ಬೆಂಗಳೂರಿನಲ್ಲಿ ವರ್ಷಕ್ಕೊಮ್ಮೆ ನೀರಿನ ದರ ಹೆಚ್ಚಿಸಲು ಜಲಮಂಡಳಿಯಿಂದ ಸರಕಾರಕ್ಕೆ ಪ್ರಸ್ತಾವ
ಬೆಂಗಳೂರು, ನ.17: ರಾಜಧಾನಿ ಬೆಂಗಳೂರಿನಲ್ಲಿ ಕನಿಷ್ಠ ವರ್ಷಕ್ಕೊಮ್ಮೆ ನೀರಿನ ದರ ಪರಿಷ್ಕರಿಸಲು ಅವಕಾಶ ನೀಡಬೇಕೆಂದು ಬೆಂಗಳೂರು ಜಲಮಂಡಳಿಯು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ರಾಜ್ಯದ ವಿದ್ಯುತ್ ವಿತರಣಾ ಕಂಪೆನಿಗಳ ಆರ್ಥಿಕ ಸ್ಥಿತಿಗತಿ ಗಮನಿಸಿ ವಿದ್ಯುತ್ ದರ ಪರಿಷ್ಕರಿಸುವ ಮಾದರಿಯಲ್ಲಿಯೇ ಬೆಂಗಳೂರಿನಲ್ಲಿ ನೀರಿನ ದರ ಪರಿಷ್ಕರಿಸುವ ಅವಕಾಶ ನೀಡಬೇಕೆಂದು ಜಲಮಂಡಳಿಯು ಕೋರಿದೆ.
ವರ್ಷದಿಂದ ವರ್ಷಕ್ಕೆ ವೆಚ್ಚಗಳು ಏರಿಕೆಯಾಗುತ್ತಿವೆ. ಆದರೆ ದರಗಳನ್ನು ಪರಿಷ್ಕರಣೆ ಮಾಡದ ಕಾರಣ ಮಂಡಳಿಗೆ ಆರ್ಥಿಕ ತೊಂದರೆ ಉಂಟಾಗಿದೆ ಎಂದು ಪ್ರಸ್ತಾವನೆಯಲ್ಲಿ ಜಲಮಂಡಳಿ ವಿವರಣೆ ನೀಡಿದೆ. ಅ.20, 2014ರ ಬಳಿಕ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡಿಲ್ಲ. ಆದರೆ, ಈ ಅವಧಿಯಲ್ಲಿ 10 ಸಲ ವಿದ್ಯುತ್ ದರ ಪರಿಷ್ಕರಣೆಯಾಗಿದೆ.
ಬಿಬಿಎಂಪಿ ಚುನಾವಣೆ ಮತ್ತು ಮುಂದಿನ ವರ್ಷ ವಿಧಾನಸಭೆ ಚುನಾವಣೆ ಇರುವುದರಿಂದ ಸರಕಾರ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡುವುದು ಅನುಮಾನ. ಆದರೆ ರಾಜ್ಯದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈ ಕುರಿತ ಚರ್ಚೆಗಳು ಮತ್ತೆ ಆರಂಭವಾಗಲಿವೆ.