ರಾಜ್ಯ ವಕ್ಫ್ ಬೋರ್ಡ್ ಗೆ 200 ಕೋಟಿ ರೂ.ನೀಡುವಂತೆ ಕೇಂದ್ರಕ್ಕೆ ಮನವಿ: ಶಾಫಿ ಸಅದಿ

Update: 2022-11-15 16:11 GMT

ಬೆಂಗಳೂರು, ನ.15: ರಾಜ್ಯದಲ್ಲಿರುವ ವಕ್ಫ್ ಆಸ್ತಿಗಳಲ್ಲಿ ಶಾಲೆ, ಕಾಲೇಜುಗಳನ್ನು ನಿರ್ಮಿಸಲು 200 ಕೋಟಿ ರೂ.ಅನುದಾನ ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ತಿಳಿಸಿದ್ದಾರೆ.

‘ವಾರ್ತಾಭಾರತಿ’ ಪತ್ರಿಕೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದ ಅವರು, ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಮುಖ್ಮೀತ್ ಎಸ್.ಭಾಟಿಯಾ ಅವರನ್ನು ಭೇಟಿ ಮಾಡಿ 200 ಕೋಟಿ ರೂ.ಅನುದಾನ ನೀಡುವಂತೆ ಮನವಿ ಸಲ್ಲಿಸಿದ್ದೇವೆ ಎಂದರು.

ಈಗಾಗಲೆ ರಾಜ್ಯ ವಕ್ಫ್ ಬೋರ್ಡ್ ವತಿಯಿಂದ 25 ಕೋಟಿ ರೂ.ವೆಚ್ಚದಲ್ಲಿ 10 ಕಾಲೇಜುಗಳನ್ನು ನಿರ್ಮಿಸಲು ಘೋಷಣೆ ಮಾಡಿ, ಹಣವನ್ನು ಮೀಸಲಿಟ್ಟಿದ್ದೇವೆ. ಕೇಂದ್ರ ಸರಕಾರದಿಂದ 200 ಕೋಟಿ ರೂ.ಗಳ ನೆರವು ಸಿಕ್ಕಿದರೆ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ, ಶೈಕ್ಷಣಿಕವಾಗಿ ಹಿಂದುಳಿದಿರುವಂತಹ ಎಲ್ಲ ಜಿಲ್ಲೆಗಳು, ತಾಲೂಕುಗಳಲ್ಲಿ ಶಾಲಾ, ಕಾಲೇಜುಗಳನ್ನು ಸ್ಥಾಪಿಸಬಹುದು ಎಂದು ಅವರು ಹೇಳಿದರು.

ರಾಜ್ಯದ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ, ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಅವರನ್ನು ಭೇಟಿ ಮಾಡಿ, ಈ ವಿಚಾರವನ್ನು ತಿಳಿಸಲಾಗಿದೆ ಎಂದು ಶಾಫಿ ಸಅದಿ ತಿಳಿಸಿದರು. 

ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯ ಭೇಟಿ ವೇಳೆ ಸಚಿವ ಶಶಿಕಲಾ ಜೊಲ್ಲೆ ಅವರ ಆಪ್ತ ಕಾರ್ಯದರ್ಶಿ ಚಿದಂಬರಂ, ರಾಜ್ಯ ವಕ್ಫ್ ಬೋರ್ಡ್‍ನ ಲೀಸ್ ಅಂಡ್ ಡೆವಲಪ್‍ಮೆಂಟ್ ಕಮಿಟಿಯ ಅಧ್ಯಕ್ಷ ಜಿ.ಯಾಕೂಬ್ ಉಪಸ್ಥಿತರಿದ್ದರು ಎಂದು ಅವರು  ಹೇಳಿದರು.

Similar News