ಟಾಕಿಂಗ್ ಟಾಮ್ ಬೊಂಬೆಗಳ ಜತೆ ಡ್ರಗ್ಸ್ ಮಾರಾಟಕ್ಕೆ ಯತ್ನ: ಕೇರಳದ ಮೂವರ ಬಂಧನ
ಬೆಂಗಳೂರು, ನ.17: ಟಾಕಿಂಗ್ ಟಾಮ್ ಬೊಂಬೆಗಳ ಜೊತೆ ಆಕರ್ಷಕವಾಗಿ ಪ್ಯಾಕ್ ಮಾಡಿದ ಬಾಕ್ಸ್ ನಲ್ಲಿಟ್ಟು ಮಾದಕ ವಸ್ತುಗಳನ್ನು ಕೊರಿಯರ್ ಮಾಡಲು ಮುಂದಾಗಿದ್ದ ಮೂವರು ಡ್ರಗ್ಸ್ ಪೆಡ್ಲರ್ ಗಳನ್ನು ವೈಟ್‍ಫೀಲ್ಡ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕೇರಳದ ತ್ರಿಶೂರ್ ಜಿಲ್ಲೆಯ ಪವೀಶ್(33), ಶಾಪಸುದ್ದೀನ್(29) ಹಾಗೂ ಪಾಲಕಾಡ್‍ನ ಅಭಿಜಿತ್(25) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ 15 ಲಕ್ಷ ಮೌಲ್ಯದ 138 ಗ್ರಾಂ ತೂಕದ ಎಂಡಿಎಂಎ, 4 ಮೊಬೈಲ್ ಗಳು, ಪ್ಯಾಕ್ ಮಾಡಿದ ರಟ್ಟಿನ ಬಾಕ್ಸ್, ಟಾಕಿಂಗ್ ಟಾಮ್ ಬೊಂಬೆ ಹಾಗೂ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ.
ವೈಟ್‍ಫೀಲ್ಡ್ ನ ಪಟ್ಟದೂರು ಅಗ್ರಹಾರದ ಐಟಿಪಿಎಲ್ ಗೇಟ್ ಬಳಿ ಟಾಕಿಂಗ್ ಟಾಮ್ ಬೊಂಬೆ ಜತೆ ಪ್ಯಾಕ್ ಮಾಡಿದ ಬಾಕ್ಸ್ ನಲ್ಲಿಟ್ಟು ಮಾದಕವಸ್ತುಗಳನ್ನು ಕೊರಿಯರ್ ಮಾಡಲು ಮುಂದಾಗಿದ್ದರು. ಈ ವೇಳೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಮಾದಕವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಪರಿಚಯಸ್ಥ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದರು. ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ ಎಂದರು.