×
Ad

ಸರಕಾರದಿಂದ ಜಾತಿ, ಮತ, ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ತಂತ್ರ: ಮಾಜಿ ಸಂಸದ ತಪನ್ ಸೇನ್ ಆರೋಪ

15ನೇ ಸಿಐಟಿಯು ರಾಜ್ಯ ಸಮ್ಮೇಳನದ ಬಹಿರಂಗ ಸಭೆ

Update: 2022-11-17 20:22 IST

ಕುಂದಾಪುರ, ನ.17: ಸರಕಾರ ಜಾತಿ, ಮತ, ಧರ್ಮದ ಹೆಸರಿನಲ್ಲಿ  ಮಸಲತ್ತು ನಡೆಸಿ ಜನರನ್ನು ವಿಭಜಿಸುವ ತಂತ್ರ ಮಾಡುತ್ತಿದೆ. ಈ ಸಂಚು ದೇಶ ಹಾಗೂ ಸಂವಿಧಾನ ವಿರೋಧಿಯಾಗಿದ್ದು ಮುಂದಿನ ದಿನಗಳಲ್ಲಿ ಜನರನ್ನು ಒಗ್ಗೂಡಿಸಲು ಸಿಐಟಿಯು ವಿಶೇಷ ಪ್ರಯತ್ನ ನಡೆಸಲಿದೆ ಎಂದು ಮಾಜಿ ಸಂಸದರೂ, ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳೂ ಆದ ತಪನ್ ಸೇನ್ ಗಂಭೀರ ಆರೋಪ ಮಾಡಿದ್ದಾರೆ. 

ಕಾರ್ಮಿಕರ ಐಕ್ಯತೆ -ಜನತೆಯ ಸೌಹಾರ್ದತೆಗಾಗಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ವತಿಯಿಂದ ಮೂರು ದಿನಗಳ ಕಾಲ ಕುಂದಾಪುರದಲ್ಲಿ ನಡೆದ 15ನೇ ರಾಜ್ಯ ಸಮ್ಮೇಳನದ ಕೊನೆಯ ದಿನವಾದ ಗುರುವಾರ ನೆಹರೂ ಮೈದಾನದಲ್ಲಿ ಆಯೋಜಿಸಲಾದ ಬಹಿರಂಗ ಸಭೆಯಲ್ಲಿ ಅವರು ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಆತ್ಮನಿರ್ಭರ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಎಂಬುದೆಲ್ಲ ಮೋದಿ ಸರಕಾರದ ಘೋಷಣೆಯಾಗಿದೆಯಷ್ಟೇ ಹೊರತು, ಭಾರತ ಇನ್ನೂ ಕೂಡ ಹಸಿವಿನಿಂದ ಬಳಲುತ್ತಿದೆ. ವಾಸ್ತವದಲ್ಲಿ ಜನರ ಆತ್ಮನಿರ್ಭರತೆ ಇನ್ನೂ ಆಗಿಲ್ಲ. ಈ ಪ್ರದೇಶದ ಬೀಡಿ ಕಾರ್ಮಿಕ ನೌಕರರು ಹೋರಾಟದಿಂದಾಗಿ ತಮ್ಮ ವ್ಯವಸ್ಥೆ ಹಾಗೂ ಹಕ್ಕುಗಳನ್ನು ಉಳಿಸಿಕೊಂಡಿದ್ದರೂ, ಸೆಸ್ ಸಂಗ್ರಹದ ಮೂಲಕ ಅಲ್ಪಸ್ವಲ್ಪ ಸೌಲಭ್ಯವನ್ನು ಈ ಕೇಂದ್ರ ಸರಕಾರ ಕಿತ್ತುಕೊಂಡಿದೆ ಎಂದರು.

ಹೋರಾಟವೊಂದೇ ಉಳಿದ ದಾರಿ: ದೊಡ್ಡ ಬಂಡವಾಳ ಶಾಹಿಗಳಿಗೆ ಲಕ್ಷಾಂತರ ಕೋಟಿ ರೂ. ತೆರಿಗೆ ವಿನಾಯಿತಿ ನೀಡುವ ಈ ಸರಕಾರ, ತುಳಿತಕ್ಕೊಳಗಾದ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷತೆ ಯನ್ನು ನೀಡುತ್ತಿಲ್ಲ, ಅವರಿಗಿನ್ನೂ ಕನಿಷ್ಟ ವೇತನ ಸಿಕ್ಕಿಲ್ಲ. ಸರ್ಕಾರದ ನೀತಿಗಳು ಬಡವರನ್ನು ಹೈರಾಣಾಗಿಸುತ್ತಿವೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬದುಕು ಉಳಿಸಿಕೊಳ್ಳುವುದೇ ದುಸ್ತರವಾದ ಈ ಕಾಲಘಟ್ಟದಲ್ಲಿ ಪರಿಣಾಮಕಾರಿ ಹೋರಾಟ ಇಂದಿನ ಅಗತ್ಯತೆಯಾಗಿದೆ ಎಂದು ಪಶ್ಚಿಮ ಬಂಗಾಳದ ಕಮ್ಯುನಿಸ್ಟ್ ನಾಯಕ ನುಡಿದರು. 

ಈ ನಿಟ್ಟಿನಲ್ಲಿ ಸಿಐಟಿಯು  ತನ್ನ ಅನೇಕ ಚಟುವಟಿಕೆಗಳ ಮೂಲಕ ದಾಳಿ, ದಬ್ಬಾಳಿಕೆ ವಿರುದ್ಧ ಕಾರ್ಮಿಕರ ಹಕ್ಕು ಉಳಿಸಿಕೊಳ್ಳಲು ಬೀದಿಗಿಳಿಯುತ್ತಿದೆ. ಹೋರಾಟದ ಮೂಲಕ ಮಾತ್ರವೇ ದೇಶ ಮತ್ತು ಜನರ ಹಕ್ಕು ಉಳಿಸಲು ಸಾಧ್ಯ. ಕಟ್ಟಡ ಕಾರ್ಮಿಕರಿಗೆ ಹಲವು ಸೌಲಭ್ಯ ನೀಡುತ್ತಿರುವ ವೇಳೆ ಸೆಸ್ ಕಟ್ಟದೆ ತಪ್ಪಿಸಿಕೊಳ್ಳುವ ಮಾಲಕರು ಒಂದೆಡೆಯಾದರೆ, ಇನ್ನೊಂದೆಡೆ ರಾಜ್ಯದ ಕಾರ್ಮಿಕ ಮಂತ್ರಿ ಕಮಿಷನ್ ಹೊಡೆಯುತ್ತಿದ್ದಾರೆ. ಸಾರ್ವಜನಿಕ ಉದ್ದಿಮೆಗಳನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡುತ್ತಿದೆ ಎಂದವರು ಆರೋಪಿಸಿದರು.

ಅತ್ಯಂತ ಪರಿಣಾಮಕಾರಿ ವ್ಯವಸ್ಥೆಗಳ ಮೂಲಕ 15ನೇ ಸಿಐಟಿಯು ರಾಜ್ಯ ಸಮ್ಮೇಳನ ಉಡುಪಿಯಲ್ಲಿ ಅಭೂತ ಪೂರ್ವ ಯಶಸ್ಸು ಕಂಡಿದ್ದು ಕಾರ್ಮಿಕರ ಆಶಯ ಈಡೇರಲು ಇದು ಮುನ್ನುಡಿಯಾಗಿದೆ. ತುಳಿತಕ್ಕೊಳಗಾದ ಜನರು, ಈ ದೇಶ ಹಾಗೂ ಪ್ರದೇಶದ ಸಂಘಟಿತ ಹಾಗೂ ಅಸಂಘಟಿತ ವಲಯದ ಜನರ ಬದುಕು ಕಟ್ಟಿಕೊಡಲು, ಬರ್ಬರತೆ ಮೂಲಕ ಜನವಿರೋಧಿ, ದೇಶ ವಿರೋಧಿ ಹಾಗೂ ಕಾರ್ಮಿಕ ವಿರೋಧಿಯಾಗಿರುವ ಸರ್ಕಾರದ ನೀತಿ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಸಿಐಟಿಯು ಹೋರಾಟ ನಡೆಸಲಿದೆ  ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವೊಂದು ತನ್ನ ಅಧಿಕಾರ ಸ್ಥಾಪನೆ ಮಾಡಿದ್ದು ಬಿಜೆಪಿ ಆಪರೇಶನ್ ಕಮಲದ ಮೂಲಕ ಅಧಿಕಾರ ಹಿಡಿದು ಎರಡು ವರ್ಷದಲ್ಲಿ ಇಬ್ಬರು ಮುಖ್ಯಮಂತ್ರಿಗಳಾದರು. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರ ದಲ್ಲಿದ್ದರೂ ಕೂಡ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಕಾರ್ಮಿಕರ ಹಕ್ಕು ಮೊಟಕುಗೊಳಿಸಲಾಗುತ್ತಿದೆ. ಕೋವಿಡ್ ಸಂದರ್ಭ ಬಡ ಕಾರ್ಮಿಕರು ಬದುಕು ಕಳೆದುಕೊಳ್ಳುತ್ತಿದ್ದರೂ ಕೂಡ ವ್ಯಾಕ್ಸಿನ್, ಕಿಟ್, ಬೆಡ್ ಮೊದಲಾದ ವಿಚಾರದಲ್ಲಿ ಕಮಿಷನ್ ಹೊಡೆದು ಭ್ರಷ್ಟಾಚಾರ ಮಾಡಲಾಗಿತ್ತು ಎಂದು ದೂರಿದರು.

56 ಇಂಚಿನ ಎದೆಗಾರಿಕೆಯುಳ್ಳವರ ಸರ್ಕಾರದಲ್ಲಿ ಶ್ರೀಮಂತರ ಪಟ್ಟಿ ಹೆಚ್ಚಿದೆ. ಶ್ರೀಮಂತರ ಸಾಲ ಮನ್ನಾ ಮಾಡಲು ಸರಕಾರ ಮುಂದಾಗುತ್ತದೆ. ಸರ್ಕಾರದ ಬಳಿ ಹಣವಿಲ್ಲ ಎಂದು ಹೇಳಿಕೊಂಡು ಶ್ರೀಸಾಮಾನ್ಯರಿಂದ ಹಣ ಪಡೆಯಲಾಗುತ್ತಿದೆ. ಸಾರ್ವಜನಿಕ ಆಸ್ತಿಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ಜನರಿಗೆ ಹಣ ಕೊಡಬೇಕು ಹೊರತು ಜನರ ಜೇಬಿಗೆ ಕತ್ತರಿ ಹಾರಿ ಕೊಳ್ಳೆ ಹೊಡೆಯುವ ಸರ್ಕಾರ ಜನರಿಗೆ ಅಗತ್ಯವಿಲ್ಲ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆಯುವ ಸಿಐಟಿಯು ಅಖಿಲ ಭಾರತ ಸಮ್ಮೇಳನಕ್ಕೆ ಕ್ರಾಂತಿಕಾರಿ ಹೆಜ್ಜೆಯಿಟ್ಟ ಕುಂದಾಪುರ ಸ್ಪೂರ್ತಿಯಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿಐಟಿಯು ಕರ್ನಾಟಕ ರಾಜ್ಯ ಅಧ್ಯಕ್ಷೆ ಎಸ್. ವರಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ  ಸಿಐಟಿಯು ಮುಖಂಡರಾದ ಕೆ.ಎನ್.ಉಮೇಶ್, ವಿ.ಜೆ.ಕೆ ನಾಯರ್, ಪ್ರಕಾಶ್, ಸಿಐಟಿಯು 15ನೇ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಕೆ.ಶಂಕರ್, ಕೋಶಾಧಿಕಾರಿ ಎಚ್.ನರಸಿಂಹ, ಮಹಾಬಲ ವಡೇರಹೋಬಳಿ, ಪ್ರಚಾರ ಸಮಿತಿಯ ವಿ. ಚಂದ್ರಶೇಖರ್, ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟೇಶ್ ಕೋಣಿ ಮೊದಲಾದವರು ಉಪಸ್ಥಿತರಿದ್ದರು.

ಬಹಿರಂಗ ಸಭೆಯ ಭಾಷಣವನ್ನು ಸಿಐಟಿಯು ರಾಜ್ಯ ಕಾರ್ಯದರ್ಶಿ ಪ್ರತಾಪಸಿಂಹ ಕನ್ನಡಕ್ಕೆ ಅನುವಾದಿಸಿದರು. ಸ್ವಾಗತ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ ನಿರೂಪಿಸಿದರು. ಎಚ್.ನರಸಿಂಹ ವಂದಿಸಿದರು.

ಜನರ ಭಾವನೆಗಳನ್ನು ಪ್ರಚೋದಿಸುವ ಪ್ರಯತ್ನಗಳನ್ನು ವಿಫಲಗೊಳಿಸಿ

ಜನರಿಗೆ ಆಮಿಷವೊಡ್ಡಿ ಸಭೆಗೆ ಕರೆತರುವ ಕಾಲಘಟ್ಟದಲ್ಲಿ ಕಾರ್ಮಿಕರು ತಮ್ಮ ದೈನಂದಿನ ಕೂಲಿಯ ಒಂದು ಭಾಗವನ್ನು ಸಿಐಟಿಯು ಸಭೆಗಾಗಿ ವ್ಯಯಿಸಿ ಬಂದು ಬದ್ಧತೆ ಹಾಗೂ ತ್ಯಾಗ ಪ್ರದರ್ಶಿಸಿದ್ದಾರೆ. ಮನುಷ್ಯರು ಒಬ್ಬರಿಗೊಬ್ಬರು ದ್ವೇಷದಿಂದ ಕೊಲೆ, ಹೊಡೆದಾಡಿಕೊಳ್ಳಬೇಕು, ವಸ್ತ್ರ, ಪ್ರೀತಿ, ದೇವರ ಹೆಸರಿನಲ್ಲಿ ಪರಸ್ಪರ ವಿರೋಧಿಸಬೇಕು ಎಂಬ ಮಾನಸಿಕ ಅಫೀಮನ್ನು ಜನರ ಮನಸ್ಸಲ್ಲಿ ತುಂಬಲಾಗುತ್ತಿದೆ. ಕಾರ್ಮಿಕರು, ಜನಸಾಮಾನ್ಯರಾಗಿ ಇಂತಹ ದುರ್ವರ್ತನೆ ವಿರೋಧಿಸಬೇಕು. ಮನುಷ್ಯರ ಭಾವನೆಗಳನ್ನು ಪ್ರಚೋದಿಸುವಂತ ಚರ್ಚೆಗಳು ಎಲ್ಲಡೆ ನಡೆಯುತ್ತಿದ್ದು ಇದನ್ನು ತಡೆಯಬೇಕು. ಹಿಜಾಬ್ ವಿಚಾರ ಮುಂದಿಟ್ಟುಕೊಂಡು ಒಂದು ಸಮುದಾಯದ ಹೆಣ್ಮಕ್ಕಳು ಶಿಕ್ಷಣ ಹೊಂದಬಾರದೆಂದು ದುರುದ್ದೇಶ ಹೊಂದಿದ್ದ ಮಾನಸಿಕತೆ ಅಳಿಯಬೇಕು. ಅವರವರ ಧರ್ಮದ ಪ್ರಕಾರ ವಸ್ತ್ರ ಸಂಹಿತೆ ಮೊದಲಿನಿಂದಲೂ ಇತ್ತು. ಆದರೆ ಅದನ್ನೀಗ ಮುನ್ನೆಲೆಗೆ ತಂದು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲಾಗುತ್ತಿದೆ. ವೈವಿದ್ಯಮಯ ಭಾರತದಲ್ಲಿ ಜಾತಿ, ಕುಲ, ಭಾಷೆ, ಆಹಾರ ವಿಭಿನ್ನವಾಗಿರುವುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು.

- ಎಸ್. ವರಲಕ್ಷ್ಮೀ, ರಾಜ್ಯ ಸಿಐಟಿಯು ಅಧ್ಯಕ್ಷೆ

ರಾಜ್ಯ ಸಿಐಟಿಯು ಸಮ್ಮೇಳನದ ನಿರ್ಣಯಗಳು 

*ಕೈಗಾರಿಕಾ ಧೋರಣೆ, ಕಾರ್ಮಿಕ ವಿರೋಧಿ ನೀತಿಗಳನ್ನು ನಿಲ್ಲಿಸಬೇಕು. 
*ಭ್ರಷ್ಟಾಚಾರದ ಕೂಪವಾಗಿರುವ ಸಾರಿಗೆ ವ್ಯವಸ್ಥೆಯನ್ನು ದೂರವಿರಿಸಿ ಸಾರಿಗೆ ಉದ್ಯಮವನ್ನು ಉಳಿಸಿ-ಜೀವನೋಪಾಯ ರಕ್ಷಿಸಿ, ಸಾರಿಗೆ ವಲಯದಲ್ಲಿ ದುಡಿಯುವ ನೌಕರರ ಹಿತಾಸಕ್ತಿ ಕಾಪಾಡಬೇಕು. ಮೋಟಾರ್ ವಾಹನ ಕಾಯಿದೆ ತಿದ್ದುಪಡಿ-೨೦೧೯ ಹಿಂಪಡೆಯಬೇಕು. ಸೂಕ್ತ ತಿದ್ದುಪಡಿಯೊಂದಿಗೆ ಸಾರಿಗೆ ಉದ್ಯಮವನ್ನು ರಕ್ಷಿಸಲು ಹಾಗೂ ಎಸ್‌ಟಿಯುಎಸ್ ರಕ್ಷಿಸಲು ಕ್ರಮ ಕೈಗೊಳ್ಳಬೇಕು. 
*ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಬೇಕು. ಕಾರ್ಮಿಕ ಕಾನೂನುಗಳ ಅಡಿಯಲ್ಲಿ ದೊರಕುವ ಎಲ್ಲ ಸೌಲಭ್ಯಗಳನ್ನು ನೀಡಬೇಕು. ಗೃಹ ಭಾಗ್ಯ ಯೋಜನೆಯಡಿಯಲ್ಲಿ ಕಾರ್ಮಿಕರಿಗೆ ಉಚಿತ ನಿವೇಶನ ನೀಡಬೇಕು. 
*ಕಾರ್ಪೋರೇಟ್ ಕಂಪೆನಿಗಳ ದುರಾಡಳಿತ ಕೊನೆಗೊಳಿಸಲು, ರೈತಾಪಿ ಕೃಷಿ ಉಳಿಸಲು, ಕಂಪೆನಿ ಕೃಷಿ ತೊಲಗಿಸಲು, ರೈತ ಕಾರ್ಮಿಕ ಕೂಲಿಕಾರರ ಐಕ್ಯ ಹೋರಾಟ ಬಲಪಡಿಸಬೇಕು. 
*ಅಸಂಘಟಿತ ವಲಯದಲ್ಲಿನ ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಹಾಗೂ ಪರಿಹಾರ ನೀಡಲು ಆಗ್ರಹಿಸಿ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು ಹಾಗೂ ಇದಕ್ಕೆ ಪೂರಕವಾಗಿರುವ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.

Similar News