×
Ad

ನವ್ಲಾಖಾ ಗೃಹ ಬಂಧನ: ಎನ್ಐಎಗೆ ಸುಪ್ರೀಂ ಕೋರ್ಟ್ ತೀವ್ರ ತರಾಟೆ

Update: 2022-11-18 22:20 IST

ಹೊಸದಿಲ್ಲಿ, ನ.18: ಪ್ರಸ್ತುತ ತಲೋಜಾ ಜೈಲಿನಲ್ಲಿರುವ ಎಲ್ಗಾರ್ ಪರಿಷದ್ ಪ್ರಕರಣದ ಆರೋಪಿ ಹಾಗೂ ಸಾಮಾಜಿಕ ಕಾರ್ಯಕರ್ತ ಗೌತಮ ನವ್ಲಾಖಾ (70) ತನ್ನ ಆರೋಗ್ಯದ ಕುರಿತು ‘ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸಿದ್ದರು’ ಎಂಬ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ವಾದವನ್ನು ಶುಕ್ರವಾರ ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯವು,24 ಗಂಟೆಗಳಲ್ಲಿ ಅವರು ಆಯ್ಕೆ ಮಾಡಿರುವ ಸ್ಥಳದಲ್ಲಿ ಗೃಹಬಂಧನಕ್ಕಾಗಿ ಅವರನ್ನು ಸ್ಥಳಾಂತರಿಸುವಂತೆ ಆದೇಶಿಸಿದೆ.

ಎನ್ಐಎ ಅನ್ನು ಕಟುವಾದ ಶಬ್ದಗಳಲ್ಲಿ ತರಾಟೆಗೆತ್ತಿಕೊಂಡ ನ್ಯಾಯಾಧೀಶರಾದ ಕೆ.ಎಂ.ಜೋಸೆಫ್ ಮತ್ತು ಹೃಷಿಕೇಶ ರಾಯ್ ಅವರ ಪೀಠವು ನವ್ಲಾಖಾರನ್ನು ಜೈಲಿನ ಬದಲು ಗೃಹಬಂಧನದಲ್ಲಿರಿಸುವಂತೆ 2022, ನ.10ರ ನ್ಯಾಯಾಲಯದ ಆದೇಶವನ್ನು ಹಿಂದೆಗೆದುಕೊಳ್ಳುವಂತೆ ಕೋರಿ ಅದು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತು.
ಗೃಹಬಂಧನಕ್ಕಾಗಿ ಈ ಮೊದಲು ವಿಧಿಸಲಾಗಿದ್ದ ಷರತ್ತುಗಳ ಜೊತೆಗೆ ನಿರ್ಗಮನ ದ್ವಾರದತ್ತ ತೆರಳುವ ಅಡಿಗೆ ಕೋಣೆಯ ಬಾಗಿಲುಗಳು ಮತ್ತು ಗ್ರಿಲ್ ಗೆ ಬೀಗಮುದ್ರೆ ಹಾಕಲು ನ್ಯಾಯಾಲಯವು ಎನ್ಐಎಗೆ ಅನುಮತಿ ನೀಡಿತು.

ಆದೇಶಕ್ಕೆ ಎನ್ಐಎ ವಿರೋಧ ಕುರಿತಂತೆ ನ್ಯಾ.ರಾಯ್ ಅವರು, ‘ನಾವು ಈ ದೃಷ್ಟಿಕೋನವನ್ನು ತಳೆಯುತ್ತಿದ್ದೇವೆ. 70ರ ಹರೆಯದ ಅನಾರೋಗ್ಯಪೀಡಿತ ವೃದ್ಧರ ಮೇಲೆ ಕಣ್ಣಿರಿಸಲು ನಿಮಗೆ ಸಾಧ್ಯವಿಲ್ಲ. 70 ಹರೆಯದ ವೃದ್ಧರನ್ನು ದಿಗ್ಬಂಧನದಲ್ಲಿರಿಸಲು ಸಾಧ್ಯವಿಲ್ಲವೆಂದು ಸಾಲಿಸಿಟರ್ ಜನರಲ್ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಹೇಳುತ್ತಿದ್ದಾರೆ. ಸರಕಾರದ ಎಲ್ಲ ಬಲವನ್ನು ಹೊಂದಿಯೂ 70ರ ಹರೆಯದ ಅನಾರೋಗ್ಯಪೀಡಿತ ವ್ಯಕ್ತಿಯನ್ನು ಗೃಹಬಂಧನದಲ್ಲಿರಿಸಲು ನಿಮಗೆ ಸಾಧ್ಯವಾಗುತ್ತಿಲ್ಲ ’ ಎಂದು ಕಿಡಿಕಾರಿದರು.

ನವ್ಲಾಖಾ ತನ್ನ ಗೃಹಬಂಧನಕ್ಕಾಗಿ ಸಿಪಿಐ ಕಚೇರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ತಿಳಿಸಿದಾಗ, ಸಿಪಿಐ ಭಾರತದ ಮಾನ್ಯತೆ ಹೊಂದಿರುವ ರಾಜಕೀಯ ಪಕ್ಷವಾಗಿದೆ ಎಂದು ಬೆಟ್ಟು ಮಾಡಿದ ನ್ಯಾ.ಜೋಸೆಫ್,ಇದರಲ್ಲಿ ಸಮಸ್ಯೆಯೇನಿದೆ ಎಂದು ಪ್ರಶ್ನಿಸಿದರು. 

‘ಇದು ನಿಮಗೆ ಆಘಾತವನ್ನುಂಟು ಮಾಡದಿದ್ದರೆ ನಾನು ಹೇಳುವುದು ಏನಿದೆ ’ ಎಂದು ಮೆಹ್ತಾ ಉತ್ತರಿಸಿದರು. ಮಹಾರಾಷ್ಟ್ರದ ಭೀಮಾ-ಕೋರೆಗಾಂವ್ ಗ್ರಾಮದಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನವ್ಲಾಖಾ ಎಪ್ರಿಲ್ 2020ರಿಂದಲೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.

ಎನ್ಐಎ ಸೋಮವಾರದವರೆಗೆ ಕಾಲಾವಕಾಶ ಕೋರಿದಾಗ ಕ್ರುದ್ಧರಾದ ನ್ಯಾ.ಜೋಸೆಫ್, ‘ಪ್ರಕರಣವನ್ನು ವಿಳಂಬಿಸಲು ನಿಮ್ಮ ಪ್ರಯತ್ನಗಳು ನಮಗೆ ಅರ್ಥವಾಗುವುದಿಲ್ಲ ಎಂದು ಭಾವಿಸಿದ್ದೀರಾ? ಯಾವ ಉದ್ದೇಶಕ್ಕಾಗಿ ನಾವು ಸೋಮವಾರಕ್ಕೆ ಮುಂದೂಡಬೇಕು? 24 ಗಂಟೆಗಳಲ್ಲಿ ನವ್ಲಾಖಾರನ್ನು ಗೃಹಬಂಧನಕ್ಕೆ ಸ್ಥಳಾಂತರಿಸಬೇಕು,ನಾವು ಆದೇಶವನ್ನು ಹೊರಡಿಸುತ್ತಿದ್ದೇವೆ’ ಎಂದು ಹೇಳಿದರು.

Similar News