×
Ad

ಎನ್‌ಜಿಓದಿಂದ ಮತದಾರರ ಮಾಹಿತಿ ಕಳವು: ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕರ ಗಂಭೀರ ಆರೋಪ

ಸಿಎಂ ಬೊಮ್ಮಾಯಿ, ಸಚಿವ ಅಶ್ವತ್ಥನಾರಾಯಣ ರಾಜೀನಾಮೆಗೆ ಒತ್ತಾಯ

Update: 2022-11-17 10:48 IST

ಬೆಂಗಳೂರು, ನ. 17: ‘ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡುವ ಮೂಲಕ ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರಗಳ ಮತದಾರರ ಮಾಹಿತಿ ಕಳುವಿಗೆ ಕಾರಣವಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರ ವಿರುದ್ಧ ಎಫ್‍ಐಆರ್ ದಾಖಲಾಗಿ, ಅವರ ಬಂಧನವಾಗಬೇಕು. ಈ ಪ್ರಕರಣದ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.

ಗುರುವಾರ ಕ್ವೀನ್ಸ್‍ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಇನ್ನಿತರ ಮುಖಂಡರು ಜಂಟಿ ಸುದ್ದಿಗೋಷ್ಟಿ ನಡೆಸಿ, ಮತದಾರರ ಮಾಹಿತಿ ಕಳುವಿಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೆವಾಲ, ‘ಚಿಲುಮೆ’ ಎಂಬ ಖಾಸಗಿ ಸಂಸ್ಥೆ ಮತದಾರರ ಜಾಗೃತಿ ಹಾಗೂ ಮತದಾರರ ಪಟ್ಟಿಯನ್ನು ಉಚಿತವಾಗಿ ಪರಿಷ್ಕರಣೆ ಮಾಡುತ್ತೇವೆಂದು 2022ರ ಆಗಸ್ಟ್ 19ರಂದು ಅರ್ಜಿ ಹಾಕಿದ್ದರು. ಆಗಸ್ಟ್ 20ರಂದು ಯಾವುದೇ ಜಾಹೀರಾತು ನೀಡದೆ ಖಾಸಗಿ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಅನುಮತಿ ನೀಡಲಾಯಿತು. ಈ ಸಂಸ್ಥೆಯವರಿಗೆ ಯಾವುದೇ ಅನುಭವ ಇಲ್ಲದಿದ್ದರೂ ಅನುಮತಿ ನೀಡಲಾಗಿದೆ. ಜನರ ಮಾಹಿತಿ ಪಡೆಯಲು ತಮ್ಮ ಸಿಬ್ಬಂದಿಗೆ ಬೂತ್ ಮಟ್ಟದ ಅಧಿಕಾರಿ(ಬಿಎಲ್‍ಒ) ಎಂಬ ಗುರುತಿನ ಚೀಟಿ ನೀಡಿದ್ದಾರೆ. ಕಾನೂನಿನ ಪ್ರಕಾರ ಸರಕಾರಿ, ಅರೆ ಸರಕಾರಿ ಸಿಬ್ಬಂದಿ ಹೊರತಾಗಿ ಬೇರೆಯವರು ಬಿಎಲ್‍ಒ ಆಗಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಖಾಸಗಿ ಸಂಸ್ಥೆಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಯಾವುದೇ ಅನುಭವ ಇಲ್ಲದಿದ್ದರೂ ಜಾಗೃತಿ ಮೂಡಿಸುವುದಾಗಿ ತಿಳಿಸಿದೆ. ಇದರ ಜತೆಗೆ ಇನ್ನೆರಡು ಸಂಸ್ಥೆಗಳಾದ ಚಿಲುಮೆ ಎಂಟರ್ ಪ್ರೈಸಸ್ ಪ್ರೈ.ಲಿ ಹಾಗೂ ಡಿಎಪಿ ಹೊಂಬಾಳೆ ಪ್ರೈ.ಲಿ. ಭಾಗಿಯಾಗಿದ್ದು, ಈ 2 ಸಂಸ್ಥೆಗಳಿಗೆ ಕೃಷ್ಣಪ್ಪ ರವಿಕುಮಾರ್ ನಿರ್ದೇಶಕರಾಗಿದ್ದಾರೆ. ಈ ಎರಡು ಸಂಸ್ಥೆಗಳು ಜನರ ಬಳಿ ಹೋಗಿ ತಮ್ಮನ್ನು ಚುನಾವಣಾ ನಿರ್ವಹಣೆ ಕಂಪೆನಿಯಾಗಿದ್ದು, ನಾವು ಪಕ್ಷಗಳಿಗೆ ಇವಿಎಂ ತಯಾರಿ ಮಾಡುತ್ತೇವೆಂದು ಹೇಳಿಕೊಂಡಿದ್ದಾರೆ. ನಾವು ಇದುವರೆಗೂ ಇವಿಎಂ ಅನ್ನು ಸರಕಾರ ಮಾಡಲಿದೆ ಎಂದು ಕೇಳಿದ್ದೆವು. ಆದರೆ, ಇವಿಎಂ ಅನ್ನು ರಾಜಕೀಯ ಪಕ್ಷಗಳಿಗೆ ಮಾಡಲಾಗುತ್ತದೆ ಎಂದು ಕೇಳಿರಲಿಲ್ಲ’ ಎಂದು ಅವರು ತಿಳಿಸಿದರು.

‘ಈ ಸಂಸ್ಥೆಗಳು ಚುನಾವಣಾ ಆಯೋಗ ನಿಯೋಜಿಸಬೇಕಿದ್ದ ಬೂತ್ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಿ ಅಕ್ರಮ ಎಸಗಿದೆ. ಇವರನ್ನು ಸರಕಾರದ ಅಧಿಕಾರಿಗಳೆಂದು ಬಿಂಬಿಸಿ ಮನೆ, ಮನೆಗೂ ಹೋಗಿ ಪ್ರತಿ ಮತದಾರನ ಜಾತಿ, ಲಿಂಗ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಸೇರಿದಂತೆ ಅನೇಕ ಮಾಹಿತಿ ಕಲೆಹಾಕಲಾಗಿದೆ. ಹೀಗೆ ಕಲೆ ಹಾಕಿದ ಮಾಹಿತಿಯನ್ನು ಚುನಾವಣಾ ಆಯೋಗದ ಗರುಡ ಆಪ್ ನಲ್ಲಿ ಆಪ್ ಲೋಡ್ ಮಾಡದೇ, ಖಾಸಗಿ ಸಂಸ್ಥೆಯ ಆಪ್ ಆದ ಡಿಜಿಟಲ್ ಸಮೀಕ್ಷಾದಲ್ಲಿ ಅಪ್ ಲೋಡ್ ಮಾಡಲಾಗಿದೆ. ಆ ಮೂಲಕ ಎಂಪಿ, ಶಾಸಕರು, ಪಾಲಿಕೆ ಸದಸ್ಯರಿಗೆ ಸೇವೆ ಒದಗಿಸಿ ವ್ಯಾಪಾರ ಮಾಡಲು ಮುಂದಾಗಿದೆ’ ಎಂದು ಸುರ್ಜೇವಾಲ ದೂರಿದರು.

‘ಮೊದಲಿಗೆ ತಮ್ಮನ್ನು ಸರಕಾರದ ಅಧಿಕಾರಿಗಳೆಂದು ಬಿಂಬಿಸಿಕೊಂಡರು. ಎರಡನೆಯದಾಗಿ ತಮ್ಮವರಿಗೆ ನಕಲಿ ಗುರುತಿನ ಚೀಟಿ ನೀಡಿದರು. ಮೂರನೆಯದಾಗಿ ಅಕ್ರಮವಾಗಿ ಮತದಾರರಿಂದ ಮಾಹಿತಿ ಕಲೆ ಹಾಕಿದ್ದಾರೆ. ನಾಲ್ಕನೆಯದಾಗಿ ಇದನ್ನು ಖಾಸಗಿ ಆಪ್‍ನಲ್ಲಿ ಅಪ್‍ಲೋಡ್ ಮಾಡಿ ಅದನ್ನು ವಾಣಿಜ್ಯ ಉದ್ದೇಶಕ್ಕೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಈ ಮಾಹಿತಿಯನ್ನು ಬೇರೆ ಸಂಸ್ಥೆಗಳಿಗೂ ಮಾರಾಟ ಮಾಡಲಾಗುತ್ತಿದೆ’ ಎಂದು ಅವರು ಆರೋಪಿಸಿದರು.

 ‘ಕೃಷ್ಣಪ್ಪ ರವಿಕುಮಾರ್ ಎಂಬಾತ ಸರಕಾರದ ಹಿರಿಯ ಸಚಿವರ ಆಪ್ತರಾಗಿದ್ದಾರೆ. ಈ ಎಲ್ಲ ಕಂಪೆನಿಗಳು ಆ ಸಚಿವರ ಮಲ್ಲೇಶ್ವರ ಕ್ಷೇತ್ರದಲ್ಲಿ ಸ್ಥಾಪನೆಯಾಗಿವೆ. ಇವು ಮತದಾರರ ಮಾಹಿತಿ ಕಳವು, ಮಾಹಿತಿ ದುರ್ಬಳಕೆ, ನಂಬಿಕೆ ದ್ರೋಹದ ಅಪರಾಧ, ಪಿತೂರಿ ಅಪರಾಧ ಎಸಗಿವೆ. ಕೃಷ್ಣಪ್ಪ ರವಿಕುಮಾರ್ ತಮ್ಮ ಖಾಸಗಿ ಸಂಸ್ಥೆ ಸಿಬ್ಬಂದಿಗೆ ಬಿಎಲ್‍ಒ ಗುರುತಿನ ಚೀಟಿ ನೀಡಿದ್ದಾರೆ. ಇದು ಸರಕಾರಿ ಅಧಿಕಾರಿಗಳ ಸೋಗಿನಲ್ಲಿ ಮಾಡಲಾಗಿರುವ ಅಪರಾಧ. ಇದು ಐಪಿಸಿ ಸೆಕ್ಷನ್ ಪ್ರಕಾರ ಶಿಕ್ಷಾರ್ಹ ಅಪರಾಧ. ಇದರಿಂದ ರಾಜ್ಯದ ಜನರಿಗೆ ಯಾವ ಸಂದೇಶ ಹೋಗುತ್ತದೆ. ಇದರ ಹಿಂದಿನ ಉದ್ದೇಶವೇನು? ಇದು ಸ್ಪಷ್ಟ ಮೋಸ, ವಂಚನೆಯಾಗಿದೆ’ ಎಂದು ಸುರ್ಜೇವಾಲ ವಿವರ ನೀಡಿದರು.

‘ನ.16ರಂದು ಸಂಸ್ಥೆಗೆ ನೀಡಲಾಗಿದ್ದ ಅನುಮತಿಯನ್ನು ರದ್ದುಗೊಳಿಸಲಾಗಿದೆ ಎಂದು ಸರಕಾರ ಆದೇಶ ಹೊರಡಿಸಿದೆ. ಆದರೆ ರದ್ದು ಮಾಡಲು ಕಾರಣ ಏನು ಎಂದು ತಿಳಿಸಿಲ್ಲ. ನೀವು ಷರತ್ತು ಉಲ್ಲಂಘನೆ ಮಾಡಿದ್ದು ಹೀಗಾಗಿ ಅನುಮತಿ ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ. ಇದರ ಹಿಂದೆ ಬಸವರಾಜ ಬೊಮ್ಮಾಯಿ ಅವರು ಇದ್ದಾರೆ. ಈ ಅಕ್ರಮಕ್ಕೆ ಬೊಮ್ಮಾಯಿ ಅವರೇ ನೇರ ಹೊಣೆ’ ಎಂದು ಅವರು ವಾಗ್ದಾಳಿ ನಡೆಸಿದರು.

‘ಮತದಾನದ ಅಕ್ರಮದ ಹಿಂದಿನ ಷಡ್ಯಂತ್ರ. ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪಂಗಡದವರು, ಹಿಂದುಳಿದ ವರ್ಗದ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಈ ಸಂಚು ನಡೆದಿದೆ. ಆ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಸರಕಾರ, ಬಿಬಿಎಂಪಿ ಚುನಾವಣೆಯನ್ನು ಮುಂದೂಡುತ್ತಿದೆ. ಕೋರ್ಟ್ ಡಿ.31ರ ಒಳಗೆ ಚುನಾವಣೆ ಮಾಡಬೇಕು ಎಂದು ಗಡವು ನೀಡಿದ ನಂತರ ಸಿಎಂ ಇಂತಹ ಮೋಸದ ಕೆಲಸಕ್ಕೆ ಕೈಹಾಕಿದ್ದೀರಾ? ಈ ಚುನಾವಣಾ ಪ್ರಕ್ರಿಯೆ ಬಗ್ಗೆ ಕೇಂದ್ರ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್‍ನ ಮುಖ್ಯ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು’ ಎಂದು ಅವರು ಆಗ್ರಹಿಸಿದರು.

ಅನುಮತಿ ನೀಡಿದ್ದು ಯಾರು?: ‘ಚಿಲುಮೆ ಎಂಬ ಖಾಸಗಿ ಸಂಸ್ಥೆಗೆ ಸರಕಾರ ಹಾಗೂ ಬಿಬಿಎಂಪಿ ಬದಲಿಗೆ ಕೆಲಸ ಮಾಡಲು ಅನುಮತಿ ನೀಡಿದ್ದು ಯಾರು?, ಯಾವ ಆಧಾರದ ಮೇಲೆ ಈ ಸಂಸ್ಥೆಗಳಿಗೆ ಒಂದೇ ದಿನದಲ್ಲಿ ಅನುಮತಿ ನೀಡಲಾಯಿತು?, ನಗರದ ಉಸ್ತುವಾರಿ ಸಚಿವರಾಗಿರುವ ನೀವಾಗಲಿ, ಬಿಬಿಎಂಪಿ ಆಗಲಿ, ಚುನಾವಣಾ ಉಸ್ತುವಾರಿ ಅಧಿಕಾರಿಗಳಾಗಲಿ ಚುನಾವಣೆ ಕೆಲಸವನ್ನು ಖಾಸಗಿ ಸಂಸ್ಥೆಗೆ ನೀಡುವ ಮುನ್ನ ಯಾಕೆ ಜಾಹೀರಾತು ಪ್ರಕಟಿಸಲಿಲ್ಲ?’ ಎಂದು ಸುರ್ಜೇವಾಲ ಪ್ರಶ್ನಿಸಿದರು.

‘ರಾಜ್ಯದಲ್ಲಿ ಸಾವಿರಾರು ಎನ್‍ಜಿಒಗಳಿದ್ದು, ಅವುಗಳ ಪೈಕಿ ಈ ಖಾಸಗಿ ಸಂಸ್ಥೆಗೆ ಅನುಮತಿ ನೀಡಲು ಶಿಫಾರಸ್ಸು ಮಾಡಿದ್ದು ಯಾರು? ಬಿಬಿಎಂಪಿ, ಜಿಲ್ಲಾ ಉಸ್ತುವಾರಿಗಳು, ಚುನಾವಣಾ ಅಧಿಕಾರಿಗಳು ಈ ಸಂಸ್ಥೆಯ ಅನುಭವದ ಬಗ್ಗೆ ಪರಿಶೀಲನೆ ನಡೆಸಲಿಲ್ಲ ಏಕೆ?, ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಎಲ್ಲ ಮನೆಗಳ ಸಮೀಕ್ಷೆಯನ್ನು ಉಚಿತವಾಗಿ ಮಾಡುತ್ತೇವೆ ಎಂದಾಗಲೇ ಸರಕಾರಕ್ಕೆ ಅನುಮಾನ ಯಾಕೆ ಬರಲಿಲ್ಲ? ಎಂದು ಅವರು ಕೇಳಿದರು.

‘ಬೆಂಗಳೂರು ಉಸ್ತುವಾರಿ ಹೊತ್ತಿರುವ ಸಿಎಂ, ಬಿಬಿಎಂಪಿ ಮುಕ್ತ ಆಯುಕ್ತರು, ಚುನಾವಣಾ ಅಧಿಕಾರಿಗಳೆಲ್ಲರೂ ಈ ಮತದಾರರ ಮಾಹಿತಿ ಕಳುವಿನಲ್ಲಿ ಭಾಗಿಯಾಗಿದ್ದಾರೆಂದು ಸಾಬೀತಾಗುವುದಿಲ್ಲವೇ?, ಖಾಸಗಿ ಸಂಸ್ಥೆಯೊಂದು ಬೆಂಗಳೂರಿನ ಪ್ರತಿಯೊಬ್ಬ ಮತದಾರರ ಪಟ್ಟಿಯನ್ನು ಕಲೆ ಹಾಕಲು ಹೇಗೆ ಸಾಧ್ಯ? ಇದು ಕಳ್ಳತನಕ್ಕೆ ಸಾಕ್ಷಿಯಲ್ಲವೇ? ಇದು ಖಾಸಗಿ ಹಕ್ಕಿನ ಚ್ಯುತಿಯಲ್ಲವೇ?, ಜನಪ್ರತಿನಿಧಿ ಕಾಯ್ದೆ ಸೆ.13 ‘ಬಿ’ ಪ್ರಕಾರ ಸರಕಾರಿ ಸಿಬ್ಬಂದಿ, ಅರೆ ಸರಕಾರಿ ಅಥವಾ ಸ್ಥಳಿಯ ಪಾಲಿಕೆ ಅಧಿಕಾರಿಗಳು ಮಾತ್ರ ಬೂತ್ ಮಟ್ಟದ ಅಧಿಕಾರಿಗಳಾಗಬಹುದು. ಹಾಗಿದ್ದರೆ ಖಾಸಗಿ ಸಂಸ್ಥೆಯ ಸಿಬ್ಬಂದಿಗಳನ್ನು ಸರಕಾರದ ಅಧಿಕಾರಿಗಳೆಂದು ಹೇಳಿ ಬೂತ್‍ಮಟ್ಟದ ಆಧಿಕಾರಿಗಳೆಂದು ಗುರುತಿನ ಚೀಟಿ ನೀಡಿದ್ದು ಹೇಗೆ?’ ಎಂದು ಅವರು ಆಕ್ರೋಶ ಹೊರಹಾಕಿದರು.

ಸುದ್ದಿಗೋಷ್ಟಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಮಾಜಿ ಸಚಿವರಾದ ಡಾ.ಜಿ.ಪರಮೇಶ್ವರ್, ಎಚ್.ಎಂ.ರೇವಣ್ಣ ಸೇರಿದಂತೆ ಇನ್ನಿತರ ಮುಖಂಡರು ಹಾಜರಿದ್ದರು.


ಬಿಜೆಪಿ ಶಾಮೀಲಾಗಿದೆ: ‘ಬಿಬಿಎಂಪಿ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಈ ಹಗರಣವನ್ನು ನಡೆಸಿರುವಂತೆ ಮೇಲ್ನೊಟಕ್ಕೆ ಕಾಣುತ್ತಿದ್ದರೂ ಮುಂದಿನ ದಿನಗಳಲ್ಲಿ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಇಡೀ ರಾಜ್ಯಕ್ಕೆ ಈ ಆಪರೇಷನ್ ವಿಸ್ತರಿಸುವ ದುರುದ್ದೇಶ ಇದ್ದಂತಿದೆ. ಇಂತಹ ಹಗರಣಗಳಿಂದ ಜನತೆ ಚುನಾವಣಾ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನೇ ಕಳೆದುಕೊಳ್ಳಲಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಕೇಂದ್ರ ಚುನಾವಣಾ ಆಯೋಗ ತಕ್ಷಣ ಮಧ್ಯಪ್ರವೇಶಿಸಿ ತನಿಖೆಯಲ್ಲಿ ಸಹಕಾರ ನೀಡಬೇಕು. ‘ಶೇ.40ರಷ್ಟು ಭ್ರಷ್ಟಾಚಾರ ಮತ್ತು ಆಂತರಿಕ ಬಿಕ್ಕಟ್ಟಿನಲ್ಲಿ ಮುಳುಗಿಹೋಗಿರುವ ಬಿಜೆಪಿ ಸರಕಾರ ಸಾಧನೆಯ ಬಲದಿಂದ ಚುನಾವಣೆ ಗೆಲ್ಲುವ ವಿಶ್ವಾಸವನ್ನು ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ವಾಮಮಾರ್ಗದಿಂದ ಗೆಲ್ಲಲು ಸಂಚು ಹೂಡಿದ್ದಾರೆ. ಇದರಲ್ಲಿ ಮುಖ್ಯಮಂತ್ರಿ ಮಾತ್ರವಲ್ಲ ಬಿಜೆಪಿ ಪಕ್ಷವೇ ಶಾಮೀಲಾಗಿದೆ’ 

-ಸಿದ್ಧರಾಮಯ್ಯ ಪ್ರತಿಪಕ್ಷ ನಾಯಕ

Similar News