×
Ad

ಕುಂದಾಪುರ: ‘ಕಾರ್ಮಿಕರ ಶಕ್ತಿ’ ಪ್ರದರ್ಶಿಸಿದ ಸಿಐಟಿಯು ಮೆರವಣಿಗೆ

Update: 2022-11-17 19:07 IST

ಕುಂದಾಪುರ: ಕಾರ್ಮಿಕರ ಐಕ್ಯತೆ -ಜನತೆಯ ಸೌಹಾರ್ದತೆಗಾಗಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ವತಿಯಿಂದ ಮೂರು ದಿನಗಳ ಕಾಲ ಕುಂದಾಪುರದಲ್ಲಿ ನಡೆದ 15ನೇ ರಾಜ್ಯ ಸಮ್ಮೇಳನದ ಕೊನೆಯ ದಿನವಾದ ಗುರುವಾರ ‘ಕಾರ್ಮಿಕರ ಶಕ್ತಿ’ ಪ್ರದರ್ಶನಕ್ಕೆ ಸಾಕ್ಷಿಯಾಗಿ ನಗರದಲ್ಲಿ ಬೃಹತ್ ಮೆರವಣಿಗೆ ನಡೆಯಿತು.

ಕುಂದಾಪುರ ಶಾಸ್ತ್ರೀ ವೃತ್ತದ ಮೂಲಕವಾಗಿ ನಗರದಲ್ಲಿ ಸಂಚರಿಸಿದ ಮೆರವಣಿಗೆ ಹೊಸಬಸ್ಸು ನಿಲ್ದಾಣದವರೆಗೂ ಸಾಗಿ, ಪಾರಿಜಾತ ವೃತ್ತದ ಮೂಲಕ ಬಹಿರಂಗ ಸಭೆ ನಡೆದ ನೆಹರೂ ಮೈದಾನದಲ್ಲಿ ಮುಕ್ತಾಯಗೊಂಡಿತು. 

ಉಡುಪಿ ಜಿಲ್ಲೆಯ ವಿವಿಧ ಭಾಗಗಳು ಸೇರಿದಂತೆ ನಾಡಿನಾದ್ಯಂತದಿಂದ ಆಗಮಿಸಿದ ಸಾವಿರಾರು ಮಂದಿ ಕಾರ್ಮಿಕರು ಅಭೂತಪೂರ್ವ ರೀತಿಯಲ್ಲಿ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಇತಿಹಾಸ ಸೃಷ್ಟಿಯಾಯಿತು. 

ಹುಲಿವೇಷ, ಕೀಲುಕುದುರೆ, ಕೇರಳ ಬ್ಯಾಂಡ್, ಚೆಂಡೆ,  ಕೊಂಬು ಕಹಳೆ ವಾದನ ಹಾಗೂ ಕೆಂಬಾವುಟ ಹಿಡಿದ ಸಮವಸ್ತ್ರಧಾರಿ ಕಾರ್ಮಿಕರು ಮೆರವಣಿಗೆಯ ಮೆರುಗು ಇನ್ನಷ್ಟು ಹೆಚ್ಚಿಸಿದ್ದರು. ನಗರದಲ್ಲಿ ಮೆರವಣಿಗೆ ಸಾಗಿ ಬರುವಾಗ ಸಂಪೂರ್ಣ ಕೆಂಪುಮಯವಾದ ಸುಂದರ ದೃಶ್ಯ ಕಂಡುಬಂದಿತ್ತು. ಚೆಂಡೆ ವಾದನಕ್ಕೆ ಹೆಜ್ಜೆ ಹಾಕುವ ಮೂಲಕ ಕಾರ್ಮಿಕರು ತಮ್ಮ ಜೋಶ್ ತೋರಿದರು.

ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ಅವರು ಮೆರವಣಿಗೆಯ ವೇಳೆ ಚಂಡೆ ಬಾರಿಸುವ ಮೂಲಕ ಎಲ್ಲರ ಗಮನ ಸೆಳೆದರು. 

Similar News