ನಾಲ್ಕೇ ಕ್ಲಾಸು ಓದಿದವನು ಉಳಿಸಿಹೋದ ಪಾಠಗಳು

Update: 2022-11-15 06:06 GMT

‘‘ನಾಲ್ಕೇ ಕ್ಲಾಸು ಓದಿದವನು’’ ತನ್ನ ಅಪ್ಪನ ಬಗ್ಗೆ ಕವಿ ಉಮೇಶ ನಾಯ್ಕ ಬರೆದ ಪುಸ್ತಕ. ತುಂಬು ಕುಟುಂಬದಲ್ಲಿನ ಮಗನೊಬ್ಬ, ಅತ್ಯಂತ ಸರಳವಾಗಿ ಬದುಕಿದ ಮತ್ತು ಆ ಸರಳತೆಯಲ್ಲಿಯೇ ಹೋರಾಟದ ಬಹುದೊಡ್ಡ ಹಾದಿಯನ್ನು ಮುಗಿಯದಷ್ಟು ಕನಸುಗಳನ್ನು ಕೂಡಿಸಿಕೊಳ್ಳುತ್ತ ನಡೆದ ತನ್ನ ಅಪ್ಪನ ಬಗ್ಗೆ ಅಭಿಮಾನ ಮತ್ತು ನೋವುಗಳೆರಡನ್ನೂ ಇಟ್ಟುಕೊಂಡೇ ಹೇಳಿರುವ ಕಥನ ಇದು. ಇಲ್ಲಿ ಅಭಿಮಾನ ಅಪ್ಪನ ದೃಢತೆಯ ಬಗೆಗಾದರೆ, ನೋವು, ಅಂಥ ಅಪ್ಪನ ದಾರಿಯನ್ನು ತುಳಿಯಲಾರದ ತನ್ನಂಥವನ ಅಸಹಾಯಕತೆ ಮತ್ತು ಸ್ವತಃ ಅಪ್ಪ ಕೂಡ ತನ್ನ ಕನಸಿನ ಆದರ್ಶ ನಿಧಾನವಾಗಿ ಅಪಮೌಲ್ಯಕ್ಕೊಳಗಾಗುತ್ತಿದೆ ಎಂಬುದನ್ನು ಅಸಹಾಯಕನಾಗಿ ನುಂಗಿಕೊಳ್ಳುತ್ತ ಕೊನೆಯ ದಿನಗಳನ್ನು ಕಳೆಯಬೇಕಾಯಿತು ಎಂಬುದರ ಕುರಿತದ್ದು.

ಈ ಇಡೀ ಕಥನವನ್ನು ಉಮೇಶ ಒಬ್ಬ ಮಗನಾಗಿ ಹೇಳಿದ್ದರೂ, ಅಪ್ಪನ ಬಗ್ಗೆಯಾಗಲೀ ಕುಟುಂಬದ ಬಗ್ಗೆಯಾಗಲೀ ಮಕ್ಕಳಾದ ತಮ್ಮ ಬಗ್ಗೆಯಾಗಲೀ ಎಲ್ಲಾದರೂ ಹೇಳಿದ್ದು ಹೆಚ್ಚಾದೀತೇನೋ ಎಂಬ ಅತ್ಯಂತ ಸಂಕೋಚ ತುಂಬಿದ ಅನುಮಾನವಿಟ್ಟುಕೊಂಡೇ, ಎಲ್ಲೂ ಹೇಳಿದ್ದು ಹೆಚ್ಚಾಗಕೂಡದು ಎಂಬ ನಿಷ್ಠುರತೆಯಿಂದಲೇ ಹೇಳಿರುವ ರೀತಿ ಗಮನಕ್ಕೆ ಬರುತ್ತದೆ. ಒಳಗೆ ಪ್ರಾಮಾಣಿಕವಾಗಿರುವ ಮನಸ್ಸಿಗೆ ಮಾತ್ರವೇ ಸಾಧ್ಯವಾಗುವ ಮಾನಸಿಕ ದೂರ ಇದು. ಹೀಗೆ ಒಳಗಿನವನಾಗಿದ್ದೂ ದೂರ ನಿಂತು ಕಥನಿಸುವುದು, ಆತ್ಮಕಥನಗಳಲ್ಲಿ ಲೋಲಾಡುವವರ ಕಪಟತನದ ವಿರುದ್ಧ ಕಟುವಾದ ನಿಲುವುಳ್ಳ ಗಟ್ಟಿತನ. ಈ ಕಾರಣದಿಂದಾಗಿಯೇ, ಬದುಕಿನುದ್ದಕ್ಕೂ ಪ್ರಾಮಾಣಿಕರಾಗಿಯೇ ಮನಃಸಾಕ್ಷಿಯ ಮಾತು ಕೇಳಿಸಿಕೊಳ್ಳುತ್ತಲೇ ಬದುಕಿದ್ದ ಕುಸ್ಲಪ್ಪ ನಾಯ್ಕರ ಕುರಿತ ಈ ಕಥನ ಪ್ರಾಮಾಣಿಕವಾಗಿ ಮೂಡಿದೆ.

‘‘ಕೇವಲ ಭಾಷಣಕ್ಕಾಗಿ, ಬರಹಕ್ಕಾಗಿ, ಆ ಮೂಲಕ ಹೆಸರಿಗಾಗಿಯೇ ಬದುಕುವ ಢೋಂಗಿಗಳ ನಡುವೆ ನನ್ನ ತಂದೆ ಕುಸ್ಲಪ್ಪಹೊನ್ನಪ್ಪನಾಯ್ಕ ತನ್ನ ಮಾತು ಮತ್ತು ಬದುಕಿನ ನಡುವೆ ತೀರಾ ವ್ಯತ್ಯಾಸವಿಲ್ಲದಂತೆ, ವೈಚಾರಿಕತೆಯ ಪ್ರಖರ ಬೆಳಕಿನಂತೆ ಬದುಕಿದವರು. ಖಂಡಿತವಾಗಿಯೂ ಯಾವ ಶಿಕ್ಷಕರಲ್ಲೂ ಕಾಣದ, ಬಹಳಷ್ಟು ಕವಿಗಳು, ಸಾಹಿತಿಗಳಲ್ಲೂ ಸಿಗದ ಯೋಚನೆ-ವೈಚಾರಿಕತೆಗಳ ಜೊತೆಗೆ ನಂಬಿದ ತತ್ವಗಳಲ್ಲಿ ಬದ್ಧತೆ ಇದ್ದುದನ್ನು ಅವರಲ್ಲಿ ಕಂಡಿದ್ದೇನೆ’’ ಎಂದು ಕುಸ್ಲಪ್ಪನಾಯ್ಕರ ವ್ಯಕ್ತಿತ್ವದ ಬಗ್ಗೆ ಹೇಳುವ ಉಮೇಶ, ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ಅವರ ಶಕ್ತಿಯ ವಿವಿಧ ಮುಖಗಳ ಅನಾವರಣ ಮಾಡಿರುವುದು ಈ ಕಥನಕ್ಕೊಂದು ಸೊಗಸನ್ನು ಕೊಟ್ಟಿದೆ. ಕುಸ್ಲಪ್ಪನಾಯಕರ ಹೋರಾಟ, ಅವರು ನಂಬಿದ ರಾಜಕೀಯ ಆದರ್ಶಗಳು, ಅವರ ಸಂಪ್ರದಾಯ ವಿರೋಧಿ ನಿಲುವು, ಅವರ ಕ್ರಿಶ್ಚಿಯನ್ ಮತ್ತು ಮುಸ್ಲಿಮ್ ಮಿತ್ರರ ಜೊತೆಗಿನ ಒಡನಾಟ, ಅವರ ಕೃಷಿ ಬದುಕು, ಅವರೊಳಗಿನ ಕಲಾವಿದ ಇಂತಹ ಹಲವು ವಿಚಾರಗಳು ಇಲ್ಲಿ ದಾಖಲಾಗಿವೆ. ಅವರ ಕಡುಕಷ್ಟದ ದಿನಗಳ ಬಗ್ಗೆ ಬರೆಯುವಾಗಲೂ ಉಮೇಶ ತೋರಿರುವುದು ಎಷ್ಟು ಬೇಕೋ ಅಷ್ಟನ್ನೇ ಹೇಳುವ ಸಂಯಮ. ಬಹುಶಃ ಅದು ಕುಸ್ಲಪ್ಪನಾಯ್ಕರ ಬದುಕಿನಿಂದಲೇ ಸಿಕ್ಕ ಪಾಠವೂ ಹೌದು.

ಹೇಗೆ ಕನಸುಗಾರನೊಬ್ಬನ ಬದುಕಿನಲ್ಲಿ ಅವನ ಕೈಮೀರಿದ ಸಂದರ್ಭವು ಆಟವಾಡುತ್ತದೆ ಎಂಬುದಕ್ಕೂ ಕುಸ್ಲಪ್ಪನಾಯ್ಕರ ಬದುಕಿನ ಕಥೆ ಸಾಕ್ಷಿಯಾಗುತ್ತದೆ. ಎಲ್ಲ ಆಡಂಬರಗಳಿಂದ ದೂರವಿದ್ದು ಬದುಕಬೇಕು, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು, ಯಾವುದೇ ಮೌಢ್ಯ ಆಚರಣೆಗಳಿಗೆ ತನ್ನ ಮನೆ ನೆಲೆಯಾಗಬಾರದು ಎಂದೆಲ್ಲ ಹಂಬಲಿಸಿದ್ದ ಕುಸ್ಲಪ್ಪನಾಯ್ಕರು ಗ್ಯಾಂಗ್ರಿನ್ ಕಾರಣದಿಂದಾಗಿ ತಮ್ಮ ಕಡೆಯ ದಿನಗಳಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡು ಬಳಲಿಹೋಗುತ್ತಾರೆ. ಸ್ವಾಭಿಮಾನ, ಸ್ವಾವಲಂಬನೆ, ಕ್ರಾಂತಿಕಾರಿ ಆಲೋಚನೆಗಳು ಎಲ್ಲವೂ ಕೂಡಿಕೊಂಡಿದ್ದ ಅವರೊಳಗಿನ ನೋವು ಮತ್ತು ಸಂಕಟ ಕಣ್ಣಂಚಿಗೆ ಬಂದು ನಿಂತುಬಿಟ್ಟಿರುತ್ತದೆ. ತಾವು ನಂಬಿದ್ದ ಆದರ್ಶಗಳು ಅನಾಥವಾದಾವೆಂಬ ಕೊರಗೊಂದೇ ಕಡೆಯವರೆಗೂ ಕಾಡುತ್ತದೆ. ಇವೆೆಲ್ಲವನ್ನೂ ಕಟ್ಟಿಕೊಡುವ ಉಮೇಶ, ‘ವಿಚಿತ್ರವೆಂದರೆ ಅಪ್ಪನ ವಿಚಾರಗಳನ್ನು ಒಪ್ಪಿಕೊಳ್ಳುತ್ತಲೇ, ಯಾವುದನ್ನೂ ಪಾಲಿಸದೆ ಅವನ ಆಶಯಕ್ಕೆ ವಿರುದ್ಧದ ಪಾತ್ರಧಾರಿಗಳಾದವರು ನಾವು’ ಎಂದು ವಿಮರ್ಶಿಸಿಕೊಳ್ಳುವುದು ಕಠೋರ ಸತ್ಯವೊಂದನ್ನು ಬಿಚ್ಚಿಡುತ್ತದೆ.

ಕುಸ್ಲಪ್ಪನಾಯ್ಕರ ಬದುಕಿನ ಈ ಕಥನವನ್ನು ಗ್ರಾಮಭಾರತದ ಸತ್ಯ ಮತ್ತು ಸತ್ವದ ಮಾದರಿಯಾಗಿ ನೋಡಬೇಕೆನ್ನಿಸುತ್ತದೆ. ಕೂಡಿ ಬಾಳುವ, ಕೊಡಕೊಳ್ಳುವ ಅನನ್ಯವೆನ್ನಿಸುವಂಥ ಭಾವನಾತ್ಮಕ ಮತ್ತು ಆರ್ಥಿಕ ತತ್ವದ ಬುನಾದಿಯಿದೆ ಗ್ರಾಮಭಾರತಕ್ಕೆ. ಮನಸ್ಸುಗಳಿಗೆ ವಿಷವುಣಿಸುವ ಹುನ್ನಾರಗಳೇನೂ ಅಲ್ಲಿ ಇಲ್ಲವೆಂದಲ್ಲ. ಆದರೆ ಅದನ್ನು ಮೀರಿದ ಆತ್ಮಬಲದ ಸೆಲೆಯಿರುವುದು ಆರ್ಥಿಕ ವ್ಯಾಮೋಹವನ್ನೂ ಮೀರಿ ಮಾನವೀಯವಾದುದರ ಕಡೆಗಿನ ಸೆಳೆತವನ್ನು ತನ್ನೊಳಗಿನ ಮಿಡಿತವಾಗಿ ಗ್ರಾಮಭಾರತ ಇವತ್ತಿಗೂ ಹೊಂದಿದೆ ಎಂಬುದರಲ್ಲಿ.

ಕುಸ್ಲಪ್ಪನಾಯ್ಕರಂಥ ವ್ಯಕ್ತಿತ್ವ ಗ್ರಾಮಭಾರತದ ಚೈತನ್ಯ ಎಲ್ಲಿ ಅಡಗಿದೆ ಎಂಬುದನ್ನು ನಿಶ್ಚಿತವಾಗಿ ಹೇಳಬಲ್ಲ ತಾಕತ್ತುಳ್ಳದ್ದು. ಆ ಚೈತನ್ಯದ ಕಾರಣದಿಂದಾಗಿಯೇ ಅಸಹಾಯಕತೆಯಲ್ಲೂ ಆದರ್ಶದ ಕೈಮೇಲಾಗುವುದೆಂಬುದರ ನಿರೂಪವಾಗಿ ‘ನಾಲ್ಕೇ ಕ್ಲಾಸು ಓದಿದವನು’ ಎದೆಗೆ ಹತ್ತಿರವಾಗುತ್ತದೆ. ಕುಸ್ಲಪ್ಪನಾಯ್ಕರಂಥವರು ಹೇಳಿಕೊಟ್ಟ ಪಾಠಗಳಲ್ಲಿ ನಾವು ಹೊಸ ಭಾರತವನ್ನು ಕಾಣುವುದು ಸಾಧ್ಯವಾಗಬೇಕು.

ಪುಸ್ತಕ: ನಾಲ್ಕೇ ಕ್ಲಾಸು ಓದಿದವನು

ಲೇಖಕರು: ಉಮೇಶ ನಾಯ್ಕ

ಬೆಲೆ: 65 ರೂ.

ಪ್ರಕಾಶಕರು: ಬಂಡಾಯ ಪ್ರಕಾಶನ,

ಹೊನ್ನಾವರ (ಉ.ಕ.)

Similar News