ಮತದಾರರ ಮಾಹಿತಿ ಕಳವು ಪ್ರಕರಣ: ಚಿಲುಮೆ ಸಂಸ್ಥೆ ಕಚೇರಿ ಮೇಲೆ ದಾಳಿ, ನಾಲ್ವರು ವಶಕ್ಕೆ

Update: 2022-11-18 18:45 GMT

ಬೆಂಗಳೂರು, ನ.18: ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಮಾಹಿತಿ ಕದ್ದ ಆರೋಪ ಪ್ರಕರಣ ಸಂಬಂಧ ‘ಚಿಲುಮೆ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ’ಯ ಕಚೇರಿ ಮೇಲೆ ದಾಳಿ ನಡೆಸಿರುವ ಹಲಸೂರು ಗೇಟ್ ಠಾಣಾ ಪೊಲೀಸರು, ಶೋಧ ನಡೆಸಿ, ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಶುಕ್ರವಾರ ಐವರು ನೇತೃತ್ವದ ಪೊಲೀಸ್ ತಂಡ ಇಲ್ಲಿನ ಮಲ್ಲೇಶ್ವರನಲ್ಲಿರುವ ಚಿಲುಮೆ ಸಂಸ್ಥೆ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿ, ಶೋಧ ಕಾರ್ಯ ನಡೆಸಿದರು.ಆನಂತರ, ಸಂಸ್ಥೆಯ ಸಿಬ್ಬಂದಿಯ ಹೇಳಿಕೆಗಳನ್ನು ತನಿಖಾಧಿಕಾರಿಗಳು ದಾಖಲಿಸಿಕೊಂಡರು.

ವಶಕ್ಕೆ: ಸಂಸ್ಥೆಯ ಸಿಬ್ಬಂದಿ ಎನ್ನಲಾದ ಸುಧಾಕರ್, ರಕ್ಷಿತ್, ರೇಣುಕಾ ಪ್ರಸಾದ್ ಹಾಗೂ ಧರ್ಮೇಶ್ ಎಂಬುವರನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

ಇನ್ನೂ, ಸಂಸ್ಥೆಯ ನಿರ್ದೇಶರಾಗಿರುವ ಕೃಷ್ಣಪ್ಪ ರವಿಕುಮಾರ್ ಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ, ಈವರೆಗೂ ಎಷ್ಟು ಮತದಾರರ ಮಾಹಿತಿ ಪಡೆದುಕೊಳ್ಳಲಾಗಿದೆ ಎಂಬುದು ಸೇರಿದಂತೆ ತನಿಖೆಗೆ ಬೇಕಾದ ಮಾಹಿತಿಗಳನ್ನು ಬಗ್ಗೆ ಪೊಲೀಸರು ಕಲೆಹಾಕುತ್ತಿದ್ದಾರೆ.

ಎಫ್‍ಐಆರ್ ದಾಖಲು: ‘ಚಿಲುಮೆ’ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಆ ಸಂಸ್ಥೆಯ ಕೆ.ಎಂ.ಲೋಕೇಶ್ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಅನುಮತಿಯಿಲ್ಲದೇ ಬೂತ್‍ಮಟ್ಟದ ಅಧಿಕಾರಿಗಳ (ಬಿಎಲ್‍ಒ) ನಕಲಿ ಗುರುತಿನ ಚೀಟಿಯನ್ನು ಸೃಷ್ಟಿಸಿಕೊಂಡು ಮನೆಗಳಿಗೆ ತೆರಳಿ ಮತದಾರರ ಗುರುತಿನ ಚೀಟಿ, ‘ಆಧಾರ್’ ಸಂಗ್ರಹಿಸಿ ಆ್ಯಪ್‍ವೊಂದಕ್ಕೆ ಮತದಾರರ ವೈಯಕ್ತಿಕ ಮಾಹಿತಿ ಅಪ್‍ಲೋಡ್ ಮಾಡಿದ ಆರೋಪ ಕೇಳಿಬಂದಿದೆ.

ಆರ್ ಒ ಅಮಾನತು: ಇದೇ ಪ್ರಕರಣ ಸಂಬಂಧ ಚಿಲುಮೆಸಂಸ್ಥೆಗೆ ಗುರುತಿನ ಚೀಟಿಗೆ ಅವಕಾಶ ಮಾಡಿಕೊಟ್ಟ ಆರೋಪ ಮೇರೆಗೆ ಮಹದೇವಪುರ ವಲಯದ ಬಿಬಿಎಂಪಿ ಆರ್ ಒ ಚಂದ್ರಶೇಖರ್ ಅವರನ್ನು ಅಮಾನತು ಮಾಡಲಾಗಿದೆ.

---------------------------------------------

‘ತನಿಖೆ ಪ್ರಗತಿಯಲ್ಲಿದೆ': ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಅವರ ನೇತೃತ್ವದಲ್ಲಿ ವಿವಿಧ ತಂಡಗಳನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಹಲಸೂರ್ ಗೇಟ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

-ಪ್ರತಾಪ್ ರೆಡ್ಡಿ, ನಗರ ಪೊಲೀಸ್ ಆಯುಕ್ತ

Similar News