ಕಚೇರಿಯಲ್ಲೇ ಲಂಚ ಪಡೆದ ಆರೋಪ: ಮಹಿಳಾ ವಿಶೇಷ ತಹಶೀಲ್ದಾರ್ ಸೇರಿ ಇಬ್ಬರು ಸೆರೆ
ಬೆಂಗಳೂರು, ನ.15:ಜಮೀನಿನ ಖಾತೆ ಬದಲಾವಣೆಗೆ ಲಂಚ ಪಡೆಯುತ್ತಿದ್ದ ಆರೋಪದಡಿ ಬೆಂಗಳೂರು ಉತ್ತರ (ಯಲಹಂಕ) ತಾಲೂಕಿನ ವಿಶೇಷ ತಹಶೀಲ್ದಾರ್ ಸೇರಿ ಇಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ವಿಶೇಷ ತಹಶೀಲ್ದಾರ್ ವರ್ಷಾ ಒಡೆಯರ್ ಹಾಗೂ ಮಧ್ಯವರ್ತಿ ರಮೇಶ್ ಎಂಬುವವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಉತ್ತರ ತಾಲೂಕಿನ ದಾಸನಪುರ ಹೋಬಳಿ ವ್ಯಾಪ್ತಿಯ ಕೆಂಗನಹಳ್ಳಿ ಗ್ರಾಮದಲ್ಲಿ ತಾವು ಹೊಂದಿರುವ ಜಮೀನಿನ ಖಾತೆ ಬದಲಾವಣೆ ಕೋರಿ ಕಾಂತರಾಜು ಎಂಬುವವರು ಅರ್ಜಿ ಸಲ್ಲಿಸಿದ್ದರು. ಆದರೆ, ಖಾತೆ ಬದಲಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು 10 ಲಕ್ಷ ಲಂಚ ನೀಡುವಂತೆ ವಿಶೇಷ ತಹಶೀಲ್ದಾರ್ ಮಧ್ಯವರ್ತಿ ಮೂಲಕ ಅರ್ಜಿದಾರರಿಗೆ ಸೂಚಿಸಿದ್ದರು.ಈ ಕುರಿತು ಅರ್ಜಿದಾರರು ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ವಿಭಾಗಕ್ಕೆ ದೂರು ನೀಡಿದ್ದರು ಎನ್ನಲಾಗಿದೆ.
ಬಂಧಿತರ ಸೂಚನೆಯಂತೆ ಮಂಗಳವಾರ ಸಂಜೆ ಬೆಂಗಳೂರು ಉತ್ತರ ತಹಶೀಲ್ದಾರ್ ಕಚೇರಿಯಲ್ಲಿ ಆರೋಪಿಗಳನ್ನು ಭೇಟಿ ಮಾಡಿದಾಗ ವರ್ಷಾ ಅವರು 5 ಲಕ್ಷ ಲಂಚದ ಹಣವನ್ನು ಮಧ್ಯವರ್ತಿ ರಮೇಶ್ ಕೈಗೆ ನೀಡುವಂತೆ ಸೂಚಿಸಿದರು.
ತದನಂತರ ತಕ್ಷಣ ದಾಳಿಮಾಡಿದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ವಿಶೇಷ ತಹಶೀಲ್ದಾರ್ ಮತ್ತು ಮಧ್ಯವರ್ತಿ ಇಬ್ಬರನ್ನೂ ಬಂಧಿಸಿದ್ದಾರೆ.
ಈ ಹಿಂದೆ ಚಾಮರಾಜನಗರ ಜಿಲ್ಲೆಯ ಯಳಂದೂರು ಹಾಗೂ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕುಗಳಲ್ಲಿ ತಹಶೀಲ್ದಾರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದ ವರ್ಷಾ, 2014 ನೇ ಸಾಲಿನ ಕೆಎಎಸ್ ಅಧಿಕಾರಿ. ಇತ್ತೀಚೆಗೆಯಷ್ಟೇ, ಬೆಂಗಳೂರು ಉತ್ತರ ತಾಲೂಕಿನ ವಿಶೇಷ ತಹಶೀಲ್ದಾರ್ ಹುದ್ದೆಗೆ ವರ್ಗಾವಣೆಯಾಗಿದ್ದಾರೆ.