ಗುಜರಾತ್ ವಿಧಾನಸಭೆ ಚುನಾವಣೆ: ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಪಹರಿಸಿದೆ; ಆಪ್ ಆರೋಪ

Update: 2022-11-16 06:56 GMT

ಹೊಸದಿಲ್ಲಿ:  ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ತನ್ನ ಪಕ್ಷದ ಸೂರತ್ (ಪೂರ್ವ) ಅಭ್ಯರ್ಥಿಯಾಗಿರುವ  ಕಾಂಚನ್ ಜರಿವಾಲಾ ನಿನ್ನೆಯಿಂದ  ಕುಟುಂಬದೊಂದಿಗೆ ನಾಪತ್ತೆಯಾಗಿದ್ದಾರೆ. ಬಿಜೆಪಿ ನಮ್ಮ  ಅಭ್ಯರ್ಥಿ ಕಾಂಚನ್ ಜರಿವಾಲಾ ಅವರನ್ನು ಅಪಹರಿಸಿದೆ  ಎಂದು ಆಪ್ ನಾಯಕ ಹಾಗೂ  ದಿಲ್ಲಿ ಉಪಮುಖ್ಯಮಂತ್ರಿ  ಮನೀಶ್ ಸಿಸೋಡಿಯಾ Manish Sisodia ಇಂದು  ಆರೋಪಿಸಿದ್ದಾರೆ ಎಂದು NDTV ವರದಿ ಮಾಡಿದೆ.

ಗುಜರಾತ್ ಚುನಾವಣೆಯಲ್ಲಿ  ಬಿಜೆಪಿ ಸೋಲುವ ಭೀತಿಯಲ್ಲಿದೆ.. ಆದ್ದರಿಂದ ಅದು  ಎಎಪಿ ಅಭ್ಯರ್ಥಿಯನ್ನು ಅಪಹರಿಸಲು ಮುಂದಾಗಿದೆ ಎಂದು ಸಿಸೋಡಿಯಾ ಹೇಳಿದರು.

''ನಿನ್ನೆಯಿಂದ ಕಾಂಚನ್ ಹಾಗೂ  ಅವರ ಕುಟುಂಬದವರು ನಾಪತ್ತೆಯಾಗಿದ್ದಾರೆ. ಅವರು ತಮ್ಮ ನಾಮಪತ್ರ ಪರಿಶೀಲನೆಗೆ ತೆರಳಿದ್ದರು. ನಾಮಪತ್ರ ಪರಿಶೀಲನೆ ಮುಗಿಸಿ ಕಚೇರಿಯಿಂದ ಹೊರ ಬಂದ ಕ್ಷಣದಲ್ಲೇ ಬಿಜೆಪಿಯ ಗೂಂಡಾಗಳು ಅವರನ್ನು ಕರೆದೊಯ್ದಿದ್ದಾರೆ. ಈಗ ಅವರು  ಎಲ್ಲಿದ್ದಾರೆ ಎಂಬುದು ಗೊತ್ತಾಗಿಲ್ಲ'' ಎಂದು ಸಿಸೋಡಿಯಾ ಹೇಳಿದರು.

ಇದು ಅಪಾಯಕಾರಿ, ಇದು ಕೇವಲ ಅಭ್ಯರ್ಥಿಯಲ್ಲ ಪ್ರಜಾಪ್ರಭುತ್ವದ ಅಪಹರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸೂರತ್ (ಪೂರ್ವ)ದ ನಮ್ಮ ಅಭ್ಯರ್ಥಿ ಕಾಂಚನ್ ಜರಿವಾಲಾ ಹಾಗೂ  ಅವರ ಕುಟುಂಬ ನಿನ್ನೆಯಿಂದ ನಾಪತ್ತೆಯಾಗಿದೆ.  ಮೊದಲು, ಬಿಜೆಪಿ ಅವರ ನಾಮಪತ್ರವನ್ನು ತಿರಸ್ಕರಿಸಲು ಪ್ರಯತ್ನಿಸಿತು. ಆದರೆ ಅವರ ನಾಮಪತ್ರವನ್ನು ಸ್ವೀಕರಿಸಲಾಯಿತು. ನಂತರ, ಅವರಿಗೆ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರುತ್ತಿದ್ದರು. ಅವರನ್ನು ಕಿಡ್ನಾಪ್ ಮಾಡಲಾಗಿದೆಯೇ? " ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಎಎಪಿಯ ಸಂಸದ ರಾಘವ್ ಚಡ್ಡಾ  ಅವರು ಇದನ್ನು "ಪ್ರಜಾಪ್ರಭುತ್ವದ ಕೊಲೆ" ಎಂದು ಕರೆದಿದ್ದಾರೆ.

ಎಎಪಿ ಆರೋಪಕ್ಕೆ ಬಿಜೆಪಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Similar News