×
Ad

ಸಂಘ ಪರಿವಾರ ಸಂವಿಧಾನವನ್ನು ಎಂದಿಗೂ ಒಪ್ಪುವುದಿಲ್ಲ: ಸಿದ್ದರಾಮಯ್ಯ

‘ಪ್ರಜಾಪ್ರಭುತ್ವದ ಬಲವರ್ದನೆ’ ಪುಸ್ತಕ ಲೋಕಾರ್ಪಣೆ

Update: 2022-11-17 19:11 IST

ಬೆಂಗಳೂರು, ನ. 17: ‘ದೇಶದಲ್ಲಿ ಸಮಾನತೆ ಬರಬಾರದು ಎಂಬುದು ಸಂಘ ಪರಿವಾರದ ಉದ್ದೇಶವಾಗಿದ್ದು, ಈ ಪರಿವಾರದವರು ಎಂದಿಗೂ ಅಂಬೇಡ್ಕರರ ಸಂವಿಧಾನವನ್ನು ಒಪ್ಪಿಕೊಂಡಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಗುರುವಾರ ನಗರದ ಡಾ.ಅಂಬೇಡ್ಕರ್ ಕಾಲೇಜು ಸಭಾಂಗಣದಲ್ಲಿ ಶಿವಮಲ್ಲು ಅವರು ಬರೆದ ‘ಪ್ರಜಾಪ್ರಭುತ್ವದ ಬಲವರ್ದನೆ’ ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸಂವಿಧಾನವು ಬದ್ಧತೆ ಇರುವವರ ಕೈಲಿ ಇದ್ದಾಗ ಮಾತ್ರ ಜನರಿಗೆ ಒಳ್ಳೆಯದಾಗಲಿದೆ. ಆದರೆ ಇಂದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿರುವವರ ಕೈಲಿ ಸಂವಿಧಾನವಿದೆ. ಸಂವಿಧಾನವು ಸಾರುವ ಸಮಾನತೆ ಬಂದಾಗ ಶೋಷಣೆ ಮಾಡಲು ಸಾಧ್ಯವಿಲ್ಲ ಎಂದು ಸಂಘ ಪರಿವಾರದವರಿಗೆ ಗೊತ್ತಿದೆ ಎಂದು ಟೀಕಿಸಿದರು.

ಅಂಬೇಡ್ಕರ್ ರಚನೆ ಮಾಡಿರುವ ಸಂವಿಧಾನವನ್ನು ಬದಲಾವಣೆ ಮಾಡಲೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಅನಂತಕುಮಾರ್ ಹೆಗ್ಡೆ ಅವರು ಹೇಳಿದ್ದರೂ, ಅವರನ್ನು ಮೋದಿ, ಅಮಿತ್ ಶಾ ಸಚಿವ ಸಂಪುಟದಿಂದ ವಜಾಮಾಡಲಿಲ್ಲ. ಕನಿಷ್ಠ ಅವರ ವಿರುದ್ಧ ಶಿಸ್ತು ಕ್ರಮವನ್ನೂ ಕೈಗೊಂಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. 

ದಲಿತರು ಆರ್ಥಿಕ ಮತ್ತು ಸಾಮಾಜಿಕವಾಗಿ ಸ್ವಾವಲಂಭಿಯಾಗಬೇಕು ಎಂಬ ಕಾರಣಕ್ಕೆ ನಮ್ಮ ಸರಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಎಸ್‍ಸಿಪಿ/ಟಿಎಸ್‍ಪಿ ಕಾಯ್ದೆ ಜಾರಿ ಮಾಡಿದೆ. ಆದರೆ ಈ ಯೋಜನೆಯ ಅನುದಾನದಲ್ಲಿ ಸುಮಾರು 7,885 ಕೋಟಿ ರೂ.ಹಣವನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿದ್ದಾರೆ. ಇಷ್ಟಾದರೂ ವಿದ್ಯಾವಂತ ಸಮುದಾಯದ ಜನ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಅಂಬೇಡ್ಕರ್ ಅವರ ಆಶಯಗಳ ಹಾದಿಯಲ್ಲಿ, ನಾವು ನಡೆದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಅದು ಸಂವಿಧಾನದ ರೀತಿ ಕೆಲಸ ಮಾಡಬೇಕು, ಇಲ್ಲದಿದ್ದರೆ ಜನರೇ ಅದನ್ನು ಕಿತ್ತು ಬಿಸಾಕುವಷ್ಟು ಜಾಗೃತರಾಗಬೇಕು. ಆಗ ಮಾತ್ರ ಸಂವಿಧಾನ ಉಳಿಯಲು ಸಾಧ್ಯ, ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ಪಸ್ತಕದ ಕುರಿತು ಮಾತನಾಡಿದ ಅವರು, ‘ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆ, ಅದರ ಹುಟ್ಟು ಮತ್ತು ಬೆಳವಣಿಗೆ, ಈಗಿನ ಸವಾಲುಗಳು ಮತ್ತು ಮುಂದೇನು ಮಾಡಬೇಕು ಎಂಬ ಬಗ್ಗೆ ಶಿವಮಲ್ಲು ಅವರು ಬಹಳಷ್ಟು ಅಧ್ಯಯನ ನಡೆಸಿ, ಪುಸ್ತಕ ರಚನೆ ಮಾಡಿದ್ದಾರೆ.ಇಂಜಿನಿಯರಿಂಗ್ ಪದವೀಧರರಾದ ಶಿವಮಲ್ಲು ಅವರು ರಾಜಕಾರಣದಲ್ಲಿ ಭಾಗವಹಿಸದೆ ಇದ್ದರೂ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಎಂಬುದು ಅರ್ಥವಾಗುತ್ತದೆ ಎಂದರು.

‘ರಾಜ್ಯದಲ್ಲಿ ಶೇ.3ರಷ್ಟು ಸಾಮಾನ್ಯ ವರ್ಗದ ಜನರಿದ್ದರೂ, ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ನೀಡುವುದು ಸರಿಯೇ? ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಏನು ಹೇಳಿದೆ? ಈ ಮೀಸಲಾತಿಯಡಿ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ ಮಾತ್ರ ಅವಕಾಶ ಇದೆ. ಹಿಂದುಳಿದ, ದಲಿತ ಸಮುದಾಯದ ಬಡವರಿಗೆ ಇದರಲ್ಲಿ ಮೀಸಲಾತಿ ಸೌಲಭ್ಯ ಸಿಗುವುದಿಲ್ಲ. ಆದರೂ ನಾವು ಸುಮ್ಮನಿದ್ದೇವೆ. ಹಿಂದೆ ಚಾತುರ್ವರ್ಣ ವ್ಯವಸ್ಥೆಯಲ್ಲಿ ಶೂದ್ರ ವರ್ಗದವರಿಗೆ ಮತ್ತು ಮಹಿಳೆಯರಿಗೆ ಅಕ್ಷರ ಸಂಸ್ಕೃತಿಯಿಂದ ಹೊರಗಿಡಲಾಗಿತ್ತು.

-ಸಿದ್ದರಾಮಯ್ಯ, ವಿರೋಧಪಕ್ಷದ ನಾಯಕ

Similar News