ಭಗತ್ ಸಿಂಗ್ ಚಿತ್ರವನ್ನು ಸಮಗ್ರತೆಯೊಂದಿಗೆ ಕಟ್ಟುವ ಕಥನ

Update: 2022-11-16 05:02 GMT

ತನ್ನ 23ನೇ ವಯಸ್ಸಿನಲ್ಲೇ ದೇಶ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದ ಸ್ವಾತಂತ್ರ್ಯ ಚಳವಳಿಯ ಧ್ರುವತಾರೆ, ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಕುರಿತು ಕನ್ನಡದಲ್ಲಿ ಹಲವು ಕೃತಿಗಳು ಬಂದಿವೆ, ಅನುವಾದಗೊಂಡಿವೆ.ಅವುಗಳ ಪಟ್ಟಿಯಲ್ಲಿ ಸೇರುತ್ತಾ ಹಲವು ವಿಶೇಷತೆಗಳೊಂದಿಗೆ ಗಮನ ಸೆಳೆಯುವುದು ಡಾ.ಎಚ್.ಎಸ್.ಅನುಪಮಾ ಅವರ ‘ಜನ ಸಂಗಾತಿ ಭಗತ್ ಜೀವನ ಚರಿತ್ರೆ’.

ಹಲವು ಐತಿಹಾಸಿಕ ಆಕರಗಳನ್ನು ಅಧ್ಯಯನ ಮಾಡಿ, ಪರಿಶೀಲಿಸಿ ಸರಾಗವಾಗಿ ಓದಿಸಿಕೊಂಡು ಹೋಗುವ ಅವರದೇ ಶೈಲಿಯಲ್ಲಿ ಈ ಕೃತಿಯನ್ನು ಅನುಪಮಾ ಅವರು ಕಟ್ಟಿಕೊಟ್ಟಿದ್ದಾರೆ. ಇಡೀ ಪುಸ್ತಕ ಭಗತ್ ಸಮಗ್ರ ಜೀವನಚಿತ್ರಣವನ್ನು ಕಟ್ಟಿಕೊಡುವ ಜೊತೆಗೆ ಇಡೀ ಭಾರತದ ಅಂದಿನ ಸಾಮಾಜಿಕ, ರಾಜಕೀಯ ವ್ಯವಸ್ಥೆಯನ್ನು ಸಂಕ್ಷಿಪ್ತವಾಗಿ ನಮ್ಮ ಮುಂದಿಟ್ಟಿದೆ.

ಲಡಾಯಿ ಪ್ರಕಾಶನದ ಪ್ರಕಟಣೆಯಾದ ಈ ಪುಸ್ತಕದಲ್ಲಿನ ಎರಡು ಪ್ರಮುಖ ಅಂಶಗಳಲ್ಲಿ ಒಂದನೆಯದು. ಭಗತ್ ಅಷ್ಟು ಸಣ್ಣ ವಯಸ್ಸಿಗೆ ಅಷ್ಟೊಂದು ಪ್ರಖರ ಜ್ಞಾನವನ್ನು ಮತ್ತು ಸ್ಪಷ್ಟ ಸೈದ್ಧಾಂತಿಕ ವಿಚಾರಗಳನ್ನು ಬೆಳೆಸಿಕೊಳ್ಳಲು ಕಾರಣವಾದ ಅಂಶಗಳು, ಅವನ ಅಧ್ಯಯನ ಮತ್ತು ಅಂತಿಮವಾಗಿ ಅವನು ಒಬ್ಬ ಮಾರ್ಕ್ಸ್ ವಾದಿಯಾಗಿ ಅವನು ಕೊಟ್ಟ ಚಿಂತನೆಗಳು ಮತ್ತು ಬರಹಗಳನ್ನು ಒಂದು ಕಡೆ ತರುವ ಪ್ರಯತ್ನವನ್ನು ಮಾಡಿದ್ದಾರೆ. ಇದರಲ್ಲಿ ಅವನು ಬರೆದ ಲೇಖನ, ಪುಸ್ತಕಗಳ ಪಟ್ಟಿ ಮಾತ್ರವಲ್ಲದೆ, ಅವನು ಓದಿದ ಪುಸ್ತಕಗಳ ಪಟ್ಟಿಯೂ ಇದೆ. ಇದು ಭಗತ್‌ನನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಇನ್ನಷ್ಟು ಸಹಾಯವಾಗುತ್ತದೆ.

ಮತ್ತೊಂದು, ಸಾಮಾನ್ಯವಾಗಿ ಯಾರ ಜೀವನ ಚರಿತ್ರೆಯನ್ನು ಬರೆದರೂ ಅದು ಸಂಪೂರ್ಣ ಅವರನ್ನೇ ಕೇಂದ್ರೀಕರಿಸುವುದು ಸಹಜ. ಇಲ್ಲಿಯೂ ಬಹುಭಾಗ ಅದೇ ಇದ್ದರೂ ಅನುಪಮರವರ ಸೂಕ್ಷ್ಮತೆಯು ಸಹಯಾನಿಗಳು ಎನ್ನುವ ಒಂದು ಅಧ್ಯಾಯದ ಮೂಲಕ ತನ್ನ ಈ ಎಲ್ಲಾ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತ ತಾಯಿ ಮತ್ತು ಸಂಗಾತಿಗಳ ಕುರಿತು ಪರಿಚಯವನ್ನು ಮಾಡಿಸಿರುವುದು ವಿಶೇಷ.

ಭಗತ್‌ನನ್ನು ಈಗಲೂ ಹಲವರು ತಪ್ಪು ತಪ್ಪಾಗಿ ಅರ್ಥೈಸುವ, ಚಿತ್ರಿಸುವ, ವಿಶ್ಲೇಷಿಸುವ ಸಂದರ್ಭದಲ್ಲಿ ಈ ಪುಸ್ತಕ ಆ ಎಲ್ಲಾ ಗೊಂದಲ, ಅನುಮಾನಗಳಿಗೆ ಸ್ಪಷ್ಟವಾಗಿ ಉತ್ತರಿಸುತ್ತದೆ. ಭಾರತ ಸ್ವಾತಂತ್ರ್ಯ ಚಳವಳಿಯ ಎಲ್ಲ ಮಗ್ಗುಲುಗಳ ಪರಿಚಯವಾಗಬೇಕೆಂದರೆ ಮತ್ತು ಯುವ ಕ್ರಾಂತಿಕಾರಿಗಳು ಭಾರತ ಸ್ವಾತಂತ್ರ್ಯ ಚಳುವಳಿಯಲ್ಲಿ ನಿರ್ವಹಿಸಿದ ಪಾತ್ರ ಮತ್ತು ಪ್ರಭಾವದ ಕುರಿತು ತಿಳಿದು ಭಗತ್ ಸಿಂಗ್‌ನನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಈ ಪುಸ್ತಕ ಸಹಾಯಕ.

ಈ ಪುಸ್ತಕದಲ್ಲಿ ಅತ್ಯಂತ ಕಾಡಿದ ಕೆಲವು ಸಾಲುಗಳು:

‘‘ಭಗತನ ಓದುಗುಳಿತನ ಮತ್ತು ಬರವಣಿಗೆಯ ಉತ್ಸಾಹ ವಿಶಿಷ್ಟವಾದವು. ಅವನ ಬರಹಗಳಲ್ಲಿ ಚಿಂತನೆಯ ಸ್ಪಷ್ಟತೆ, ಖಚಿತತೆಗಳಿವೆ, ಒಬ್ಬ ಪ್ರಾಮಾಣಿಕ ವಾಸ್ತವವಾದಿ, ಚಲನಶೀಲ ಚಿಂತಕ ಅಲ್ಲಿದ್ದಾನೆ. ಬರವಣಿಗೆಗಳು ಭಗತನ ಬಿಡುಗಡೆಯ ಹಾಡುಗಳಾಗಿದ್ದವು. ಅವನ ಅರ್ಥದಲ್ಲಿ ಬಿಡುಗಡೆ ಎಂದರೆ ಸರಳುಗಳ ನಡುವಿನಿಂದ ತಾನು ಬಿಡುಗಡೆಯಾಗಿ ಮನೆ ಸೇರುವುದಲ್ಲ; ದೇಶಬಂಧುಗಳು ತಾವೇ ಕೊಟ್ಟು ತೊಡಿಸಿಕೊಂಡ ಬಂಧನದಿಂದ ಹೊರಬರುವುದು. ಎಂದೇ ಆ ಸೆರೆಹಕ್ಕಿಯ ಹಾಡು ಎಲ್ಲ ಕಾಲಕ್ಕೂ ಎದೆಗಳನ್ನು ಸುಲಭವಾಗಿ ಮೀಟುತ್ತದೆ.’’

‘‘ಮನುಷ್ಯ ಸಮಾಜ ಎಷ್ಟೊಂದು ಕಷ್ಟ, ಶೋಷಣೆಯಿಂದ ತುಂಬಿದೆ ಎಂದು ಭಗತನಿಗೆ ಅನಿಸುತ್ತಿತ್ತು. ಮನುಷ್ಯನ ನೆಮ್ಮದಿಯ ಜೀವನಕ್ಕೆ ಏನು ಬೇಕೋ ಅಷ್ಟನ್ನು ಪ್ರಕೃತಿ ಕೊಡುವಾಗಲೂ ಸಂಪನ್ಮೂಲಗಳನ್ನು ಕೆಲವರಷ್ಟೇ ದುರಾಸೆಯಿಂದ ಬಾಚಿಕೊಳ್ಳುತ್ತಿದ್ದಾರೆ; ಭೂಮಿ-ಅಧಿಕಾರ-ಹಣ ಎಲ್ಲವನ್ನೂ ಸಂಗ್ರಹಿಸಿಟ್ಟುಕೊಂಡು ವಿಶಾಲ ಜನ ಸಮುದಾಯವನ್ನು ಶೋಷಿಸುವವರಾಗಿದ್ದಾರೆ ಎಂದವನಿಗೆ ಮನದಟ್ಟಾಯಿತು. ಇಷ್ಟಾದರೂ ಶೋಷಕ ವ್ಯವಸ್ಥೆಯೇ ಕಾಲಾನುಕಾಲದಿಂದ ಮುಂದುವರಿದು ಬರುತ್ತಿರುವುದು ಹೇಗೆಂದು ಭಗತನಿಗೆ ಆಶ್ಚರ್ಯವಾಗುತ್ತಿತ್ತು. ದೇವರಾಗಲಿ, ಧರ್ಮ ಹೇಳುವ ಸಾವು-ಸ್ವರ್ಗ-ನರಕದ ಭಯಗಳೇ ಆಗಲಿ ಮನುಷ್ಯರು ದುಷ್ಟರಾಗುವುದನ್ನು, ಶೋಷಕರಾಗುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲವೇ ಎಂದು ಆ ಎಳೆಯ ಮನಸ್ಸು ಚಿಂತಿಸುತ್ತಿತ್ತು.’’

‘‘ಲಾಹೋರಿನ ಲೈಬ್ರರಿಯಲ್ಲಿದ್ದ ಕಾರ್ಲ್ ಮಾರ್ಕ್ಸ್ ಬರಹಗಳು ಅವನನ್ನು ಆಕರ್ಷಿಸಿದವು. ಮನುಷ್ಯರನ್ನು ಅವರವರ ದೇಶ, ಧರ್ಮ, ಜಾತಿ, ಜನಾಂಗಗಳಿಂದ ಗುರುತಿಸದೆ ಶ್ರಮದಿಂದ, ಸಂಕಷ್ಟದಿಂದ ಗುರುತಿಸುವ ಮಾರ್ಕ್ಸ್ ವಾದ ಅವನನ್ನು ತುಂಬ ಸೆಳೆಯಿತು. ಮಾರ್ಕ್ ತತ್ವಗಳನ್ನು ಅನುಸರಿಸಿ, ಸಮಾಜವಾದದ ಸಮಾನತೆಯಲ್ಲಿ ನಂಬಿಕೆಯಿಟ್ಟ ಭಗತ್ ತನ್ನ ಬದುಕು, ಚಿಂತನಾ ಕ್ರಮದಿಂದ ನಿಜವಾದ ಕಮ್ಯುನಿಸ್ಟ್ ಆಗಿ ರೂಪುಗೊಳ್ಳತೊಡಗಿದ.’’

‘‘ಎಲ್ಲ ಇದ್ದೂ ಏನೂ ಇಲ್ಲದಂತಾಗಿರುವ ವಿಚಿತ್ರ ಬಡತನದಿಂದ, ಬೌದ್ಧಿಕ ದಾಸ್ಯದಿಂದ ಜಗತ್ತಿನ ಪ್ರತೀ ದೇಶವೂ ನರಳುತ್ತಿರುವಾಗ ಅಪಾರ ಕ್ರಿಯಾ ಸಾಧ್ಯತೆಯ ತರುಣರ ಗುಂಪು ಎಚ್ಚೆತ್ತರಷ್ಟೇ ಸಾಮಾಜಿಕ ಬದಲಾವಣೆ ಸಾಧ್ಯವಾಗುತ್ತದೆ. ಬಂಡೇಳುವ ಗುಣವನ್ನು ಉದ್ದೀಪಿಸುವುದಕ್ಕಾಗಿ, ಅವರನ್ನು ಹೊಸತನದಿಂದ ಯೋಚಿಸ ಹಚ್ಚುವುದಕ್ಕಾಗಿ ಭಗತ್ ಸಿಂಗ್ ಮತ್ತು ಅವನಂಥವರ ಜೀವನ, ವಿಚಾರಗಳನ್ನು ಅರಿಯುವುದು ಅವಶ್ಯವಾಗಿದೆ. ಕೇವಲ ನಮ್ಮ ದೇಶಕ್ಕಷ್ಟೇ ಅಲ್ಲ, ಜನಸಾಮಾನ್ಯರಿಗೆ ಸ್ವಾತಂತ್ರ್ಯ, ಸಮಾನ ಅವಕಾಶ, ಸಮಾನತೆಯ ತತ್ವಗಳ ಮಾತನಾಡಿದ ಭಗತ್ ಸಿಂಗ್‌ನಂಥವರು ಅಂತರ್‌ರಾಷ್ಟ್ರೀಯವಾಗಿಯೂ ಪ್ರಸ್ತುತವಾಗಿದ್ದಾರೆ.’’

ಪುಸ್ತಕ: ಜನಸಂಗಾತಿ ಭಗತ್ ಜೀವನಚರಿತ್ರೆ

ಲೇಖಕಿ: ಡಾ.ಎಚ್.ಎಸ್.ಅನುಪಮಾ

ಬೆಲೆ: 150 ರೂ.

ಪ್ರಕಾಶಕರು: ಲಡಾಯಿ ಪ್ರಕಾಶನ

Similar News