ನ.22ರಂದು ಗುಜರಾತ್ ನಲ್ಲಿ ರಾಹುಲ್ ಗಾಂಧಿ ಚುನಾವಣಾ ಪ್ರಚಾರ

ಗುಜರಾತ್ ವಲಯ ಚುನಾವಣಾ ವೀಕ್ಷಕರಾಗಿ ಬಿ.ಕೆ. ಹರಿಪ್ರಸಾದ್, ಕೆ.ಎಚ್. ಮುನಿಯಪ್ಪ ನೇಮಕ

Update: 2022-11-15 06:21 GMT

ಹೊಸದಿಲ್ಲಿ: ಈ ತಿಂಗಳ ಆರಂಭದಲ್ಲಿ ಹಿಮಾಚಲ ವಿಧಾನಸಭೆ ಚುನಾವಣೆಯಿಂದ ಪಕ್ಷದ ಪ್ರಚಾರದಿಂದ ದೂರ ಉಳಿದಿದ್ದ ರಾಹುಲ್ ಗಾಂಧಿ ನವೆಂಬರ್ 22 ರಂದು ಗುಜರಾತ್‌ನಲ್ಲಿ ಕಾಂಗ್ರೆಸ್‌ಗಾಗಿ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ.

ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಭಾರತ್ ಜೋಡೋ ಯಾತ್ರೆ ಆರಂಭವಾದ ನಂತರ ಮೊದಲ ಬಾರಿಗೆ ಕಾಂಗ್ರೆಸ್ ನ ಪ್ರಮುಖ ನಾಯಕ ರಾಹುಲ್ ಪಕ್ಷವು ಬಲಿಷ್ಠವಾಗಿರುವ ಸೌರಾಷ್ಟ್ರಕ್ಕೆ ಪ್ರಯಾಣಿಸಲಿದ್ದಾರೆ,. ಅವರು ತಮ್ಮ ಮೊದಲ ಗುಜರಾತ್ ಭೇಟಿಯಲ್ಲಿ ಎರಡು 'ಜನಸಭೆ'ಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಎರಡನೇ ಹಂತದ ಚುನಾವಣೆಗೂ ಮುನ್ನ ರಾಹುಲ್ ಮತ್ತೊಮ್ಮೆ ಗುಜರಾತ್ ಗೆ ಭೇಟಿ ನೀಡಲಿದ್ದು, ಮತ್ತೆ  ಕನಿಷ್ಠ ಎರಡು ರ್ಯಾಲಿಗಳನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಹುಲ್ ಹಿಮಾಚಲಪ್ರದೇಶ ಚುನಾವಣಾ ಪ್ರಚಾರದಿಂದ ಹೊರಗುಳಿದಿದ್ದರು, ಹಿರಿಯ ನಾಯಕರು ರಾಹುಲ್ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ಚುನಾವಣೆಯಲ್ಲಿ ಅವರೊಬ್ಬರೇ ಹೋರಾಡಬೇಕೇ ಎಂದು ಪ್ರಶ್ನಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾಗಿರುವ ಗುಜರಾತ್‌ನಲ್ಲಿ ಬಿಜೆಪಿಗೆ ಕಾಂಗ್ರೆಸ್ ಪ್ರಮುಖ ಎದುರಾಳಿಯಾಗಿದೆ. 2017ರಲ್ಲಿ ರಾಹುಲ್ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಿತ್ತು. ಈ ಬಾರಿ  ರಾಹುಲ್ ಅನುಪಸ್ಥಿತಿಯು "ತಪ್ಪು ರಾಜಕೀಯ ಸಂದೇಶ" ರವಾನಿಸುತ್ತದೆ. ಹೀಗಾಗಿ ಅವರು ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೀಕ್ಷಕರ ನೇಮಕ

ಕರ್ನಾಟಕದವರಾದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹಾಗೂ ಲೋಕಸಭೆಯ ಮಾಜಿ ಸದಸ್ಯ ಕೆ.ಎಚ್. ಮುನಿಯಪ್ಪ ಸೇರಿದಂತೆ ಐವರು ನಾಯಕರನ್ನು ಕಾಂಗ್ರೆಸ್ ಗುಜರಾತ್ ನ 5 ವಲಯಗಳಿಗೆ ಚುನಾವಣಾ ವೀಕ್ಷಕರನ್ನಾಗಿ ಸೋಮವಾರ ನೇಮಕ ಮಾಡಿದೆ.

  ಮುಕುಲ್ ವಾಸ್ನಿಕ್ (ದಕ್ಷಿಣ ವಲಯ), ಮೋಹನ್ ಪ್ರಕಾಶ್ (ಸೌರಾಷ್ಟ್ರ), ಪೃಥ್ವಿರಾಜ್ ಚವಾಣ್ (ಸೆಂಟ್ರಲ್), ಬಿ.ಕೆ. ಹರಿಪ್ರಸಾದ್ (ಉತ್ತರ) ಹಾಗೂ ಕೆ.ಎಚ್. ಮುನಿಯಪ್ಪ ಅವರನ್ನು ಗುಜರಾತ್ ವೀಕ್ಷಕರನ್ನಾಗಿ ನೇಮಸಲಾಗಿದೆ. ಈ ಎಲ್ಲಾ ವೀಕ್ಷಕರು ರಾಜಸ್ಥಾನ ಮುಖ್ಯಮಂತ್ರಿಯೂ ಆಗಿರುವ ಕೇಂದ್ರ ವೀಕ್ಷಕ ಅಶೋಕ್ ಗೆಹ್ಲೋಟ್ ಅವರಿಗೆ ವರದಿ ಮಾಡುತ್ತಾರೆ.

ಕಾಂಗ್ರೆಸ್ 26 ಲೋಕಸಭಾ ಕ್ಷೇತ್ರಗಳಲ್ಲಿ 32 ವೀಕ್ಷಕರನ್ನು ನೇಮಿಸಿದೆ, ಜೊತೆಗೆ ಐದು ಸಾಮಾನ್ಯ ವೀಕ್ಷಕರನ್ನೂ ನೇಮಿಸಿದೆ.

Similar News