ವೇತನ ಬಿಡುಗಡೆ ಮಾಡದಿದ್ದರೆ ಆ್ಯಂಬುಲೆನ್ಸ್ ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ ಸಿಬ್ಬಂದಿ

Update: 2022-11-15 13:54 GMT

ಬೆಂಗಳೂರು, ನ.15: ಸಿಬ್ಬಂದಿಗೆ ವೇತನ ನೀಡಲು ಹಿಂದೇಟು ಹಾಕುತ್ತಿರುವ ಜಿವಿಕೆ ಸಂಸ್ಥೆಯ ಕ್ರಮ ಖಂಡಿಸಿ, ನಾಳೆಯಿಂದ(ನ.18) ರಾಜ್ಯಾದ್ಯಂತ 108 ಆ್ಯಂಬುಲೆನ್ಸ್ ಸೇವೆ ಸ್ಥಗಿತಗೊಳಿಸುವುದಾಗಿ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಆ್ಯಂಬುಲೆನ್ಸ್ ನೌಕರರ ಸಂಘದ ಕಾರ್ಯದರ್ಶಿ ಪರಮಶಿವಯ್ಯ, ರಾಜ್ಯದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಆ್ಯಂಬುಲೆನ್ಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಸುಮಾರು 750 ಆ್ಯಂಬುಲೆನ್ಸ್ ವಾಹನಗಳಿವೆ. ಒಂದು ವೇಳೆ ಜಿವಿಕೆ ಸಂಸ್ಥೆಯವರು ಬುಧವಾರ ಸಂಜೆ ವೇಳೆಗೆ ವೇತನ ಬಿಡುಗಡೆ ಮಾಡದಿದ್ದರೆ, ಹೋರಾಟದ ಹಾದಿ ಹಿಡಿಯುತ್ತೇವೆ ಎಂದರು.

ಕಳೆದ ಹಲವು ತಿಂಗಳುಗಳಿಂದ ಸಂಸ್ಥೆ ವೇತನ ಬಿಡುಗಡೆ ಮಾಡದೆ ಸತಾಯಿಸುತ್ತಿದೆ ಎಂದು ಸಿಬ್ಬಂದಿ ಆರೋಪಿಸಿದ್ದರು.ಬಳಿಕ ಮಧ್ಯಪ್ರವೇಶಿಸಿದ ಸರಕಾರ ಜಿವಿಕೆ ಸಂಸ್ಥೆಯವರೊಂದಿಗೆ ಮಾತುಕತೆ ನಡೆಸಿ ಸಿಬ್ಬಂದಿಗೆ ಕೂಡಲೇ 3 ತಿಂಗಳ ವೇತನ ಬಿಡುಗಡೆ ಮಾಡುವಂತೆ ಸೂಚಿಸಿತ್ತು.

ಆರೋಗ್ಯ ಇಲಾಖೆ ಆಯುಕ್ತರ ಸೂಚನೆಯ ಮೇರೆಗೆ ಜಿವಿಕೆ ಕೇವಲ ಒಂದು ತಿಂಗಳ ವೇತನ ಮಾತ್ರ ಪಾವತಿಸಿ, ಉಳಿದ ವೇತನ ಬಿಡುಗಡೆ ಮಾಡಿಲ್ಲ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Similar News