ಡಿಪೋಗಳಲ್ಲಿ ಕೊಳೆಯುತ್ತಿರುವ ನಾಟಾ, ಅರಣ್ಯ ಉತ್ಪನ್ನ: ಸರಕಾರಕ್ಕೆ ಬಹುಕೋಟಿ ರೂ. ಆದಾಯ ನಷ್ಟ

Update: 2022-11-15 03:42 GMT

ಬೆಂಗಳೂರು: ಸರಕಾರಿ ನಾಟಾ ಸಂಗ್ರಹಾಲಯಗಳಲ್ಲಿ ನಾಟಾ ಮತ್ತು ಇತರ ಅರಣ್ಯ ಉತ್ಪನ್ನಗಳನ್ನು ಬಹಿರಂಗ ಹರಾಜು ಮೂಲಕ ವಿಲೇ ಮಾಡಲು ಅನುಮತಿ ಸಿಗದ ಕಾರಣ ಸರಕಾರಿ ನಾಟಾ ಸಂಗ್ರಹಾಲಯಗಳಲ್ಲಿ ನಾಟ, ಅರಣ್ಯ ಉತ್ಪನ್ನಗಳು ಹಾಳಾಗುತ್ತಿದೆ. ಅಲ್ಲದೇ ಇದರಿಂದ ಸರಕಾರಕ್ಕೆ  ಬಹುಕೋಟಿ ರೂ. ಆದಾಯವು ನಷ್ಟವುಂಟಾಗುತ್ತಿದೆ.

ಬಹಿರಂಗ ಹರಾಜಿಗೆ ಅವಕಾಶ ಮಾಡಿ ಕೊಡಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ೨ ವರ್ಷಗಳಿಂದಲೂ ಪ್ರಸ್ತಾವ ಸಲ್ಲಿಸುತ್ತಿದ್ದರೂ ಸರಕಾರ ಮಾತ್ರ ಇದುವರೆಗೂ ಅನುಮತಿ ನೀಡುತ್ತಿಲ್ಲ. ಈ ಸಂಬಂಧ ೨೦೨೨ರ ನ.೭ರಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು) ಅರಣ್ಯ ಪರಿಸರ ಜೀವಿಶಾಸ್ತ್ರ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ''the-file.in''ಗೆ
ಲಭ್ಯವಾಗಿದೆ.

ನಾಟಾ ಮತ್ತು ಅರಣ್ಯ ಉತ್ಪನ್ನಗಳನ್ನು ೨೦೧೭ರ ನವೆಂಬರ್ ೩೦ರಿಂದ ಇ-ಹರಾಜು ಮೂಲಕ ವಿಲೇವಾರಿ ಮಾಡುತ್ತಿದೆ. ಆದರೆ ಇ-ಹರಾಜಿನಲ್ಲಿ ಸರಕಾರಿ ನಾಟಾ ಸಂಗ್ರಹಾಲಯಗಳಲ್ಲಿನ ಅರಣ್ಯ ಉತ್ಪನ್ನಗಳನ್ನು ವಿಲೇ ಮಾಡುವಲ್ಲಿ ನಿರೀಕ್ಷಿತ ಪ್ರಗತಿ ಕಂಡು ಬಂದಿಲ್ಲ. ಅಲ್ಲದೆ ಹರಾಜಾಗದೇ ಉಳಿದಿರುವ ಅರಣ್ಯ ಉತ್ಪನ್ನಗಳ ದಾಸ್ತಾನುಗಳು ಮುಂದಿನ ದಿನಗಳಲ್ಲಿ ಇ-ಹರಾಜಿನಲ್ಲಿ ವಿಲೇವಾರಿಯಾಗುವುದು ಕಷ್ಟಸಾಧ್ಯ ಎಂಬ ಅಂಶವನ್ನೂ ಪತ್ರದಲ್ಲಿ ಉಲ್ಲೇಖಿಸಿದೆ.

ಧಾರವಾಡ ವಿಭಾಗಕ್ಕೆ ಸಂಬಂಧಿಸಿದಂತೆ ಹರಾಜಾಗದೇ ಉಳಿದಿರುವ ದಾಸ್ತಾನುಗಳನ್ನು ಮತ್ತೊಂದು ಬಾರಿ ಇ-ಹರಾಜಿಗೆ ಇಟ್ಟು ಅವುಗಳು ಹರಾಜಾಗದೇ ಇದ್ದಲ್ಲಿ ಈ ದಾಸ್ತಾನುಗಳು ಬಿಸಿಲು, ಮಳೆ, ಗಾಳಿಗೆ ಸಿಲುಕಿ ಹಾಳಾಗುತ್ತಿವೆ. ಮಂಗಳೂರು ವಿಭಾಗದ ನೆಟ್ಟಣ ಕೇಂದ್ರೀಯ ನಾಟಾ ಸಂಗ್ರಹಾಲಯದಲ್ಲಿ ಕೆಲವು ನಾಟಾಗಳು ಕುಂಬಾಗಿ ಮಣ್ಣಾಗಿವೆ.
ಹೀಗಾಗಿ ಈ ನಾಟಾಗಳು ಗುಣಮಟ್ಟ ಕಳೆದುಕೊಂಡಿವೆ. ಇಂತಹ ಉತ್ಪನ್ನಗಳನ್ನು ಇ-ಹರಾಜು ಹಾಕಿದರೆ ಬಿಡ್‌ದಾರರು ಭಾಗವಹಿಸಲು ಆಸಕ್ತಿ ವಹಿಸುವುದಿಲ್ಲ ಎಂದು ಪತ್ರದಲ್ಲಿ ವಿವರಿಸಲಾಗಿದೆ. ‘ಶಿವಮೊಗ್ಗ ವಿಭಾಗ ವ್ಯಾಪ್ತಿಯ ಅಲ್ಕೋಳದಲ್ಲಿರುವ  ಸರಕಾರಿ ನಾಟಾ ಸಂಗ್ರಹಾಲಯದಲ್ಲಿ ಅರಣ್ಯ ಮೊಕದ್ದಮೆಗಳಿಗೆ ಸಂಬಂಧಿಸಿದ ನಾಟಾ ಮತ್ತು ಅರಣ್ಯ ಉತ್ಪನ್ನಗಳು ಕ್ಷೀಣಿಸುತ್ತಿವೆ. ಇದು ಇನ್ನಷ್ಟು ಹಾಳಾಗುವ ಮುನ್ನ ಸಾರ್ವಜನಿವಾಗಿ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲು ಸರಕಾರ ಅನುಮತಿ ನೀಡಬೇಕು ಎಂದು ಅರಣ್ಯಾಧಿಕಾರಿಗಳು ಪದೇಪದೇ ಪ್ರಸ್ತಾವಗಳನ್ನು ಸಲ್ಲಿಸುತ್ತಿದ್ದರೂ ಸರಕಾರ ಈವರೆಗೂ ಪರಿಗಣಿಸುತ್ತಿಲ್ಲ ಎಂಬುದು ಪತ್ರಗಳಿಂದ ತಿಳಿದು ಬಂದಿದೆ.

ಅರಣ್ಯ ಉತ್ಪನ್ನಗಳನ್ನು ಹಾಗೆಯೇ ಬಿಟ್ಟರೆ ಬಿಸಲು, ಗಾಳಿ, ಮಳೆಗೆ ಸಿಲುಕಿ ಹಾಳಾಗುವ ಸಂಭವ ಇರುವುದರಿಂದ ಹಾಗೂ ಸರಕಾರಕ್ಕೆ ಹೆಚ್ಷಿನ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಇ-ಹರಾಜಿನಲ್ಲಿ ಕನಿಷ್ಠ ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಹರಾಜಾಗದೇ ಉಳಿದಿರುವ ಲಾಟುಗಳನ್ನು ವಿಲೇವಾರಿಗೊಳಿಸಲು ಒಂದು ಬಾರಿ ಅನ್ವಯವಾಗುವಂತೆ ಹಾಗೂ ಇಲಾಖೆಗೆ ಕೋಟ್ಯಂತರ ರೂ. ಆದಾಯ ನಷ್ಟವಾಗುವುದನ್ನು ತಪ್ಪಿಸಬೇಕು ಎಂದು ಸರಕಾರಕ್ಕೆ ಪತ್ರ ಬರೆಯಲಾಗಿತ್ತು.

ಇ-ಹರಾಜಿನಲ್ಲಿ ವಿಲೇವಾರಿಯಾಗದೇ ಇರುವ ಲಾಟುಗಳಲ್ಲಿ ಮೆದು ಜಾತಿಯ ಅರಣ್ಯ ಉತ್ಪನ್ನಗಳಲ್ಲದೇ ಇತರ ಜಾತಿಯ ಅರಣ್ಯ ಉತ್ಪನ್ನಗಳೂ ಇವೆ. ಅವುಗಳನ್ನು ಹಾಗೆಯೇ ಇಟ್ಟಲ್ಲಿ ಕ್ರಮೇಣವಾಗಿ ಹಾಳಾಗುವ ಸಾಧ್ಯತೆ ಇದೆ. ಹೀಗಾಗಿ ಇಂತಹ ದಾಸ್ತಾನುಗಳನ್ನು ಬಹಿರಂಗ ಹರಾಜಿಗೆ ಒಳಪಡಿಸಿದಲ್ಲಿ ತಕ್ಷಣವೇ ವಿಲೇವಾರಿಯಾಗುವ ಸಾಧ್ಯತೆ ಇವೆ. ಇದಕ್ಕೆ ಅನುಮತಿ ನೀಡಿದರೆ ಸರಕಾರಕ್ಕೆ ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ ಎಂಬ ಅಂಶವನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ನಾಟಾ ಮತ್ತು ಇತರ ಅರಣ್ಯ ಉತ್ಪನ್ನಗಳ ಇ-ಹರಾಜಿನಲ್ಲಿ ಎಲ್ಲ ಸಣ್ಣ ಮತ್ತು ದೊಡ್ಡ ಬಿಡ್‌ದಾರರು ಭಾಗವಹಿಸುತ್ತಿಲ್ಲ. ಕೆಲವು ಬಿಡ್‌ದಾರರ ಬಳಿ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಸೌಲಭ್ಯವಿಲ್ಲ. ಅಥವಾ ಬಳಸಲು ಅವರಿಗೆ ಜ್ಞಾನವಿಲ್ಲ. ಹೀಗಾಗಿ ಇ-ಹರಾಜಿನಲ್ಲಿ ಭಾಗವಹಿಸುತ್ತಿಲ್ಲ ಎಂದು ಪತ್ರದಲ್ಲಿ ಸರಕಾರದ ಗಮನಕ್ಕೆ ತರಲಾಗಿದೆ.

 ೨೦೨೦-೨೧ರಲ್ಲಿ ೮೭,೦೫೮ ದಾಸ್ತಾನುಗಳು, ೨೦೨೧-೨೨ರಲ್ಲಿ ೭೧,೧೪೧೪, ೨೦೨೨-೨೩ರ ಸೆಪ್ಟಂಬರ್ ಅಂತ್ಯಕ್ಕೆ ೩೦,೫೦೨ ಸೇರಿ ಕಳೆದ ಮೂರು ಸಾಲಿನಲ್ಲಿ ಸರಾಸರಿ ೬೨,೯೦೧ ದಾಸ್ತಾನುಗಳು ಇ-ಹರಾಜಿನಲ್ಲಿ  ವಿಲೇ ಮಾಡಲು ಇಡಲಾಗಿದೆ. ಅದೇ ರೀತಿ ೨೦೨೧-೨೧ರಲ್ಲಿ ೫೦,೪೭೮, ೨೦೨೧-೨೨ರಲ್ಲಿ ೪೩,೩೩೭, ೨೦೨೨-೨೩ರ ಸೆಪ್ಟಂಬರ್ ಅಂತ್ಯಕ್ಕೆ ೨೩,೧೭೩ ದಾಸ್ತಾನುಗಳು ವಿಲೇಯಾಗಿವೆ.

Similar News