×
Ad

ನೈಸರ್ಗಿಕ ಕೃಷಿಯಿಂದ ಮಣ್ಣಿನ ಆರೋಗ್ಯ ವೃದ್ಧಿ: ನಿತ್ಯಾನಂದ ನಾಯಕ್

Update: 2025-12-17 20:56 IST

ಶಿರ್ವ, ಡಿ.17: ನೈಸರ್ಗಿಕ ಕೃಷಿ ಎಂದರೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಲ್ಲದೆ ಭೂಮಿ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಸ್ಥಳೀಯ ಸಂಪನ್ಮೂಲಗಳಾದ ದನದ ಸೆಗಣಿ, ಗೋಮೂತ್ರ, ಮಲ್ಚಿಂಗ್ ಬಳಸಿ ಜಮೀನಿನಲ್ಲಿ ಲಭ್ಯ ಇರುವ ಜೀವರಾಶಿಗಳನ್ನು ಆಧರಿಸಿ ಮಾಡುವ ಕೃಷಿ ಪದ್ಧತಿಯಾಗಿದೆ ಎಂದು ಪಾದೂರು ಗ್ರಾಮದ ಪ್ರಗತಿಪರ ಕೃಷಿಕ ನಿತ್ಯಾನಂದ ನಾಯಕ್ ಪಾಲಮೆ ಹೇಳಿದ್ದಾರೆ.

ಕಾಪು ರೈತಕೇಂದ್ರದ ವತಿಯಿಂದ ಶಿರ್ವದ ಕೃಷಿಕ ಬೆಟ್ಸಿ ಅರಾನ್ಹಾರವರ ನಿವಾಸದಲ್ಲಿ ಸೋಮವಾರ ರಾಷ್ಟ್ರೀಯ ಕೃಷಿ ಮಿಷನ್ ಯೋಜನೆಯಡಿ ಪರಿಸರದ ಕೃಷಿಕರಿಗಾಗಿ ಏರ್ಪಡಿಸಿದ ನೈಸರ್ಗಿಕ ಕೃಷಿ ಪ್ರಾತಿಕ್ಷಿಕೆ ಸಹಿತ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ನೈಸರ್ಗಿಕ ಮಾದರಿಯ ಕೃಷಿಯಲ್ಲಿ ವೆಚ್ಚವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಮಣ್ಣಿನ ಆರೋಗ್ಯವನ್ನೂ ಕಾಪಾಡು ತ್ತದೆ ಎಂದರು. ನೈಸರ್ಗಿಕ ಕೃಷಿಕ ಘಟಕಗಳಾದ ಜೀವಾಮೃತ ಹಾಗೂ ಬೀಜಾಮೃತ ತಯಾರಿಕೆ ಹಾಗೂ ಬಳಸುವ ವಿಧಾನದ ಬಗ್ಗೆ ಪ್ರಾತಿಕ್ಷಿಕೆ ಮಾಹಿತಿ ನೀಡಿದರು. ಹಿರಿಯರಾದ ಜೆರಾಲ್ಡ್ ಅರಾನ್ಹಾ ಸಹಕರಿಸಿದರು.

ಕೃಷಿಕರಾದ ಪ್ರಕಾಶ್ ಪಾಲಮೆ, ಲಕ್ಷ್ಮಣ ನಾಯಕ್ ಪಾಲಮೆ, ಮ್ಯಾಕ್ಸಿಮ್ ಫೆರ್ನಾಡಿಸ್, ಜೆರೋಮ್ ಕೆಸ್ತಲಿನೊ ಬಿ.ಸಿ.ರೋಡ್, ಗಿಲ್ಬರ್ಟ್ ಮೋನಿಸ್, ರೊನಾಲ್ಡ್ ಮೋನಿಸ್, ಶಿಲ್ಪಾ ಪ್ರಭು ಪಾಲಮೆ, ಡಯಾನಾ ಫೆರ್ನಾಂಡಿಸ್ ಸಹಿತ 40ಕ್ಕೂ ಅಧಿಕ ಕೃಷಿಕರು ಪ್ರಯೋಜನ ಪಡೆದುಕೊಂಡರು.

ಕಾಪು ರೈತ ಕೇಂದ್ರದ ಕೃಷಿ ಅಧಿಕಾರಿ ಪುಷ್ಪಲತಾ ಪಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ವಂದಿಸಿದರು. ಕೃಷಿ ಸಖಿಯರಾದ ಪ್ರಜ್ಞಾ ಸಂತೋಷ್, ಕೇಶವತಿ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News