ಲಾ ಆ ಕಾಲಘಟ್ಟದಲ್ಲಿ ಹುಟ್ಟಿದರು ಎನ್ನುವ ಕಾರಣಕ್ಕೆ ಅದು ನಿಜಕ್ಕೂ ರೋಚಕ ಕಾಲ. ಮುಖ್ಯವಾಗಿ, 1869ರಲ್ಲಿ ಮಹಾತ್ಮಾ ಗಾಂಧಿ ಜನಿಸುತ್ತಾರೆ. ಇಪ್ಪತ್ತು ವರ್ಷಗಳ ನಂತರ ನೆಹರೂ ಜನಿಸುತ್ತಾರೆ. ಅದಾಗಿ ಎರಡು ವರ್ಷಗಳ ನಂತರ 1891ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಜನಿಸುತ್ತಾರೆ. ಹಾಗಾಗಿ ನೆಹರೂ ಅಂಬೇಡ್ಕರ್‌ಗಿಂತ ಎರಡು ವರ್ಷ ಹಿರಿಯರು, ಗಾಂಧೀಜಿಯವರಿಗಿಂತ ಎರಡು ದಶಕಗಳಷ್ಟು ಕಿರಿಯರು. ನೆಹರೂ, ಗಾಂಧೀಜಿ ಮತ್ತು ಅಂಬೇಡ್ಕರ್ ಅವರಿಗೆ ಮಧ್ಯದಲ್ಲಿ ನಿಲ್ಲುವುದು ಕೇವಲ ವಯಸ್ಸಿನ ವಿಚಾರವಾಗಿ ಮಾತ್ರ ಅಲ್ಲ. ವಿಚಾರ, ನೀತಿ-ನಿಲುವು ಮತ್ತು ಆಡಳಿತ ಎಲ್ಲದರಲ್ಲೂ ನೆಹರೂ ಮಧ್ಯದ ಸ್ಥಾನದಲ್ಲೇ ಕಂಡುಬರುತ್ತಾರೆ.

ಅಂಬೇಡ್ಕರ್ ಮತ್ತು ಗಾಂಧೀಜಿಯವರ ಮಧ್ಯೆ ತೀವ್ರ ಭಿನ್ನಾಭಿಪ್ರಾಯಗಳಿದ್ದವು. ಆದರೆ, ಗಾಂಧೀಜಿಯ ಮಾನಸಪುತ್ರನಂತಿದ್ದ ನೆಹರೂ ಅವರು ದೇಶ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಗಾಂಧೀಜಿಯವರಿಗಿಂತ ಹೆಚ್ಚು ಹತ್ತಿರವಿದ್ದದ್ದು ಅಂಬೇಡ್ಕರ್ ಅವರಿಗೆ. ಸ್ವಾತಂತ್ರ ಸಂಗ್ರಾಮದಲ್ಲಿ ಗಾಂಧೀಜಿ ಯುವ ಸಮುದಾಯಕ್ಕೆ ತೀರಾ ಸಂಪ್ರದಾಯವಾದಿ ಮೃದು ಧೋರಣೆಯ ನಾಯಕರಾಗಿ ಕಂಡುಬರುತ್ತಾರೆ. ಆಗ ಬಿಸಿ ರಕ್ತದ, ಉಗ್ರ ನಿಲುವಿನ ಯುವ ಸಮುದಾಯವನ್ನು ಸ್ವಾತಂತ್ರ ಸಂಗ್ರಾಮದೆಡೆಗೆ ಸೆಳೆದದ್ದು ನೆಹರೂ. ಸ್ವಾತಂತ್ರ ಬಂದ ನಂತರ ನೆಹರೂ ಮಧ್ಯಮ ನಿಲುವು ಅರ್ಥ ನೀತಿಯಲ್ಲಿ, ವಿದೇಶಿ ಧೋರಣೆಯಲ್ಲಿ, ಕೇಂದ್ರ ರಾಜ್ಯ ಸಂಬಂಧಗಳಲ್ಲಿ, ಸೆಕ್ಯುಲರಿಸಂನ ಆಚರಣೆ ಇತ್ಯಾದಿಗಳಲ್ಲೆಲ್ಲ ಕಾಣಿಸುತ್ತದೆ.

ಮಧ್ಯೆ ನಿಂತವರತ್ತ ಸಾಮಾನ್ಯವಾಗಿ ಆ ಕಡೆ ಈ ಕಡೆ ಎರಡೂ ತುದಿಗಳಲ್ಲಿ ನಿಂತವರು ತುದಿಗಾಲಲ್ಲಿ ನಿಂತು ಕಲ್ಲೆಸೆಯುತ್ತಿರುತ್ತಾರೆ. ನೆಹರೂ ಅಂತ ಕಲ್ಲೆಸೆತಗಳಿಗೆ ತಮ್ಮ ಜೀವಿತಾವಧಿಯಲ್ಲಿ ಮತ್ತು ಮರಣಾನಂತರವೂ ವಿಪರೀತವಾಗಿ ತುತ್ತಾಗಿದ್ದಾರೆ. ಮಧ್ಯೆ ನಿಂತವರು ಏಕಾಂಗಿಗಳಾಗಿಬಿಡುತ್ತಾರೆ. ಆ ಏಕಾಂಗಿತನದಲ್ಲೂ ತನ್ನ ನಿಲುವಿಗೆ ಬದ್ಧರಾಗಿ ಉಳಿಯಲು ಒಂದು ಸಂತತ್ವ ಬೇಕು. ಒಮ್ಮೆ ಇಂದಿರಾ ಗಾಂಧಿ ಹೇಳಿದ್ದರಂತೆ: ‘ಎಲ್ಲರೂ ಮಹಾತ್ಮಾ ಗಾಂಧಿಯವರನ್ನು ರಾಜಕೀಯದ ಸಂತ ಎಂದು ಕರೆಯುತ್ತಾರೆ. ಆದರೆ, ನಿಜವಾದ ಸಂತ ನನ್ನ ತಂದೆ ನೆಹರೂ’ ಅಂತ.

ಅದು ಕೇವಲ ತಂದೆಯ ಕುರಿತಾದ ಅಭಿಮಾನದ ಮಾತಲ್ಲ, ಅದರಲ್ಲಿ ಸತ್ಯವಿದೆ ಅಂತ ಈಗ ಅನ್ನಿಸುತ್ತದೆ. ಯಾಕೆಂದರೆ, ಗಾಂಧಿ ಅಂದಿಗೂ, ಇಂದಿಗೂ ಏಕಾಂಗಿಯಾದರೂ ಗಾಂಧಿಯನ್ನು ಸಮರ್ಥಿಸಲು, ಗಾಂಧಿಯ ಬೆನ್ನಿಗೆ ನಿಲ್ಲಲು ಒಂದು ಅನಾಮಿಕ ಜನ ಸಮುದಾಯವಾದರೂ ಇದೆ. ಆದರೆ, ನೆಹರೂ ಅವರನ್ನು ಸಮರ್ಥಿಸಲು ಅವರ ಪಕ್ಷದವರು ಬಿಡಿ, ಕೆಲವೊಮ್ಮೆ ಅವರ ಕುಟುಂಬದವರೂ ಮುಂದೆ ಬರುವುದು ಕಾಣಿಸುತ್ತಿಲ್ಲ. ಹಾಗಾಗಿ ನೆಹರೂರವರಷ್ಟು ಏಕಾಂಗಿ ನಾಯಕ ಇನ್ಯಾರೂ ಕಾಣಿಸುತ್ತಿಲ್ಲ. ಹಾಗೆಯೇ ಭಾರತದ ಚರಿತ್ರೆಯಲ್ಲೇ ನೆಹರೂ ಅವರಷ್ಟು ಕೃತಘ್ನತೆಯ ಟೀಕೆಗೆ ಗುರಿಯಾದ ಇನ್ನೊಬ್ಬ ನಾಯಕನಿಲ್ಲ.

ಗಾಂಧೀಜಿಯವರ ಜತೆಗೆ ನೆಹರೂ ಸಂಬಂಧ ಅತ್ಯಂತ ಸಂಕೀರ್ಣವಾದದ್ದು. ನೆಹರೂ ಮತ್ತು ಗಾಂಧೀಜಿಯವರ ಮಧ್ಯೆ ಕೂಡ ವಿಪರೀತ ಭಿನ್ನಾಭಿಪ್ರಾಯಗಳಿದ್ದವು. ಅವರು ಒಬ್ಬರನ್ನೊಬ್ಬರು ವಿರೋಧಿಸುತ್ತಲೇ ಮೆಚ್ಚಿಕೊಂಡರು, ಮೆಚ್ಚಿಕೊಳ್ಳುತ್ತಲೇ ವಿರೋಧಿಸು ತ್ತಿದ್ದರು. ಈರ್ವರೂ ಬೇರೆ ಬೇರೆ ಲೋಕದೃಷ್ಟಿಯವರು. ಆದರೆ ಗಾಂಧೀಜಿಯ ಲೋಕದೃಷ್ಟಿ ದೇಶಕ್ಕೆ ಎಷ್ಟು ಅಗತ್ಯ ಇತ್ತು ಅಂತ ನೆಹರೂಗೆ ತಿಳಿದಿತ್ತು. ನೆಹರೂ ಅವರ ಲೋಕದೃಷ್ಟಿ ಭಾರತಕ್ಕೆ ಎಷ್ಟು ಅಗತ್ಯವಿತ್ತು ಎಂದು ಗಾಂಧೀಜಿಯವರಿಗೆ ತಿಳಿದಿತ್ತು. ಯಾಕೆಂದರೆ ಅವರೀರ್ವರಿಗೂ ಭಾರತ ತಿಳಿದಿತ್ತು.

ಭಾರತವನ್ನು ಅರಿತು ಭಾರತವನ್ನು ಆಳಿದ ಕೊನೆಯ ಪ್ರಧಾನ ಮಂತ್ರಿ ನೆಹರೂ ಅವರೇ ಇರಬೇಕು. ಆ ನಂತರ ಪ್ರಧಾನಿಯಾದ ಬಹುತೇಕ ನಾಯಕರುಗಳಿಗೆ ಚುನಾವಣೆ ಗೆಲ್ಲಲು ತಿಳಿದಿತ್ತು. ಆದರೆ ಭಾರತ ತಿಳಿದಿತ್ತು ಎನ್ನಲಾಗದು. ತಿಳಿದಿದ್ದರೂ, ಅದು ನೆಹರೂ ಅವರಿಗೆ ತಿಳಿದಷ್ಟು ಆಳವಾಗಿ ತಿಳಿದಿತ್ತು ಎನ್ನಲಾಗದು. ನೆಹರೂ ಭಾರತವನ್ನು ಅರಿಯುವ ಮೂಲಕ ಚುನಾವಣೆ ಗೆಲ್ಲುತ್ತಿದ್ದರು. ಆ ಕಾರಣಕ್ಕೆ ಅವರು ವಿಶಿಷ್ಟ ನಾಯಕ. ಭಾರತವನ್ನು ಅರಿಯದೆ ಚುನಾವಣೆ ಗೆಲ್ಲಲು ಮಾತ್ರ ತಿಳಿದಿರುವ ನಾಯಕತ್ವವೇ ಪ್ರಾಧಾನ್ಯ ಪಡೆಯುತ್ತಿರುವ ಈ ಕಾಲಕ್ಕೆ ನೆಹರೂ ಅನಗತ್ಯ ಟೀಕೆಗಳಿಗೆ ಗುರಿಯಾಗುತ್ತಾರೆ. ಯಾಕೆಂದರೆ, ಭಾರತ ಅರ್ಥ ಆಗದವರಿಗೆ ನೆಹರೂ ಎಂದೂ ಅರ್ಥವಾಗಲಾರರು. ನೆಹರೂ ಅರ್ಥವಾಗದವರಿಗೆ ಭಾರತ ಎಂದೂ ಅರ್ಥ ಆಗಲಾರದು.

Similar News