×
Ad

ವಿದ್ಯಾರ್ಥಿನಿ ವಿರುದ್ಧ ಪೊಲೀಸ್ ದೌರ್ಜನ್ಯ ಆರೋಪ| ಬ್ರಹ್ಮಾವರ ಠಾಣೆ ಎದುರು ಪ್ರತಿಭಟನೆ: ಎಫ್‌ಐಆರ್ ದಾಖಲಿಸಲು ಆಗ್ರಹ

Update: 2025-12-17 20:53 IST

ಬ್ರಹ್ಮಾವರ, ಡಿ.17: ಉಪ್ಪೂರಿನ ವಿದ್ಯಾರ್ಥಿನಿ ಅಕ್ಷತಾ ಪೂಜಾರಿ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಬಿಲ್ಲವರ ಯುವವೇದಿಕೆ ನೇತೃತ್ವದಲ್ಲಿ ಬುಧವಾರ ಬ್ರಹ್ಮಾವರ ಪೋಲಿಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಾಯಿತು.

ವೇದಿಕೆಯ ನೇತೃತ್ವದಲ್ಲಿ ನೂರಾರು ಮಂದಿ ಪ್ರತಿಭಟನಕಾರರು ಬ್ರಹ್ಮಾವರದ ಆಕಾಶವಾಣಿ ಶ್ರೀನಾರಾಯಣಗುರು ಸಭಾಭವನದಿಂದ ಬ್ರಹ್ಮಾವರ ಪೋಲಿಸ್ ಠಾಣೆಯವರೆಗೆ ಮೆರವಣಿಗೆ ನಡೆಸಿದರು. ಠಾಣೆಯ ಎದುರು ಜಮಾಯಿಸಿದ ಪ್ರತಿಭಟನಾಕಾರರು, ದೌರ್ಜನ್ಯ ಎಸಗಿರುವ ಪೋಲಿಸರ ವಿರುದ್ಧ ಎಫ್‌ಐಆರ್ ದಾಖಲಿಸಿ, ಕರ್ತವ್ಯದಿಂದ ಅಮಾನತುಗೊಳಿಸುವಂತೆ ಆಗ್ರಹಿಸಿದರು.

ಧರಣಿಯನ್ನುದ್ದೇಶಿಸಿ ಮಾತನಾಡಿದ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ, ವಾರೆಂಟ್ ಜಾರಿ ಸಂಬಂಧ ಮಲ್ಪೆ ಪೊಲೀಸರು ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪೂರಿನಲ್ಲಿರುವ ಆರೋಪಿಯ ಸಂಬಂಧಿಕರ ಮನೆಗೆ ಬಂದು ಅಕ್ಷತಾಳ ಮೇಲೆ ದೌರ್ಜನ್ಯ ಎಸಗಿದ್ದಾರೆ. ಬಗ್ಗೆ ಅಕ್ಷತಾ ಪೂಜಾರಿ ಬ್ರಹ್ಮಾವರ ಠಾಣೆಗೆ ದೂರು ನೀಡಿದರೂ ಎಫ್‌ಐಆರ್ ದಾಖಲಿಸಲಿಲ್ಲ. ಆದರೆ ಆಕೆಯ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದರು.

ಆದುದರಿಂದ ಅಕ್ಷತಾ ನೀಡಿರುವ ಹೇಳಿಕೆಯಂತೆ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಬೇಕು. ಅಲ್ಲಿಯವರೆಗೆ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಅವರು ತಿಳಿಸಿದರು. ಇದೇ ವೇಳೆ ಸ್ಥಳದಲ್ಲಿ ಹಾಜರಿದ್ದ ಹೆಚ್ಚುವರಿ ಎಸ್ಪಿ ಸುಧಾಕರ್ ನಾಯ್ಕ್ ಹಾಗೂ ಉಡುಪಿ ಡಿವೈಎಸ್ಪಿ ಪ್ರಭು ಡಿಟಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು ಈಗಾಗಲೇ ಎಸ್ಪಿ ಈ ಬಗ್ಗೆ ಕ್ರಮ ಜರಗಿಸಿರುವುದಾಗಿ ಭರವಸೆ ನೀಡಿದ್ದಾರೆ ಎಂದುವ ಅವರು ಪ್ರತಿಭಟನಾಕಾರರಿಗೆ ಮಾಹಿತಿ ನೀಡಿದರು. ಆದರೆ ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದರು.

ಬಳಿಕ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಅಕ್ಷತಾಳಿಗೆ ಪೋಲಿಸರಿಂದ ದೌರ್ಜನ್ಯ ಆಗಿದ್ದರೇ, ಉಡುಪಿ ಜಿಲ್ಲಾ ಪೋಲಿಸ್ ದೂರು ಪ್ರಾಧಿಕಾರಕ್ಕೆ ದೂರು ನೀಡಲು ಮನವಿ ಮಾಡಿದರು. ಈ ಪ್ರಾಧಿಕಾರದ ಮೂಲಕ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಸಂತ್ರಸ್ತೆಗೆ ನ್ಯಾಯ ಒದಗಿಸುವ ಭರವಸೆ ನೀಡಿದರು. ಆದರೆ ಇದಕ್ಕೂ ಪ್ರತಿಭಟನಾಕಾರರು ಒಪ್ಪದೆ ತಮ್ಮ ಪಟ್ಟನ್ನು ಮುಂದುವರೆಸಿದರು.

ಮಧ್ಯಾಹ್ನ ಆರಂಭಗೊಂಡ ಪ್ರತಿಭಟನೆಯಲ್ಲಿ ಪ್ರತಿಭಟನಕಾರರು ತಮ್ಮ ಪಟ್ಟು ಸಡಿಲಿಸದೆ ಸಂಜೆ 7.30ರವರೆಗೆ ಮುಂದುವರೆಸಿದರು. ಪರಿಸ್ಥಿತಿ ತೀವ್ರ ಗೊಳ್ಳುತ್ತಿದ್ದಂತೆ ಹೆಚ್ಚುವರಿ ಪೊಲೀಸ್ ಪಡೆಯನ್ನು ಠಾಣಾ ಆವರಣದಲ್ಲಿ ನಿಯೋಜಿಸಲಾಯಿತು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಬಳಿಕ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಠಾಣೆಗೆ ಆಗಮಿಸಿ, ಅಕ್ಷತಾ ನೀಡಿದ ದೂರಿನಂತೆ ಎಫ್‌ಐಆರ್ ದಾಖಲಿಸುವ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಬಿಲ್ಲವ ಮುಖಂಡರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಕಿರಣ್ ಕುರ್ಮಾ ಬೈಲೂರು, ಬಿಎನ್ ಶಂರ್ಕ ಪೂಜಾರಿ, ಶಿವಕುರ್ಮಾ ಅಂಬಲಪಾಡಿ, ಶಿವಾಜಿ ಸುವರ್ಣ, ಸುನೀಲ್ ಬಂಗೇರ, ದಿನರ್ಕ ಹೇರೂರು, ಪ್ರಭಾರ್ಕ ಪೂಜಾರಿ, ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ಬಿಜೆಪಿ ಯುವ ಮೋರ್ಚಾದ ಪೃಥ್ವಿರಾಜ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

ಐವರ ವಿರುದ್ಧ ಎಫ್‌ಐಆರ್: ಪ್ರತಿಭಟನೆ ಅಂತ್ಯ

ಬಿಲ್ಲವ ಮುಖಂಡರು ಸೇರಿದಂತೆ ನೂರಾರು ಪ್ರತಿಭಟನಕಾರರ ಪ್ರತಿಭಟನೆಗೆ ಮಣಿದ ಪೊಲೀಸ್ ಇಲಾಖೆ ಕೊನೆಗೆ ಅಕ್ಷತಾ ನೀಡಿದ ದೂರಿನಂತೆ ಮೂವರು ಪೊಲೀಸರು ಸಹಿತ ಐವರ ವಿರುದ್ಧ ಪ್ರಕರಣ ದಾಖಲಿಸಿತು. ಈ ಹಿನ್ನೆಲೆಯಲ್ಲಿ ಬಿಲ್ಲವರ ಯುವವೇದಿಕೆ ಪ್ರತಿಭಟನೆಯನ್ನು ರಾತ್ರಿ 8ಗಂಟೆ ಸುಮಾರಿಗೆ ಅಂತ್ಯಗೊಳಿಸಿತು.

ವಾರೆಂಟ್ ಜಾರಿ ಸಂಬಂಧ ಅಕ್ಷತಾ ಪೂಜಾರಿ ಮನೆಗೆ ತೆರಳಿ ದೌರ್ಜನ್ಯ ಎಸಗಿದ್ದಾರೆಂದು ದೂರಲಾದ ಮಲ್ಪೆ ಠಾಣೆಯ ಮೂವರು ಪೊಲೀಸರು ಹಾಗೂ ವಾರೆಂಟ್ ಜಾರಿಯಾದ ಪ್ರಕರಣದ ದೂರುದಾರ ಮತ್ತು ಆತನ ಮಗನ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News