6 ಹೊಸ ಹೈಟೆಕ್ ನಗರಗಳ ಸ್ಥಾಪನೆ: ಸಿಎಂ ಬೊಮ್ಮಾಯಿ ಘೋಷಣೆ

''ಆವಿಷ್ಕಾರದ ಜೊತೆ ಹೊಂದಾಣಿಕೆ ಹಾಗೂ ಲಾಭಮಾಡಿಕೊಳ್ಳಿ''

Update: 2022-11-16 15:04 GMT

ಬೆಂಗಳೂರು, ನ.16: ‘ಕಲಬುರಗಿ, ಹುಬ್ಬಳಿ-ಧಾರವಾಡ, ಮಂಗಳೂರು, ಮೈಸೂರು, ಮಧ್ಯ ಕರ್ನಾಟಕ ಹಾಗೂ ರಾಜಧಾನಿ ಬೆಂಗಳೂರು ಸಮೀಪ ಯೋಜನಾ ಬದ್ಧವಾಗಿ, ಜ್ಞಾನ, ವಿಜ್ಞಾನದ ಸಂಗಮದಂತೆ ಆರು ಹೊಸ ಹೈಟೆಕ್ ನಗರಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಬುಧವಾರ ಬೆಂಗಳೂರು ಆರಮನೆ ಆವರಣದಲ್ಲಿ ‘ಬೆಂಗಳೂರು ಟೆಕ್ ಸಮ್ಮಿಟ್-2022’ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಂದು ನಗರವೂ ಒಂದೊಂದು ವೈಶಿಷ್ಟತೆಯನ್ನು ಹೊಂದಿರಲಿದೆ. ಬೆಂಗಳೂರು ಬಳಿ ನಿರ್ಮಾಣವಾಗಲಿರುವ ಹೈಟೆಕ್ ಸಿಟಿ ವಿಮಾನ ನಿಲ್ದಾಣದ ಸಮೀಪ ಇರಲಿದೆ ಎಂದರು.

ಆರು ತಿಂಗಳೊಳಗೆ ಈ ನಗರ ನಿರ್ಮಾಣದ ಯೋಜನೆ ರೂಪುಗೊಳ್ಳಲಿದೆ. ನವೋದ್ಯಮಗಳನ್ನು ಪ್ರೋತ್ಸಾಹಿಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ನವೋದ್ಯಮ ಪಾರ್ಕ್ ನಿರ್ಮಾಣ ಮಾಡಲಾಗುವುದು. ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೆ ಟರ್ಮಿನಲ್ ಇತ್ತೀಚೆಗಷ್ಟೆ ಉದ್ಘಾಟನೆ ಆಗಿದೆ.  ಜಗತ್ತಿನಲ್ಲಿಯೇ ಅತ್ಯಂತ ಸುಂದರವಾದ ಟರ್ಮಿನಲ್ ಇದಾಗಿದೆ. ಬೆಂಗಳೂರಿನಲ್ಲಿ ಎಲ್ಲವೂ ಸಾಧ್ಯವಿದೆ.  ತಂತ್ರಜ್ಞಾನಗಳೆಲ್ಲವೂ ವಿಶ್ವದ ಭವಿಷ್ಯಕ್ಕೆ ಮಾನವ ಅಭಿವೃದ್ಧಿ ಸಮಾವೇಶದ ಧ್ಯೇಯವಾಗಲಿ ಎಂದು ಅವರು ಹಾರೈಸಿದರು. 

ಉದ್ಯಮಿಗಳು ಆವಿಷ್ಕಾರ ಮಾಡುವುದರ ಜೊತೆಗೆ ಹೊಂದಾಣಿಕೆ ಹಾಗೂ ಲಾಭಮಾಡಿಕೊಳ್ಳುವ ಮೂಲಕ ಸರಕಾರಕ್ಕೂ ಆದಾಯ ತರುವ ಕೆಲಸ ಮಾಡಬೇಕು. ಸೃಜನಶೀಲತೆ ಹಲವಾರು ಆಯಾಮಗಳನ್ನು ಒಳಗೊಂಡಿದೆ. ನಾವು ಜಾಗತಿಕವಾಗಿ  ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಜಗತ್ತು ಸಮಸ್ಯೆಗಳಿಂದ ಮುಳುಗುತ್ತಿದೆ. ಹಣಕಾಸು ಮೂಲಗಳು ಪ್ರತಿ ಕ್ಷಣವೂ ಇಳಿಮುಖವಾಗುತ್ತಿದೆ. ನಾವು ಪರಿಹಾರ ಕಂಡುಕೊಳ್ಳದಿದ್ದರೆ ಭವಿಷ್ಯದಲ್ಲಿ ಸಮಸ್ಯೆ ಎದರಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಎಚ್ಚರಿಸಿದರು. 

ಯಾವುದೇ ತಂತ್ರಜ್ಞಾನ ಬಂದರೂ ಈ ಪರಿಸರವನ್ನು ಉಳಿಸುವ ಗಣ ಹೊಂದಿರಬೇಕು. ಡಿಜಿಟಲ್  ಅಂತರವನ್ನು ಕಡಿಮೆ ಮಾಡುವತ್ತಲೂ ನಾವು ಗಮನಹರಿಸಬೇಕು.  ಪರಿಸರ ಸ್ನೇಹಿ ವಾತಾವರಣ ಹೊಂದಬೇಕು. ಪರಿಸರ ಸ್ನೇಹಿ ತಂತ್ರಜ್ಞಾನ, ನಾವೀನ್ಯತೆ ಹಾಗೂ ಇಕೋ ಇಕನಾಮಿಕ್ಸ್ ಅನ್ನು ಸಾಧ್ಯವಾಗಿಸಬೇಕು ಎಂದು ಬೊಮ್ಮಾಯಿ ಹೇಳಿದರು. 

ಐಟಿ ಬಿಟಿ, ಕೃತಕ ಬುದ್ಧಿಮತ್ತೆ ನಮ್ಮ ಸಂಪನ್ಮೂಲಗಳನ್ನು ಉಳಿಸಿ ರಕ್ಷಣೆ ಮಾಡುವ ಸಾಧ್ಯತೆ ಇದೆ. ಮಾನವ ಕುಲಕ್ಕೆ ಯಾವುದು ಅನುಕೂಲವಾಗುತ್ತದೆ ಎನ್ನುವುದನ್ನು ನೀವೇ ಪರೀಕ್ಷಿಸಬೇಕು. ತಂತ್ರಜ್ಞಾನ ನಮಗೆ ಮಾಹಿತಿಯ ಕಣಜವನ್ನೇ ನಮ್ಮ ಮುಂದಿರಿಸಿದೆ.  ನವೀಕರಿಸಬಹುದಾದ ಇಂಧನ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅವರು ಹೇಳಿದರು. 

ಬೆಂಗಳೂರಿಗೆ ಬಂದವರು ಐಟಿ ಬಿಟಿ ಕಂಪನಿಗಳಿಗೆ ಭೇಟಿ ನೀಡುತ್ತಾರೆ. ಮೊದಲು ಸಂಪತ್ತು ಉಳ್ಳವರ ಕಾಲವಿತ್ತು.  ಈಗ ಜ್ಞಾನ ಇರುವವರ ಕಾಲ. ಬೆಂಗಳೂರಿಗೆ ಪ್ರತಿದಿನ 5ಸಾವಿರಕ್ಕೂ ಹೆಚ್ಚು ಇಂಜಿನಿಯರ್ ಗಳು ಬಂದು ಹೋಗುತ್ತಾರೆ.  ಬೆಂಗಳೂರಿನಲ್ಲಿ ಸುಮಾರು 400 ಆರ್ ಆಂಡ್ ಡಿ ಸೆಂಟರ್ ಇವೆ. ಬಿಯಾಂಡ್ ಬೆಂಗಳೂರು ಸಾಕಾರಗೊಳಿಸಲು ಸರಕಾರ ಎಲ್ಲ ರೀತಿಯ ಸಹಕಾರ ನೀಡುತ್ತದೆ. ಮೈಸೂರು, ಮಂಗಳೂರು, ಹುಬ್ಬಳ್ಳಿ ಧಾರವಾಡ ಕಡೆಗಳಲ್ಲಿ  ಐಟಿ ಉದ್ಯಮಕ್ಕೆ ಆದ್ಯತೆ ನೀಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಮುಂದಿನ 10 ವರ್ಷದಲ್ಲಿ ನಗರೀಕರಣ ಹೆಚ್ಚಳವಾಗಲಿದೆ. ಭಾರತದಲ್ಲಿ ಶೇ.40ರಷ್ಟು ನಗರೀಕರಣವಾಗಲಿದೆ. ಹೀಗಾಗಿ ಐಟಿ ಬಿಟಿ ಕಂಪನಿಗಳು ಸರಳ ನಗರೀಕರಣ ಜೀವನ ನಿರ್ವಹಣೆಗೆ ತಂತ್ರಜ್ಞಾನ ಅಭಿವೃದ್ದಿ ಪಡಿಸಬೇಕು. ಆರೋಗ್ಯ ಕ್ಷೇತ್ರದಲ್ಲಿಯೂ ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಬೇಕು ಎಂದು ಅವರು ಕರೆ ನೀಡಿದರು.

Similar News