ಪ್ರಿಯಾಂಕ್ ಖರ್ಗೆಗೆ ಬೆದರಿಕೆ; ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿ: ಫೋರಮ್ ಫಾರ್ ಜಸ್ಟೀಸ್

Update: 2022-11-17 11:56 GMT

ಬೆಂಗಳೂರು, ನ. 17: ಬಿಜೆಪಿ ಸರಕಾರದ ಹಗರಣಗಳು ಸೇರಿದಂತೆ ಆರೆಸ್ಸೆಸ್‍ನ ಜನವಿರೋಧಿ ಧೋರಣೆಯನ್ನು ಶಾಸಕ ಪ್ರಿಯಾಂಕ್ ಖರ್ಗೆ ಬಹಿರಂಗಪಡಿಸುತ್ತಿದ್ದು, ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಶಾಸಕರಿಗೆ ಹಾಕಿದ ಕೊಲೆ ಬೆದರಿಕೆ ಪ್ರಕರಣವೇ ಸಾಕ್ಷಿಯಾಗಿದೆ ಎಂದು ಫೋರಮ್ ಫಾರ್ ಜಸ್ಟೀಸ್ ಟೀಕಿಸಿದೆ.

ಗುರುವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಬಿಜೆಪಿ ಸರಕಾರವು ಅಧಿಕಾರಕ್ಕೆ ಬಂದ ದಿನದಿಂದ ಸಂವಿಧಾನ ಆಶಯಗಳು ಮೂಲೆಗುಂಪಾಗಿವೆ. ಜನರನ್ನು ಜಾತಿ, ಧರ್ಮ, ಭಾಷಾ ವೈಷಮ್ಯಕ್ಕೆ ದೂಡಲಾಗಿದೆ. ಇದಲ್ಲದೆ ಶೋಷಿತ ಸಮುದಾಯಗಳ ಮೇಲೆ ನಿರಂತರವಾಗಿ ಹಲ್ಲೆಗಳನ್ನು ನಡೆಸಲಾಗುತ್ತಿದೆ ಎಂದು ಕಿಡಿಕಾರಿದರು. 

ಬಿಜೆಪಿಯ ಜನಪ್ರತಿನಿಧಿಗಳಾದ ಸಿ.ಟಿ. ರವಿ, ಕೆ.ಎಸ್. ಈಶ್ವರಪ್ಪ ಸೇರಿ ಅನೇಕರು ಬಹಿರಂಗವಾಗಿ ಹಿಂಸೆ ಪ್ರಚೋದನೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳೇ ಕೋಮುಗಲಭೆಗಳು ನಡೆದಾಗ, ಪರಿಸ್ಥಿತಿಯನ್ನು ತಿಳಿಗೊಳಿಸುವ ಬದಲಿಗೆ ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೇಳುತ್ತಿದ್ದಾರೆ. ಹಾಗಾಗಿ ಸದಾ ಹಿಂಸೆಗೆ ದೂಡುವ ಸರಕಾರ ರಾಜ್ಯದಲ್ಲಿ ಅಸ್ಥಿತ್ವವನ್ನು ಪಡೆದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ದಲಿತ ಮುಖಂಡ ಪುರುಷೋತ್ತಮ್ ದಾಸ್ ಮಾತನಾಡಿ, ದಲಿತ ಶಾಸಕನೊಬ್ಬ ಬಿಟ್ ಕಾಯಿನ್ ಹಗರಣ ಹಾಗೂ ಪಿಎಸ್‍ಐ ನೇಮಕಾತಿ ಹಗರಣವನ್ನು ಬಯಲಿಗೆ ಎಳೆದಿದ್ದಾನೆ ಎಂದು ಬಿಜೆಪಿಯವರಿಗೆ ನುಂಗಲಾರದು ತುತ್ತಾಗಿ ಪರಿಣಮಿಸಿದೆ. ಹಾಗಾಗಿ ಇಂತಹ ಬೆದರಿಕೆಗಳನ್ನು ಹಾಕುತ್ತಿದ್ದು, ಈ ಕುತಂತ್ರವನ್ನು ಬಿಜೆಪಿ ಸರಕಾರ ನಿಲ್ಲಿಸದಿದ್ದಲ್ಲಿ, ದಲಿತ ಸಮುದಾಯವು ಬಿಜೆಪಿಗೆ ತಕ್ಕ ಪಾಠವನ್ನು ಕಲಿಸುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು. ಗೋಷ್ಠಿಯಲ್ಲಿ ದಲಿತ ಮುಖಂಡ ಮಹದೇವಸ್ವಾಮಿ, ಡಾ.ದೇವಾನಂದ್ ಉಪಸ್ಥಿತರಿದ್ದರು.

Similar News