ಚೀನಾದಿಂದ ಹೆಚ್ಚುತ್ತಲೇ ಇರುವ ಆಮದು ಮರ್ಮ ಅಡಗಿರುವುದೆಲ್ಲಿ?

Update: 2022-11-15 08:07 GMT

ಭಾರತ ಮತ್ತು ಚೀನಾ ಗಡಿಯಲ್ಲಿನ ಉದ್ವಿಗ್ನತೆ ಹಿನ್ನೆಲೆಯಲ್ಲಿ ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ದೊಡ್ಡ ಮಟ್ಟದ ನಿರ್ಧಾರವೇನೋ ಆಗಿತ್ತು. ಆದರೆ ಅಲ್ಲಿಂದ ಆಮದು ಪ್ರಕ್ರಿಯೆ ನಿಂತಿಲ್ಲ, ಪ್ರಮಾಣವೂ ಕಡಿಮೆಯಾಗಿಲ್ಲ. ಈ ವರ್ಷ ಆಗಿರುವ ಆಮದು ಎಷ್ಟು? ಏನಿದರ ಕಾರಣಗಳು? ಚೀನಿ ವಸ್ತುಗಳ ಆಮದು ನಿಲ್ಲಿಸಲು ಶುರುವಾಗಿದ್ದ ಆಂದೋಲನ ಏನಾಯಿತು? ಭಾರತದ ಎದುರು ಇರುವ ದಾರಿಗಳೇನು?

ಗಡಿಯಲ್ಲಿನ ಚೀನಾ ತಗಾದೆ, ನಮ್ಮ ಯೋಧರೊಡನೆ ಅದು ನಡೆಸುತ್ತಿರುವ ಸಂಘರ್ಷಗಳು ಎರಡೂ ದೇಶಗಳ ನಡುವಿನ ರಾಜಕೀಯ ಸಂಬಂಧ ಹದಗೆಡಲು ಕಾರಣವಾಗಿವೆ. ಸಹಜವಾಗಿಯೇ ಇದು ವ್ಯಾಪಾರ ಮತ್ತು ವಾಣಿಜ್ಯ ಸಂಬಂಧಗಳ ಮೇಲೂ ಪರಿಣಾಮ ಬೀರುತ್ತದೆ. ಪದೇ ಪದೇ ಗಡಿಯಲ್ಲಿ ತಕರಾರೆತ್ತುವ ಚೀನಾಕ್ಕೆ ಬುದ್ಧಿ ಕಲಿಸಲು ಮತ್ತು ಸ್ವದೇಶಿ ವಸ್ತುಗಳಿಗೆ ಉತ್ತೇಜನ ನೀಡಲು ಎರಡು ವರ್ಷಗಳ ಹಿಂದೆಯೇ ಯೋಚಿಸಲಾಗಿತ್ತು. ಚೀನಾದಿಂದ ಅಮದಾಗುವ ವಸ್ತುಗಳು ಕಳಪೆ ಎಂಬ ಗುಲ್ಲೂ ಎದ್ದಿತ್ತು. ಚೀನಾ ವಸ್ತುಗಳ ಆಮದು ಕಡಿತಕ್ಕಾಗಿ ಗಂಭೀರವಾಗಿಯೇ ಯೋಚಿಸಿದ್ದ ಸರಕಾರ, ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಸುಂಕ ಹೆಚ್ಚಿಸಿ ತೀರ್ಮಾನ ತೆಗೆದುಕೊಂಡಿತ್ತು.

ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ, 3 ಸಾವಿರ ಚೀನಿ ವಸ್ತುಗಳ ಪಟ್ಟಿಯನ್ನೂ ಮಾಡಿತ್ತು. ಈ 3 ಸಾವಿರ ವಸ್ತುಗಳನ್ನು ಚೀನಾದಿಂದ ತರಿಸಬೇಕಿಲ್ಲ, ನಮ್ಮಲ್ಲಿಯೇ ತಯಾರು ಮಾಡಬಹುದು ಎಂಬುದು ಅಂದು ವ್ಯಕ್ತವಾಗಿದ್ದ ಅಭಿಪ್ರಾಯವಾಗಿತ್ತು. 40 ಸಾವಿರ ವ್ಯಾಪಾರಿ ಸಂಘಗಳಿರುವ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದಲ್ಲಿ 7 ಕೋಟಿಗೂ ಹೆಚ್ಚು ವ್ಯಾಪಾರಿಗಳು ಸದಸ್ಯತ್ವ ಹೊಂದಿದ್ದಾರೆ. ಇವರೆಲ್ಲ ಸೇರಿ ಭಾರತದ ವಸ್ತು ನಮ್ಮ ಹೆಮ್ಮೆ ಎಂಬ ಹೆಸರಿನಲ್ಲಿ ಶುರು ಮಾಡಿದ್ದ ಅಭಿಯಾನ ಏನಾಯಿತು?

ಈ ಪ್ರಶ್ನೆ ಏಕೆಂದರೆ, ಚೀನಾದ 3 ಸಾವಿರ ವಸ್ತುಗಳನ್ನು ಬಹಿಷ್ಕರಿಸುವ ಮಾತು ಹಾಗಿರಲಿ, ಚೀನಾದಿಂದ ಆಮದು ಪ್ರಮಾಣ ಹೆಚ್ಚುತ್ತಲೇ ಇದೆ. ಇದೇ ವೇಳೆ ಚೀನಾಕ್ಕೆ ನಮ್ಮಿಂದ ಆಗುತ್ತಿದ್ದ ರಫ್ತು ಪ್ರಮಾಣ ಅಗಾಧವಾಗಿ ಕುಸಿದಿದೆ.

2022ರ ಮೊದಲ ಮೂರು ತ್ರೈಮಾಸಿಕಗಳಲ್ಲಿ ಅಂದರೆ ಒಂಭತ್ತು ತಿಂಗಳುಗಳಲ್ಲಿ ಚೀನಾದಿಂದ ಆಮದಾಗಿರುವ ವಸ್ತುಗಳ ಮೊತ್ತ 8,900 ಕೋಟಿ ಡಾಲರ್ ದಾಟಿದೆ. ವರ್ಷಾಂತ್ಯಕ್ಕೆ ಈ ಮೊತ್ತ 10 ಸಾವಿರ ಕೋಟಿ ಡಾಲರ್ ಆದೀತೆಂದು ಅಂದಾಜಿಸಲಾಗಿದೆ. 2021ನೇ ಸಾಲಿನ ಇದೇ ಅವಧಿಯಲ್ಲಿನ ಆಮದು ಪ್ರಮಾಣಕ್ಕೆ ಹೋಲಿಸಿದರೆ ಇದು ಶೇ. 44ರಷ್ಟು ಏರಿಕೆ. 2021ರ ಸೆಪ್ಟಂಬರ್‌ವರೆಗೆ 6,200 ಕೋಟಿ ಡಾಲರ್ ಮೌಲ್ಯದ ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗಿತ್ತು.ಸರಕಾರವೇ ಬಿಡುಗಡೆ ಮಾಡಿರುವ ಅಂಕಿ ಅಂಶದಲ್ಲಿರುವ ಆಮದು ಪ್ರಮಾಣದ ಮಾಹಿತಿಯಿದು ಮತ್ತು ಕಳೆದ 10 ವರ್ಷಗಳಲ್ಲೇ ಇದು ಅತ್ಯಂತ ಹೆಚ್ಚಿನ ಪ್ರಮಾಣದ ಆಮದು.

ಇನ್ನೂ ಗಮನಿಸಬೇಕಾದ ಒಂದು ಸಂಗತಿ ಯೆಂದರೆ, ಭಾರತದ ಒಟ್ಟಾರೆ ಆಮದುಗಳ ಬೆಳವಣಿಗೆಗಿಂತ ಚೀನಾ ಸರಕುಗಳ ಆಮದುಗಳ ಬೆಳವಣಿಗೆ ಗಣನೀಯವಾಗಿ ಹೆಚ್ಚಿದೆ. 2022ರ ಜನವರಿಯಿಂದ ಸೆಪ್ಟಂಬರ್‌ವರೆಗಿನ ಒಟ್ಟಾರೆ ಆಮದು ಮೊತ್ತ 55,100 ಕೋಟಿ ಡಾಲರ್ ಇತ್ತು. 2021ರ ಒಟ್ಟಾರೆ ಆಮದಿನ ಮೊತ್ತ 40,600 ಕೋಟಿ ಡಾಲರ್. ಅಂದರೆ ಒಟ್ಟಾರೆ ಆಮದಿನ ಏರಿಕೆ ಪ್ರಮಾಣ ಒಂದು ವರ್ಷದಲ್ಲಿ ಶೇ.35ರಷ್ಟು. ಆದರೆ ಚೀನಾದಿಂದ ಆಮದು ಪ್ರಮಾಣದಲ್ಲಿನ ಏರಿಕೆ ಒಂದು ವರ್ಷದಲ್ಲಿ ಶೇ.44ರಷ್ಟು. ಭಾರತದ ಆಮದಿನ ಮೇಲೆ ಚೀನಾ ಹೇಗೆ ಪ್ರಾಬಲ್ಯ ಸಾಧಿಸುತ್ತಿದೆ ಎಂಬುದಕ್ಕೆ ಇದು ಸಾಕ್ಷಿ.

ಚೀನಾದಿಂದ ಭಾರತದ ಆಮದು ಪ್ರಮಾಣ ಅತಿ ವೇಗವಾಗಿ ಏರುತ್ತಿದೆ. ಅಂದರೆ ಭಾರತದ ಒಟ್ಟಾರೆ ಆಮದು ಪ್ರಮಾಣದಲ್ಲಿ ಚೀನಾದ ಪಾಲು ಹೆಚ್ಚುತ್ತಲೇ ಇದೆ. 2021ರ ಜನವರಿಯಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ದೇಶದ ಒಟ್ಟಾರೆ ಆಮದಿನ ಶೇ.15.3 ಇದ್ದ ಚೀನಾ ಪಾಲು 2022ರ ಜನವರಿಯಿಂದ ಸೆಪ್ಟಂಬರ್‌ವರೆಗಿನ ಅವಧಿಯಲ್ಲಿ ಶೇ.16.2ಕ್ಕೆ ಏರಿಕೆಯಾಗಿದೆ.

ಯುನೈಟೆಡ್ ನೇಷನ್ಸ್ ಕಾಮ್ಟ್ರೇಡ್ ಅಂಕಿಆಂಶಗಳ ಪ್ರಕಾರ, ಈ ಕ್ಯಾಪಿಟಲ್ ಅಥವಾ ಕೈಗಾರಿಕಾ ಸರಕುಗಳ ಆಮದಿನ ಕಾರಣದಿಂದಾಗಿಯೇ ಚೀನಾದಿಂದ ಭಾರತದ ಆಮದು ಗಾತ್ರ ಹೆಚ್ಚಿರುವುದು. ಕಳೆದ 10 ವರ್ಷಗಳಲ್ಲಿ ಅಂದರೆ 2011ರಿಂದ 2021ರವರೆಗಿನ ಅವಧಿಯಲ್ಲಿ ಚೀನಾದಿಂದ ಭಾರತ ಆಮದು ಮಾಡಿಕೊಳ್ಳುತ್ತಿರುವ ಕ್ಯಾಪಿಟಲ್ ಸರಕುಗಳ ಪ್ರಮಾಣದಲ್ಲಿ ಪ್ರತಿವರ್ಷವೂ ಸರಾಸರಿ ಶೇ. 4ರಷ್ಟು ಏರಿಕೆಯಾಗುತ್ತಲೇ ಇದೆ.

ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಪ್ರಕಟಿಸಿರುವ 2022ರ ಆಗಸ್ಟ್ವರೆಗಿನ ಆಮದು ವಸ್ತುಗಳ ಪ್ರಕಾರಗಳ ಕುರಿತ ಡಾಟಾ ಪ್ರಕಾರ ಕೂಡ ಆಮದಾದ ಎಲ್ಲಾ ಬಗೆಯ ವಸ್ತುಗಳಲ್ಲಿ ಚೀನಾದಿಂದ ಆಮದಾದ ಕಬ್ಬಿಣ ಮತ್ತು ಉಕ್ಕು ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. 2021ರ ಜನವರಿಯಿಂದ ಆಗಸ್ಟ್ ವರೆಗಿನ ಅವಧಿ ಮತ್ತು 2022ರ ಜನವರಿಯಿಂದ ಆಗಸ್ಟ್ವರೆಗಿನ ಅವಧಿಯಲ್ಲಿ ಚೀನಾದಿಂದ ಆಮದಾದ ಕಬ್ಬಿಣ ಮತ್ತು ಉಕ್ಕಿನ ಪ್ರಮಾಣ ಗಮನಿಸಿದರೆ ಕಳೆದ ವರ್ಷಕ್ಕಿಂತ ಈ ವರ್ಷ ಶೇ. 54 ಏರಿಕೆ ಕಂಡುಬರುತ್ತದೆ. ಹಾಗೆಯೇ, ಚೀನಾದಿಂದ ಆಮದಾಗುವ ಪ್ಲಾಸ್ಟಿಕ್ ಮತ್ತು ಪ್ಲಾಸ್ಟಿಕ್ ವಸ್ತುಗಳ ಪ್ರಮಾಣದಲ್ಲಿ ಕೂಡ 2022ರಲ್ಲಿ ಗಣನೀಯ ಏರಿಕೆಯಾಗಿದೆ.

ಇಲೆಕ್ಟ್ರಾನಿಕ್ ವಸ್ತುಗಳು, ಯಂತ್ರಗಳು, ಪ್ಲಾಸ್ಟಿಕ್ ಮತ್ತು ಆರ್ಗ್ಯಾನಿಕ್ ಕೆಮಿಕಲ್‌ಗಳು 2022ರಲ್ಲಿ ಚೀನಾದಿಂದ ಅಮದಾದ ವಸ್ತುಗಳಲ್ಲಿ ದೊಡ್ಡ ಪ್ರಮಾಣದಲ್ಲಿವೆ. ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕಲ್ ಯಂತ್ರಗಳು ಮತ್ತವುಗಳ ಭಾಗಗಳು ಚೀನಾದಿಂದ ಭಾರತಕ್ಕೆ ಆಮದಾಗುವ ಸರಕುಗಳ ಒಟ್ಟು ಮೊತ್ತದ ಮೂರನೇ ಒಂದು ಪಾಲಿನಷ್ಟಿವೆ.

ಚೀನಾ ವಸ್ತುಗಳ ಬಹಿಷ್ಕಾರ ಎಂಬುದರ ವಾಸ್ತವ ಏನೆಂದು ಈಗ ಗಮನಿಸೋಣ. ಗ್ರಾಹಕ ಸರಕುಗಳು ಅಂದರೆ ಗ್ರಾಹಕರು ನೇರವಾಗಿ ಬಳಸುವ ವಸ್ತುಗಳಾದ ಆಹಾರ ಪದಾರ್ಥಗಳು, ಉಡುಪುಗಳು, ವಾಹನಗಳು, ಪಾದರಕ್ಷೆಗಳು, ಮೊಬೈಲ್‌ಗಳು ಮೊದಲಾದವುಗಳ ಬಹಿಷ್ಕಾರಕ್ಕೆ ಮತ್ತೆ ಮತ್ತೆ ಕರೆ ಕೊಡುವುದು ನಡೆಯುತ್ತಲೇ ಇರುತ್ತದೆ. ಗಡಿಯಲ್ಲಿನ ಉದ್ವಿಗ್ನತೆ ಬಳಿಕವಂತೂ ಚೀನಾ ವಸ್ತುಗಳ ಬಹಿಷ್ಕಾರದ ಮಾತು ಹೆಚ್ಚಾಗಿಯೇ ಕೇಳಿಬಂದಿತ್ತು. ಆದರೆ, ಅಂಕಿ ಅಂಶಗಳ ಪ್ರಕಾರ ಚೀನಾದಿಂದ ಭಾರತಕ್ಕೆ ಆಮದಾಗುವ ಗ್ರಾಹಕ ಸರಕುಗಳ ಪ್ರಮಾಣ ಯಾವತ್ತೂ ಕಡಿಮೆಯೇ. ಹಾಗಾಗಿಯೇ ಚೀನಾ ವಸ್ತುಗಳ ಬಹಿಷ್ಕಾರ ಎಂಬುದು ಚೀನಾದಿಂದ ಆಮದು ಪ್ರಮಾಣದ ಮೇಲೆ ಅಂತಹ ಪರಿಣಾಮವನ್ನೇನೂ ಬೀರುವುದಿಲ್ಲ.

ಕಾಮ್ಟ್ರೇಡ್ ಅಂಕಿಅಂಶಗಳ ಪ್ರಕಾರ, 2021ರಲ್ಲಿ ಚೀನಾದಿಂದ ಭಾರತ ಆಮದು ಮಾಡಿಕೊಂಡಿರುವ ಗ್ರಾಹಕ ಸರಕುಗಳ ಮೊತ್ತ 284 ಕೋಟಿ ಡಾಲರ್. ಅಂದರೆ ಚೀನಾದಿಂದ ಆಮದಾಗುವ ಸರಕುಗಳ ಒಟ್ಟು ಮೊತ್ತದ ಶೇ. 10ಕ್ಕಿಂತಲೂ ಕಡಿಮೆ. 2011ರಿಂದ 2021ರವರೆಗಿನ ಅವಧಿಯಲ್ಲಿ ಚೀನಾದಿಂದ ಆಮದಾಗಿರುವ ಗ್ರಾಹಕ ಸರಕುಗಳ ಪ್ರಮಾಣದಲ್ಲಿ ಶೇ.1ರಷ್ಟು ಕುಸಿತ ಕಾಣುತ್ತಲೇ ಇದೆ. ಆದರೆ ಕ್ಯಾಪಿಟಲ್ ಸರಕುಗಳ ಆಮದು ಪ್ರಮಾಣದಲ್ಲಿ ಮಾತ್ರ ಶೇ.3ರಿಂದ ಶೇ.4ರಷ್ಟು ಸರಾಸರಿ ವಾರ್ಷಿಕ ಏರಿಕೆ ಆಗುತ್ತಲೇ ಇದೆ.

ಭಾರತೀಯ ಗ್ರಾಹಕರ ಕಾರಣದಿಂದಾಗಿಯೇ ಚೀನಾದಿಂದ ಆಮದು ಹೆಚ್ಚುತ್ತದೆ ಎಂಬುದು ನಮ್ಮಲ್ಲಿನ ಒಂದು ಸಾಮಾನ್ಯ ಕಲ್ಪನೆ. ಆದರೆ ಅಂಕಿಅಂಶಗಳು ಬೇರೆಯೇ ಚಿತ್ರವನ್ನು ಕೊಡುತ್ತವೆ. ನಿಜವಾಗಿಯೂ ಚೀನಿ ಆಮದನ್ನು ದೊಡ್ಡ ಪ್ರಮಾಣದಲ್ಲಿ ಅವಲಂಬಿಸಿರುವವರು ಭಾರತದ ಜನಸಾಮಾನ್ಯರಲ್ಲ, ಬದಲಾಗಿ ಇಲ್ಲಿನ ಉತ್ಪಾದಕರು. ಒಂದು ಮಾಹಿತಿಯ ಪ್ರಕಾರ, 2021ರಲ್ಲಿ ಭಾರತ ಆಮದು ಮಾಡಿಕೊಂಡ ಒಟ್ಟು ಕ್ಯಾಪಿಟಲ್ ಸರಕುಗಳಲ್ಲಿ ಶೇ.40ರಷ್ಟು ಬಂದಿದ್ದು ಚೀನಾದಿಂದ.

ನಮ್ಮ ಕೈಗಾರಿಕೆಗಳು ಚೀನಿ ಕ್ಯಾಪಿಟಲ್ ಸರಕುಗಳನ್ನು ಏಕೆ ಅವಲಂಬಿಸಬೇಕಾಗಿದೆ? ಪರಿಣಿತರು ಹೇಳುವ ಪ್ರಕಾರ, ಚೀನಿ ಕ್ಯಾಪಿಟಲ್ ಸರಕುಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಪರ್ಧಾತ್ಮಕವಾಗಿವೆ ಮತ್ತು ಬೆಲೆ ಮತ್ತು ಅವುಗಳನ್ನು ತರಿಸಿಕೊಳ್ಳುವ ವೆಚ್ಚ ಎರಡೂ ಭಾರತೀಯ ಉತ್ಪಾದಕರಿಗೆ ಅನುಕೂಲಕರವಾಗಿದೆ. ಅವರು ಬಯಸುವ ಬೆಲೆಗೇ ಚೀನಿ ವಸ್ತುಗಳು ಸಿಗುತ್ತವೆಂಬುದೇ ಅವುಗಳಿಗೆ ಬೇಡಿಕೆ ಹೆಚ್ಚಲು ಕಾರಣ. ಸ್ಪರ್ಧಾತ್ಮಕ ಬೆಲೆಯಲ್ಲಿ ಸರಕು ಪೂರೈಸಲು ಚೀನಾ ಆರ್ಥಿಕತೆಯಲ್ಲಿ ಅವಕಾಶವಿದೆ. ಜರ್ಮನಿ ಅಥವಾ ಮತ್ತಿತರ ಕೈಗಾರಿಕಾ ಸರಕು ಪರಿಣಿತ ದೇಶಗಳಿಂದ ತರಿಸಿಕೊಳ್ಳಬಹುದಾದರೂ ಚೀನಿ ಸರಕುಗಳ ಬಳಕೆಯು ಉತ್ಪಾದನೆಯ ವೆಚ್ಚವನ್ನು ಕಡಿಮೆ ಮಾಡುತ್ತದೆ. ಎರಡು ವರ್ಷಗಳ ಕೆಳಗೆ ಚೀನಾ ವಸ್ತುಗಳ ಬಹಿಷ್ಕಾರದ ಮಾತು ದೊಡ್ಡದಾಗಿ ಕೇಳಿಬಂದಾಗ, ಉದ್ಯಮ ವಲಯದಿಂದಲೇ ತೀವ್ರ ವಿರೋಧ ವ್ಯಕ್ತವಾಗಿತ್ತು ಎಂಬುದನ್ನು ಮರೆಯುವಂತಿಲ್ಲ.

ಇವೆಲ್ಲದರ ನಡುವೆಯೇ ಪರಿಣಿತರು ಮತ್ತೊಂದು ವಿಚಾರವನ್ನು ಎತ್ತುತ್ತಾರೆ. ಚೀನಾದಿಂದ ಕ್ಯಾಪಿಟಲ್ ಸರಕುಗಳ ಆಮದಿನಿಂದ ನಿಜವಾಗಿಯೂ ನಮ್ಮ ಕೈಗಾರಿಕೆಗಳಿಗೆ ಪ್ರಯೋಜನವಾಗುತ್ತಿದೆಯೇ ಎಂಬುದರ ಬಗ್ಗೆ ಸಮರ್ಪಕ ಪರಿಶೀಲನೆಯಾಗಬೇಕೆಂಬುದು ಅವರ ಆಗ್ರಹ. ಭಾರತಕ್ಕೆ ಬರುವ ಚೀನಿ ಕ್ಯಾಪಿಟಲ್ ಸರಕುಗಳಿಂದ ಎಷ್ಟು ಮೌಲ್ಯವರ್ಧನೆಯಾಗುತ್ತದೆ ಎಂಬುದರ ತನಿಖೆ, ಅದರ ಬಗೆಗೆ ನಿಖರವಾದ ತಿಳುವಳಿಕೆ ಬೇಕಿದೆ ಎನ್ನುತ್ತಾರೆ ತಜ್ಞರು. ಇದರ ಬಗ್ಗೆ ಸರಕಾರ, ಉದ್ಯಮ ವಲಯ ಗಂಭೀರವಾಗಿ ಯೋಚಿಸಬೇಕಾಗಿದೆ. ಅದನ್ನು ಬಿಟ್ಟು ಸುಮ್ಮನೆ ಚೀನಾ ಉತ್ಪನ್ನಗಳ ಬಹಿಷ್ಕಾರದ ಭಾವನಾತ್ಮಕ ಮಾತುಗಳಿಂದ ಯಾವುದೇ ಪ್ರಯೋಜನವಿಲ್ಲ.

ಕ್ಯಾಪಿಟಲ್ ಸರಕುಗಳ ಆಮದು 


ಇಲೆಕ್ಟ್ರಾನಿಕ್ - ಇಲೆಕ್ಟ್ರಿಕ್ ಯಂತ್ರಗಳು - 2021ರಲ್ಲಿ 1,600 ಕೋಟಿ ಡಾಲರ್.
                                                         - 2022ರಲ್ಲಿ 2,200 ಕೋಟಿ ಡಾಲರ್.
ಯಂತ್ರಗಳು ಮತ್ತು ಬಿಡಿಭಾಗಗಳು      - 2021ರಲ್ಲಿ 1,150 ಕೋಟಿ ಡಾಲರ್.
                                                        - 2022ರಲ್ಲಿ 1,460 ಕೋಟಿ ಡಾಲರ್.
ಆರ್ಗ್ಯಾನಿಕ್ ಕೆಮಿಕಲ್ಸ್                     - 2021ರಲ್ಲಿ 750 ಕೋಟಿ ಡಾಲರ್.
                                                       - 2022ರಲ್ಲಿ 980 ಕೋಟಿ ಡಾಲರ್.
ಪ್ಲಾಸ್ಟಿಕ್ ಮತ್ತು ಪ್ಲಾಸ್ಟಿಕ್ ವಸ್ತುಗಳು - 2021ರಲ್ಲಿ 270 ಕೋಟಿ ಡಾಲರ್.
                                                       - 2022ರಲ್ಲಿ 400 ಕೋಟಿ ಡಾಲರ್.
ಕಬ್ಬಿಣ ಮತ್ತು ಉಕ್ಕು                        - 2021ರಲ್ಲಿ 70 ಕೋಟಿ ಡಾಲರ್.
                                                       - 2022ರಲ್ಲಿ 110 ಕೋಟಿ ಡಾಲರ್.
 

10 ವರ್ಷಗಳಲ್ಲಿನ ಆಮದು
(ಜನವರಿಯಿಂದ ಸೆಪ್ಟಂಬರ್)
2012 - 3,900 ಕೋಟಿ ಡಾಲರ್
2013 - 3,800 ಕೋಟಿ ಡಾಲರ್
2014 - 4,200 ಕೋಟಿ ಡಾಲರ್
2015 - 4,500 ಕೋಟಿ ಡಾಲರ್
2016 - 4,400 ಕೋಟಿ ಡಾಲರ್
2017 - 5,300 ಕೋಟಿ ಡಾಲರ್
2018 - 5,600 ಕೋಟಿ ಡಾಲರ್
2019 - 5,200 ಕೋಟಿ ಡಾಲರ್
2020 - 4,000 ಕೋಟಿ ಡಾಲರ್
2021 - 6,200 ಕೋಟಿ ಡಾಲರ್
2022 - 8,900 ಕೋಟಿ ಡಾಲರ್
 

Similar News