ಶಿಕ್ಷಣ: ಮಾಧ್ಯಮ ಮತ್ತು ಮೀಸಲಾತಿಯ ಪ್ರಶ್ನೆಗಳು

Update: 2022-11-17 07:52 GMT

ಮಾತೃಭಾಷಾ ಶಿಕ್ಷಣದ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅನೇಕ ಪ್ರಕರಣಗಳು ನಡೆದಿವೆ. ಆದರೆ ಅವೆಲ್ಲವಕ್ಕೂ ತಳಹದಿ ನೀಡಿದ್ದು ಕರ್ನಾಟಕದ ಮಾತೃ ಭಾಷಾ ಶಿಕ್ಷಣದ ಹೋರಾಟಗಳು.

ನಮ್ಮ ನಾಡಿನ ಶಿಕ್ಷಣ ನೀತಿಯ ದಿಕ್ಕು ಗುರುತಿಸಿದ ಕೆಲವು ಪ್ರಕರಣಗಳನ್ನು ಗಮನಿಸಬೇಕು. ಅವುಗಳಲ್ಲಿ ಪ್ರಮುಖವಾದವು ಮೀಸಲು ವ್ಯವಸ್ಥೆ ಹಾಗೂ ಆಡಳಿತದ ಪದ್ಧತಿ.

ಮೊದಲನೆಯದಾಗಿ ಮೀಸಲಾತಿ. ಇದು ಭಾರತದ ಬಹು ಚರ್ಚಿತ ವಿಷಯಗಳಲ್ಲಿ ಒಂದು. ವಿಪರ್ಯಾಸವೆಂದರೆ ಈ ವಿಷಯದ ಬಗ್ಗೆ ಮೂಲಭೂತ ತಿಳುವಳಿಕೆ ಇಲ್ಲದೆ ಇದನ್ನು ವಿರೋಧ ಮಾಡುತ್ತಿರುವವರೇ ಹೆಚ್ಚು. ಮೀಸಲು ವ್ಯವಸ್ಥೆ ಪ್ರತಿಭೆ ಆಧಾರಿತ ಶಿಕ್ಷಣ- ಉದ್ಯೋಗದ ವಿರೋಧಿ ಅಂತ ವಾದ ಮಾಡುವ ಮಂದಿ ಡೊನೇಷನ್ ಪಿಡುಗು ಪ್ರತಿಭೆಯ ವಿರೋಧಿ ಅಂತ ವಿಚಾರವನ್ನೇ ಮಾಡಿರುವುದಿಲ್ಲ.

ಮಂಡಲ ವರದಿಯ ಮೊದಲ ಪುಟದಲ್ಲಿ ‘‘ಅಸಮಾನನನ್ನು ಸಮಾನನ ಜೊತೆ ಸ್ಪರ್ಧೆಗೆ ನಿಲ್ಲಿಸುವುದು ಅಸಮಾನತೆಯನ್ನು ಮುಂದುವರಿಸಿದಂತೆ’’ ಎನ್ನುವ ಮಾತು ಇದೆ. ಆದರೂ ಇದಕ್ಕೆ ಇಷ್ಟೊಂದು ವಿರೋಧ, ಅಸಹನೆ ಇರಲಿಕ್ಕೆ ಕಾರಣಗಳು ಯಾವುವು? ಜನ್ಮಜಾತ ಸವಲತ್ತುಗಳನ್ನು ಹೊಂದಿದ ಜನಾಂಗಗಳು ಇತರ ಸಮುದಾಯಗಳ ಬಗ್ಗೆ ಇಟ್ಟುಕೊಂಡಿರುವ ಪೂರ್ವಗ್ರಹ, ಶಿಕ್ಷಣ, ಆಸ್ತಿ ಹಾಗೂ ವ್ಯವಹಾರದ ಏಕಸ್ವಾಮ್ಯದ ವ್ಯವಸ್ಥೆ ಹಾಗೂ ಮೀಸಲು ಸೌಲಭ್ಯದ ರಾಜಕೀಕರಣ, ಅವೈಜ್ಞಾನಿಕ ವಿಂಗಡಣೆ, ಹಿಂದುಳಿದಿರುವಿಕೆಯನ್ನು ಸರಿಯಾಗಿ ಅಳತೆ ಮಾಡದೆ ರಾಜಕೀಯ ಕಾರಣಕ್ಕಾಗಿ ಅನರ್ಹರಿಗೆ ಮೀಸಲಾತಿ ನೀಡುವುದು, ಇವೆಲ್ಲ ಅವುಗಳಲ್ಲಿ ಸೇರಿವೆ.

ಭಾರತ ನವ ಗಣರಾಜ್ಯವಾದ ದಿನಗಳಲ್ಲಿ ಸುಪ್ರೀಂ ಕೋರ್ಟ್ ಎದುರು ಬಂದ ಪ್ರಕರಣಗಳಲ್ಲಿ ಹೆಚ್ಚಿನವು ಮೀಸಲಾತಿಯನ್ನು ವಿರೋಧಿಸಿದ್ದವು. ಅವುಗಳಲ್ಲಿ ಕೆಲವನ್ನು ನೋಡೋಣ. ‘ಮದರಾಸು ರಾಜ್ಯ v/s ಚಂಪಕ ದೊರೈ ರಾಜನ್’ ಎನ್ನುವ ಪ್ರಕರಣದಲ್ಲಿ ಸಾಮಾಜಿಕ - ಶೈಕ್ಷಣಿಕ ಹಿಂದುಳಿದ ಸಮುದಾಯಗಳಿಗೆ ಮೀಸಲು ನೀಡಬೇಕು, ಆದರೆ ಜಾತಿ ಆಧಾರಿತ ಮೀಸಲಾತಿ ನೀಡಿದರೆ ಈ ನಿಯಮವನ್ನು ಪಾಲಿಸಿದಂತೆ ಆಗುತ್ತದೆಯೇ ಎನ್ನುವ ಪ್ರಶ್ನೆ ನ್ಯಾಯಾಲಯದ ಮುಂದೆ ಬಂತು. ಜಾತಿ ಎನ್ನುವುದು ಸಾಮಾಜಿಕ - ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಸೂಚಿಸುತ್ತದೆ ಎನ್ನುವ ಮಹತ್ವದ ತೀರ್ಪು ಈ ಪ್ರಕರಣದಲ್ಲಿ ಬಂತು.

‘ಸುರಜ ಭಾನ್ ಮೀನಾ v/s ರಾಜಸ್ಥಾನ’ ಪ್ರಕರಣದಲ್ಲಿ ಸಮಾಜಗಳ ಹಿಂದುಳಿದಿರುವಿಕೆಯ ಮತ್ತು ಅಸಮರ್ಪಕ ಪ್ರಾತಿನಿಧ್ಯಗಳ ವೈಜ್ಞಾನಿಕ ಸರ್ವೇಕ್ಷಣೆ ಇಲ್ಲದೆ ಯಾವುದೇ ಸಮುದಾಯಕ್ಕೂ ಮೀಸಲು ಸೌಲಭ್ಯ ನೀಡಲು ಅಥವಾ ಘೋಷಣೆ ಮಾಡಲು ಬರುವುದಿಲ್ಲ ಎನ್ನುವ ತೀರ್ಪು ಬಂತು.

ಎಂ.ಜಿ. ಬಡೆಪ್ಪನವರ ಪ್ರಕರಣದಲ್ಲಿ ಯಾವುದೇ ಸಮುದಾಯಕ್ಕೆ ಮೀಸಲು ನೀಡುವುದು-ಬಿಡುವುದು ಪ್ರಭುತ್ವದ ಯಾದೃಚ್ಛಿಕ ಅಧಿಕಾರಗಳಲ್ಲಿ ಒಂದು. ಅದು ಕಡ್ಡಾಯ ಅಲ್ಲ ಎನ್ನುವ ತೀರ್ಪು ಬಂತು.

ಸಿ. ಲೀಲಾ ಪ್ರಸಾದ್, ವೆಂಕಟೇಶ್ ಹಾಗೂ ಶ್ರೀವಿದ್ಯಾ ಪ್ರಕರಣಗಳಲ್ಲಿ ಹೊರ ಹೊಮ್ಮಿದ ಪರಿಕಲ್ಪನೆ ಎಂದರೆ ಲಂಬ ಮೀಸಲು ಹಾಗೂ ಸಮತಲ ಮೀಸಲು ಪದ್ಧತಿ. ಎಲ್ಲಾ ಜಾತಿ ಹಾಗೂ ಉಪಜಾತಿಗಳಿಗೆ ನ್ಯಾಯ ದೊರಕಬೇಕು ಎನ್ನುವ ನಿಟ್ಟಿನಲ್ಲಿ ಲಂಬ ಹಾಗೂ ಸಮತಲ ಮೀಸಲು ವ್ಯವಸ್ಥೆ ಜಾರಿಯಾಗಬೇಕು. ಅಂದರೆ ಉಪಜಾತಿಗಳಿಗೆ ಅವರ ಜನಸಂಖ್ಯೆಗೆ ತಕ್ಕ ಪ್ರಮಾಣದಲ್ಲಿ ಮೀಸಲು ದೊರೆಯಬೇಕು. ಕೆಲ ಜಾತಿ ಗಳು ಸದಾಕಾಲ ಮೇಲ್‌ಮುಖ ಚಾಲನೆಯಲ್ಲಿ ಇರುವುದರಿಂದ ಆಯಾ ಕಾಲಕ್ಕೆ ಅವುಗಳ ಮೀಸಲು ವ್ಯವಸ್ಥೆಯ ಪುನರ್ ಚಿಂತನೆ ಆಗಬೇಕು ಎನ್ನುವುದು ಈ ತೀರ್ಪುಗಳ ಇನ್ನೊಂದು ವಿಶೇಷ. ಈ ತೀರ್ಪುಗಳ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಅನೇಕ ದಶಕಗಳಿಂದ ನನೆಗುದಿಗೆ ಬಿದ್ದಿರುವ ನ್ಯಾಯಮೂರ್ತಿ ಸದಾಶಿವ ಸಮಿತಿ ವರದಿಯನ್ನು ನೋಡಬೇಕು.

ಇನ್ನು ಮೀಸಲಾತಿಯ ಬಗ್ಗೆ ಮಾತಾಡುವ ಎಲ್ಲರಿಗೂ ಗೊತ್ತಿರುವ ಅಥವಾ ಗೊತ್ತಿದ್ದಂತೆ ಕಾಣುವ ತೀರ್ಪು ಎಂದರೆ ಇಂದಿರಾ ಸಹಾನಿ ಪ್ರಕರಣ. ಇದು ಸರಕಾರದ ನೀತಿ ನಿರೂಪಣೆಯನ್ನೇ ಬದಲಾಯಿಸಿತು. ಮೀಸಲಾತಿ ಎನ್ನುವುದು ಅಪವಾದ, ಪ್ರತಿಭೆ ಎನ್ನುವುದೇ ನಿಯಮ ಎನ್ನುವ ತೀರ್ಪು ಬಂತು. ಮಿಸಲಾತಿಗೆ ಶೇ. 50ರ ಮಿತಿ ನೀಡಲಾಯಿತು. ಇತರ ಹಿಂದುಳಿದ ವರ್ಗಗಳ ಮೀಸಲಿಗೆ ರಾಜ್ಯ ಮಟ್ಟದ ಆಯೋಗ ನೇಮಕ ಮಾಡಲಾಯಿತು, ಮಂಡಲ ವರದಿಯ ಪರ ವಿರೋಧ ಹೋರಾಟಗಳು ಇಡೀ ದೇಶದಲ್ಲಿ ಹಬ್ಬಿದವು. ಇದರ ಪರಿಣಾಮ ಏನು ಎಂದರೆ ಮೀಸಲು ಸೌಲಭ್ಯ ಎನ್ನುವುದು ಸರಕಾರದ ಅನುಗ್ರಹವೇ ಹೊರತು, ಹಿಂದುಳಿದ ಜಾತಿಗಳ ಹಕ್ಕು ಅಲ್ಲ, ಎನ್ನುವ ಅಭಿಪ್ರಾಯ ಸಮಾಜದಲ್ಲಿ ಮೂಡಿತು. ಆದರೆ ಆರ್ಥಿಕ ಮೀಸಲಾತಿ ನೀಡುವಾಗ ಕೇಂದ್ರ ಸರಕಾರ ಶೇ. 50ರ ಮಿತಿಯನ್ನು ಮೀರಿತು.

‘ಅಶೋಕ್ ಕುಮಾರ್ ಠಾಕೂರ್ v/s ಬಿಹಾರ’ ಪ್ರಕರಣದಲ್ಲಿ ರಾಜ್ಯ ಸರಕಾರವು ಕೆನೆ ಪದರ ನಿರ್ಧಾರ ಮಾಡಿದ ಅರ್ಹತೆ ಮಾನದಂಡಗಳು ಸರಿ ಇಲ್ಲ. ಸಂವಿಧಾನ ವಿರೋಧಿ ಆಗಿವೆ. ಇತರ ಹಿಂದುಳಿದ ಜಾತಿಗಳಿಗೆ ಕೆನೆ ಪದರ ಇರಬೇಕು, ಪರಿಶಿಷ್ಟ ಜಾತಿ/ ಪಂಗಡಗಳಿಗೆ ಬೇಕಿಲ್ಲ ಎನ್ನುವ ತೀರ್ಪು ಬಂತು. ಪ್ರತೀ ಹತ್ತು ವರ್ಷಗಳಿಗೆ ಒಮ್ಮೆ ಹಿಂದುಳಿದ ಜಾತಿಗಳ ಹಾಗೂ ಮೀಸಲು ಕೋಟಾಗಳ ಮರು ವಿಂಗಡಣೆ ಆಗಬೇಕು ಎನ್ನುವ ಅಭಿಪ್ರಾಯವನ್ನು ಕೋರ್ಟು ವ್ಯಕ್ತಪಡಿಸಿತು.

ಸಂವಿಧಾನದಲ್ಲಿ ಭಾಷಾ ಹಾಗೂ ಮತೀಯ ಅಲ್ಪಸಂಖ್ಯಾತ ಸಮುದಾಯಗಳಿಗೆ ತಮ್ಮದೇ ಆದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ ಇದೆ. ಆದರೆ ಇದನ್ನು ದುರುಪಯೋಗ ಪಡೆದುಕೊಳ್ಳಬಾರದು ಎನ್ನುವ ತೀರ್ಪು ‘ಉನ್ನಿಕೃಷ್ಣನ್ v/s ಆಂಧ್ರಪ್ರದೇಶ’ ಪ್ರಕರಣದಲ್ಲಿ ಬಂತು.

ಆಂಧ್ರಪ್ರದೇಶ ಕ್ರಿಶ್ಚಿಯನ್ ಮೆಡಿಕಲ್ ಅಸೋಸಿಯೇಷನ್ ಪ್ರಕರಣದಲ್ಲಿ ಅಲ್ಪಸಂಖ್ಯಾತ ಸ್ಥಾನಮಾನ ಪಡೆದ ಸಂಸ್ಥೆಗಳು ಕೇವಲ ಲಾಭಕ್ಕಾಗಿ ಈ ಸೌಲಭ್ಯವನ್ನು ದುರುಪಯೋಗ ಪಡೆಸಿಕೊಳ್ಳಬಾರದು ಎನ್ನುವ ತೀರ್ಪು ಬಂತು.

 ‘ಟಿಎಂಎಪಿ ಫೌಂಡೇಷನ್ v/s ಕರ್ನಾಟಕ’ ಪ್ರಕರಣದಲ್ಲಿ ಖಾಸಗಿ ಸಂಸ್ಥೆಗಳು ಹೇಗೆ ಆಡಳಿತ ನಡೆಸಬೇಕು ಎನ್ನುವುದರ ಬಗ್ಗೆ ಸರಕಾರ ಕಾಯ್ದೆ ಕಾನೂನು ರೂಪಿಸಬಹುದು, ಆದರೆ ಆ ಕಾಯ್ದೆ ಕಾನೂನುಗಳು ಆ ಸಂಸ್ಥೆಗಳ ಅಲ್ಪಸಂಖ್ಯಾತ ಸ್ವರೂಪವನ್ನು ಬುಡಮೇಲು ಮಾಡುವಂತೆ ಇರಬಾರದು ಎನ್ನುವ ತೀರ್ಪು ಬಂತು. ಇದರ ಒಂದು ಭಾಗದಲ್ಲಿ ಶಿಕ್ಷಣ ಸಂಸ್ಥೆ ನಡೆಸುವವರು ಅಲ್ಪಲಾಭ ಮಾಡಿಕೊಂಡರೆ ತಪ್ಪೇನೂ ಇಲ್ಲ ಎನ್ನುವ ಅಭಿಪ್ರಾಯ ಇತ್ತು. ಅದನ್ನು ಸರಕಾರ ಹಾಗೂ ಖಾಸಗಿ ಸಂಸ್ಥೆಗಳು ಗ್ರಹಿಸಿದ ರೀತಿ ವಿಭಿನ್ನವಾಗಿತ್ತು.

 ‘ಪಿ.ಎ. ಇನಾಮದಾರ v/s ಮಹಾರಾಷ್ಟ್ರ’ ಎನ್ನುವ ಪ್ರಕರಣದಲ್ಲಿ ಸರಕಾರದ ಅನುದಾನ ಪಡೆಯದ ಖಾಸಗಿ ಸಂಸ್ಥೆಗಳ ಮೇಲೆ ಸರಕಾರ ಮೀಸಲು ನೀತಿಯನ್ನು ಜಾರಿಗೊಳಿಸುವಂತೆ ಒತ್ತಾಯ ಮಾಡಲು ಆಗದು ಎನ್ನುವ ತೀರ್ಪು ಬಂತು. ಅದನ್ನು ಸಂವಿಧಾನದ 93ನೇ ತಿದ್ದುಪಡಿಯಿಂದ ಸಂಪೂರ್ಣ ಬದಲು ಮಾಡಲಾಯಿತು.

ಕೇರಳ ಎಜುಕೇಶನ್ ಬಿಲ್ ಪ್ರಕರಣದಲ್ಲಿ ರಾಜ್ಯ ಸರಕಾರ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ವಿಶ್ವವಿದ್ಯಾನಿಲಯದ ನಿಯಮಗಳನ್ನು ರೂಪಿಸುವಂತಿಲ್ಲ ಎನ್ನುವ ವಾದ ಮಂಡಿಸಲಾಯಿತು. ಕೋರ್ಟು ಇದನ್ನು ತಳ್ಳಿಹಾಕಿತು.

ಸೈಂಟ್ ಸ್ಟೀಫನ್ ಕಾಲೇಜ್ ಪ್ರಕರಣದಲ್ಲಿ ಸರಕಾರ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎನ್ನುವ ವಾದ ಮಂಡಿಸಲಾಯಿತು. ಕೋರ್ಟು ಇದನ್ನು ತಳ್ಳಿ ಹಾಕಿತು.

ಕರ್ನಾಟಕ ಸರಕಾರ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಎನ್ನುವುದರ ವ್ಯಾಖ್ಯಾನವನ್ನು ಬದಲು ಮಾಡಲು ಪ್ರಯತ್ನ ಮಾಡಿ ಯಾವ ಸಂಸ್ಥೆಯಲ್ಲಿ ಎಷ್ಟು ಪ್ರಮಾಣದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಇರಬೇಕು ಎನ್ನುವ ಪ್ರಮಾಣವನ್ನು ನಿರ್ಧಾರ ಮಾಡಿ ಆದೇಶ ಹೊರಡಿಸಿತು. ಶೇ. 75 ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಇರಬೇಕು ಎನ್ನುವ ನಿಯಮವನ್ನು ಬದಲಾಯಿಸಿ ಶೇ. 50 ಹಾಗೂ ಶೇ. 25ಕ್ಕೆ ಅದನ್ನು ಇಳಿಸಲಾಯಿತು.

ಇನ್ನು ಜಗತ್ತಿನ ಅನೇಕ ದೇಶಗಳಲ್ಲಿ ಅಲ್ಲಿನ ಜನರ ಭಾಷೆಯೇ ಆಡಳಿತ ಭಾಷೆ ಹಾಗೂ ಶಿಕ್ಷಣದ ಮಾಧ್ಯಮ. ಅದು ಬಹು ಮಟ್ಟಿಗೆ ಭಾರತದಲ್ಲಿ ಸಾಧ್ಯವಾಗಿಲ್ಲ. ಅದನ್ನು ಜಾರಿ ಮಾಡಲು ಜನರಲ್ಲಿ ಜಾಗೃತಿಯ ಅವಶ್ಯಕತೆ ಇದೆ. ಅದನ್ನು ವಿರೋಧಿಸುವವರಲ್ಲಿ ಡೊನೇಷನ್ ಲಾಬಿ ಅವರ ಕೈವಾಡವೂ ಇದೆ ಎನ್ನುವ ಬಗ್ಗೆ ಜಾಗೃತಿ ಎಲ್ಲರಿಗೂ ಇದ್ದರೆ ಮುಂದಿನ ದಾರಿ ಸುಲಭ.

Similar News