ಸಾಹಿತ್ಯಕ ಸಂದರ್ಭದಲ್ಲಿ ಅಸಂಗತತೆ

Update: 2022-11-18 03:40 GMT

ಅಸಂಗತ ಆಲೋಚನೆಗಳನ್ನು ಸಾಹಿತ್ಯದಲ್ಲಿ ಅಳವಡಿಸುವ ಪ್ರಕ್ರಿಯೆಯು ಪಾಶ್ಚಾತ್ಯ ನಾಡಿನಲ್ಲಿ ಕಳೆದ ಶತಮಾನದ ಆದಿಯಲ್ಲಿಯೇ ಆರಂಭಗೊಂಡಿತು. ಅಸಂಗತತೆಯನ್ನು ಸಾಹಿತ್ಯದಲ್ಲಿ ಎರಡು ರೀತಿಯಲ್ಲಿ ತರಲಾಯಿತು. ಉದ್ದೇಶಪೂರ್ವಕವಾಗಿ ಹಾಸ್ಯಾಸ್ಪದ, ವಿಲಕ್ಷಣ ಅಸಂಗತತೆಯನ್ನು ಮಿಳಿತಗೊಳಿಸುವುದು ಒಂದಾದರೆ, ಉದ್ದೇಶಗಳು ಕ್ಷೀಣಿಸಿದ, ಅಸಂಬದ್ಧ ಜಗತ್ತಿನಲ್ಲಿ ಮಾನವ ಜೀವಿಯ ಅಸ್ತಿತ್ವವಿದೆ ಎನ್ನುವ ನಂಬಿಕೆಯಿಂದ ಅಸಂಗತತೆಯನ್ನು ಪ್ರತಿಪಾದಿಸಿದ್ದು ಇನ್ನೊಂದು.

ಯೂರೋಪಿನಲ್ಲಿ ಕಲಾತ್ಮಕ ಮತ್ತು ಸಾಹಿತ್ಯಕ ಪರಿಸರದ ಸಾಂಪ್ರದಾಯಿಕ ಸೌಂದರ್ಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅಶಿಷ್ಟ ಹಾಗೂ ಅಸಂಬದ್ಧತೆಯಿಂದ ಅಪಹಾಸ್ಯ ಮಾಡುವ ಮೂಲಕ ಗುಡಿಸಿ ಹಾಕುವ ಉದ್ದೇಶದಿಂದ ಸ್ವಿಟ್ಸರ್‌ಲ್ಯಾಂಡಿನ ಜ್ಯೂರಿಚ್ ಎಂಬಲ್ಲಿ ದಾದಾ ಚಳವಳಿ ಆರಂಭವಾಗಿತ್ತು. ಆರಂಭದಲ್ಲಿ ಚಳವಳಿಯ ರೂಪದಲ್ಲಿ ಇದು ಹುಟ್ಟುಪಡೆಯದಿದ್ದರೂ ನಿಧಾನಕ್ಕೆ ಹರಿವೊಡೆದು 1915ರ ಸುಮಾರಿಗೆ ನ್ಯೂಯಾರ್ಕ್ ನಲ್ಲಿ ಕಾಣಿಸಿಕೊಂಡು 1920ರ ಹೊತ್ತಿಗೆ ಫ್ರಾನ್ಸ್ ನಲ್ಲಿ ಪ್ರವರ್ಧಮಾನಕ್ಕೆ ಬಂತೆಂದು ಹೇಳಬೇಕು. ಸುಮಾರು 1915ರಿಂದ 1923ರವರೆಗೆ ನಡೆದ ಈ ದಾದಾ ಚಳವಳಿಯು ಕಲೆ ಮತ್ತು ಸಾಹಿತ್ಯದಲ್ಲಿ ಅಸಂಬದ್ಧತೆಯನ್ನು ಉದ್ದೇಶಪೂರ್ವಕವಾಗಿ ಅಳವಡಿಸಿಕೊಂಡಿತು. 

ಆದರೆ 1940ರ ಹೊತ್ತಿಗೆ ಅಲ್ಬರ್ಟ್ ಕಮು ಪ್ರತಿಪಾದಿಸಿದ ಅಸಂಗತತೆ ಎರಡನೆಯ ಬಗೆಯದು. ಇದು ಅಸಂಗತ ಚಳವಳಿ ಎಂದು ಗುರುತಿಸಿಕೊಂಡಿತು. ಈ ಬಗೆಯ ಚಳವಳಿಯನ್ನು ಕಮುವಿಗಿಂತಲೂ ಮೊದಲು ಪರಿಚಯಿಸಿದವನು ಸೋರೆನ್ ಕಾಯ್ರ್ಕೆಗಾರ್ಡ್ ಆಗಿರಬಹುದು, ಅದನ್ನು ಅಭಿವೃದ್ಧಿಪಡಿಸಿದವನು ಅಲ್ಬರ್ಟ್ ಕಮು ಎಂದು ಹೇಳಲಾಗುತ್ತದೆ. ‘‘ಅಸಂಬದ್ಧತೆಯೇ ಜೀವನದ ಮೂಲ ತತ್ವ ಹಾಗೂ ಅವನು ಎದುರುಗೊಳ್ಳಬೇಕಾದ ಮೊದಲ ಸತ್ಯ’’ ಎನ್ನುವ ಕಮು ಅಸಂಬದ್ಧತೆಯ ವಿಚಾರಧಾರೆಯನ್ನು ತನ್ನ ‘ದ ಮಿತ್ ಆಫ್ ಸಿಸಿಫಸ್’ ಕೃತಿಯ ಮೂಲಕ ಪ್ರತಿಪಾದಿಸುತ್ತಾನೆ. 

ಈ ಕೃತಿಯಲ್ಲಿ ಆತ ಗ್ರೀಸ್‌ನ ದಂತಕಥೆಯಾದ ಸಿಸಿಫಸ್‌ನ, ಕಡಿದಾದ ಬೆಟ್ಟದ ಮೇಲೆ ಮೇಲ್ಮುಖವಾಗಿ ದೊಡ್ಡ ಬಂಡೆಯೊಂದನ್ನು ಶ್ರಮವಹಿಸಿ ಉರುಳಿಸುತ್ತಾ ಕೊಂಡೊಯ್ಯುವ ಹಾಗೂ ಆ ಬಂಡೆಯು ಬೆಟ್ಟದ ಇಳಿಜಾರಿನಲ್ಲಿ ಕೆಳಕ್ಕೆ ಉರುಳುವ, ಪುನಃ ಬಂಡೆಯನ್ನು ಮೇಲ್ಮುಖವಾಗಿ ಉರುಳಿಸುವ ನಿರಂತರ ಕ್ರಿಯೆಯ ಸಶಕ್ತ ರೂಪಕವನ್ನು ಕಟ್ಟಿಕೊಡುತ್ತಾನೆ. ಈ ಮೂಲಕ ಅವನು ಅಸ್ತಿತ್ವವಾದವನ್ನು ಮಂಡಿಸುತ್ತಾನೆ. ಅವನ ಪ್ರಕಾರ ಜೀವನವೆಂದರೆ ಅದು ಮಾನವ ಅಸ್ತಿತ್ವವನ್ನು ವಿವರಿಸುವುದೂ ಇಲ್ಲ ವಿವೇಚಿಸುವುದೂ ಇಲ್ಲ. ಜೀವನದಲ್ಲಿ ಅರ್ಥವನ್ನು ಕಂಡುಕೊಳ್ಳಬೇಕೆಂಬ ಅವನ ಪ್ರಯತ್ನಗಳಿಗೆ ಅರ್ಥವಾಗಲೀ ಉದ್ದೇಶವಾಗಲೀ ಇಲ್ಲ. ಒಂದು ಅರ್ಥಹೀನ ಹಾಗೂ ಅಸಂಬದ್ಧ ಜಗತ್ತಿನಲ್ಲಿ ಮಾನವನ ಅಸ್ತಿತ್ವವಿದೆ, ಅವನೊಳಗಿನ ಹುಡುಕಾಟದ ಬಯಕೆಯು ಈ ಅಸಂಬದ್ಧತೆಯೊಂದಿಗೆ ಸಂಘರ್ಷಿಸುತ್ತದೆ. ಹೀಗೆ ವ್ಯಕ್ತಿವಾದವನ್ನು ಪ್ರತಿಪಾದಿಸುವ ಕಮುವಿನ ‘ದ ಸ್ಟ್ರೇಂಜ್’, ‘ದ ಪ್ಲೇಗ್’ ಕೃತಿಗಳೂ ಅಸಂಬದ್ಧತೆಯನ್ನೇ ಬಿಂಬಿಸಿದವು.

ಹಾಗೆ ನೋಡಿದರೆ ಫ್ರಾನ್ಜ್ ಕಾಫ್ಕಾ (1883-1924) ಕೂಡ ತನ್ನ ಸಣ್ಣ ಕಥೆಗಳಲ್ಲಿ ಅದರಲ್ಲೂ ಅವನು 1912ರಲ್ಲಿ ಬರೆದ ‘ಮೆಟಾಫಾರ್ಮಸಿಸ್’ ಕಥೆಯಲ್ಲಿ ಅಸಂಬದ್ಧತೆಯನ್ನು ಬಹಳ ಚೆನ್ನಾಗಿ ಬಳಸಿದ್ದಾನೆ. ರಾತ್ರಿ ಮಲಗಿದ ಒಬ್ಬನು ಬೆಳಕು ಹರಿಯುವುದರೊಳಗಾಗಿ ಜಿರಲೆಯಾಗಿ ಪರಿವರ್ತನೆಯಾಗಿರುತ್ತಾನೆ. ಆಗ ನಿನ್ನೆಯವರೆಗೂ ಬಹಳ ಚೆನ್ನಾಗಿ ನಡೆದುಕೊಂಡಿದ್ದ ಜಗತ್ತು ಏಕಾಏಕಿ ಅಸಹ್ಯಪಟ್ಟು ದೂರ ಮಾಡುವ ಚಿತ್ರಣವನ್ನು ಮೆಟಾಫಾರ್ಮಸಿಸ್‌ಲ್ಲಿ ನಿರೂಪಿಸುವ ಕಾಫ್ಕಾ ತನ್ನ ಇಂಥ ವಿಭಿನ್ನ ಪ್ರಯೋಗದಿಂದಾಗಿ ಜಗತ್ತನ್ನು ಬೆರಗುಗೊಳಿಸಿದವನು.
ಸುಮಾರು 1940ರಿಂದ 1989ರತನಕ ಮುಂದುವರಿದ ಅಸಂಬದ್ಧ ಚಳವಳಿಯಲ್ಲಿ ಕಾಫ್ಕಾ, ಕಮು, ಪಾವ್ಲ್ ಆಸ್ಟರ್, ಕರ್ಟ್ ಮೊನ್ನೆಗರ್ ಮುಂತಾದವರು ಪ್ರಮುಖ ಪಾತ್ರವಹಿಸಿದರು. ಈ ಚಳವಳಿಯ ಅವಧಿಯಲ್ಲಿಯೇ ಅಂದರೆ 1950-1960ರ ಅವಧಿಯಲ್ಲಿ ಅಸಂಗತ ನಾಟಕ (ಅಬ್ಸರ್ಡ್ ಥಿಯೇಟರ್) ಕೂಡ ಹುಟ್ಟುಪಡೆಯಿತು. ಮಾರ್ಟಿನ್ ಎಸ್ಲಿನ್ ಎಂಬವನು ರಂಗದ ಮೇಲೆ ಅಸಂಬದ್ಧತೆಯನ್ನು ಪ್ರಯೋಗಿಸುವುದನ್ನು ಆರಂಭಿಸಿದ. 

ಇವನ ನಂತರ ಅಲ್ಬರ್ಟ್ ಕಮುವಿನ ವಿಚಾರ ಧಾರೆಯಿಂದ ಪ್ರೇರಿತನಾದ ಸಾಮ್ಯುಯೆಲ್ ಬೆಕೆಟನು 1953ರಲ್ಲಿ ‘ವೇಯ್ಟಿಂಗ್ ಫಾರ್ ಗೋಡೋಟ್’ ಎಂಬ ನಾಟಕವನ್ನು ಕೊಟ್ಟ. ಈ ನಾಟಕದಲ್ಲಿ ಬರಲಿರುವ ಗೋಡೋಟ್ನಿಗಾಗಿ ನಿರಂತರವಾಗಿ ಕಾಯುವ, ಈ ಕಾಯುವಿಕೆಯ ನಡುವಿನ ಬೇಸರ, ಅಸಹನೆ, ನೋವು ಮುಂತಾದ ವಿಚಾರಗಳಿಂದ ಜರುಗುವ ವಿಲಕ್ಷಣ ಭ್ರಾಮಕ ಸಂಗತಿಗಳು ತರುವಾಯ ದಿನಾಂತದಲ್ಲಿ ಹುಡುಗನೊಬ್ಬನು ಬಂದು ಗೋಡೋಟ್ ನಾಳೆ ಬರುತ್ತಾನೆ ಎನ್ನುವುದು ಮತ್ತೆ ಕಾಯುವಿಕೆಯ ಪ್ರಕ್ರಿಯೆಯು ನಾಳೆಯೂ ಮುಂದುವರಿಯುವುದು, ಮತ್ತವೇ ಬದುಕಬೇಕೆಂಬ ಇಚ್ಛೆ, ಆತ್ಮಹತ್ಯೆಯ ಬಯಕೆಯಂತಹ ಭ್ರಾಮಕ ಸಂಗತಿಗಳು. ಹೀಗೆ ಬೆಕೆಟ್ ಅಸಂಬದ್ಧ ನಾಟಕ ಪರಂಪರೆಗೆ ಬುನಾದಿ ಹಾಕುತ್ತಾನೆ.

ಈ ಕಾಲಘಟ್ಟದಲ್ಲಿ ಯೂರೋಪ್ ಮತ್ತು ಅಮೆರಿಕದ ಅಸಂಬದ್ಧ ಚಳವಳಿಯು ಹುಟ್ಟುವುದಕ್ಕೆ ಕಾರಣವಾದದ್ದು ಅಂದಿನ ಮಹಾಯುದ್ಧಗಳು, ಹಿಟ್ಲರ್‌ನ ಸರ್ವಾಧಿಕಾರಿ ಧೋರಣೆ, ರಾಜಪ್ರಭುತ್ವದ ಆಟಾಟೋಪಗಳು, ಅರಾಜಕತೆಗಳು, ಸಾವುನೋವುಗಳು, ಆ ಕಾಲದ ಜನ ಎದುರಿಸಿದಂತಹ ವ್ಯತಿರಿಕ್ತ ಪರಿಸ್ಥಿತಿಗಳು ಕಾರಣವಾಗಿದ್ದವು. ಬದುಕಿನ ನಶ್ವರತೆ, ನಿರರ್ಥಕತೆ, ನಿರಂತರ ಹೋರಾಟದ ಹೊರತು ಬದುಕಿಗೆ ಯಾವುದೇ ಅರ್ಥವಿಲ್ಲ. ಕಾಯುತ್ತಾನೆ ಆದರೆ ಯಾವುದೂ ಬರುವುದಿಲ್ಲ. ನಿರೀಕ್ಷಿಸುತ್ತಾನೆ ದೊರೆಯುವುದಿಲ್ಲ. ಅಸಂಬದ್ಧತೆಯೇ ಸತ್ಯ ಹಾಗೂ ಮನುಷ್ಯ ಯಾವಾಗಲೂ ಒಂಟಿ ಈ ಬಗೆಯ ಭಾವಗಳು ಬಹುಶಃ ಅಂದಿನ ಕಾಲಘಟ್ಟವು ಎದುರಿಸಿದ ಪರಿಸ್ಥಿತಿಗಳಿಗನುಗುಣವಾಗಿ ಜನ್ಮತಾಳಿದ್ದಿರಬಹುದು.

ಆದರೆ ಪಾಶ್ಚಾತ್ಯರು ಈ ಅಸಂಬದ್ಧತೆಯ ಸಿದ್ಧಾಂತಕ್ಕೆ ಭವಿಷ್ಯವಿಲ್ಲ. ಮನುಷ್ಯನ ಅಸ್ತಿತ್ವ ಋಣಾತ್ಮಕ ವಿಚಾರಧಾರೆಯಲ್ಲಿ ಇಲ್ಲ ಮತ್ತು ಇರಕೂಡದು. ಆತ ಸಂಘಜೀವಿ. ಮಹತ್ವಾಕಾಂಕ್ಷಿ ಎನ್ನುವುದನ್ನು ಗ್ರಹಿಸಿ ನಿಧಾನಕ್ಕೆ ಅಸಂಬದ್ಧ ಸಾಹಿತ್ಯ/ ನಾಟಕ ಪರಂಪರೆಯನ್ನು ಬದಿಗೆ ಸರಿಸಿ ಸಮುದಾಯವಾದದೆಡೆ, ಸಮಾಜವಾದದೆಡೆ ಹೊರಳತೊಡಗಿದರು.

ಇಂಥ ಹೊಸ ಪ್ರಯೋಗಾತ್ಮಕತೆಯಿಂದ ಜಗತ್ತಿನ ಆಕರ್ಷಣೆಗೊಳಗಾದದ್ದು ನಿಜ. ಕನ್ನಡದ ಸಾಹಿತ್ಯದ ಸಂದರ್ಭದಲ್ಲಿಯೂ ಹಲವರು ಕಮು, ಕಾಫ್ಕರ ಪ್ರಭಾವಕ್ಕೆ ಒಳಗಾದರು. ಇಲ್ಲಿನ ನಾಟಕಗಳಲ್ಲೂ ಅವರ ಪ್ರಭಾವ ಕಾಣತೊಡಗಿತು. ಆದರೆ ಇದರ ಪ್ರಭಾವಕ್ಕೆ ಒಳಗಾದವರಲ್ಲಿ ಆರಂಭದಲ್ಲಿಯೇ ಲಂಕೇಶ್, ತೇಜಸ್ವಿಯವರು ಇನ್ನಿತರ ಕೆಲವರು ಅದನ್ನು ಬಿಡಿಸಿಕೊಂಡದ್ದು ಕನ್ನಡದ ಸಂದರ್ಭಕ್ಕೆ ಬಹುಮುಖ್ಯ ಸಂಗತಿಯಾಗುತ್ತದೆ. ಈ ಮಾತು ಯಾಕೆಂದರೆ ಪಾಶ್ಚಾತ್ಯರಿಗೆ ಈ ಅಸಂಗತತೆಯ ಚರ್ಚೆ ಮುಗಿದುಹೋದ ಮಾತು. ಹಾಗೆಯೇ ಕನ್ನಡದಲ್ಲಿ ಅದರ ಚರ್ಚೆಯೇ ಅಪ್ರಸಕ್ತ.

Similar News