ಬೆಂಗಳೂರಿನಲ್ಲಿಯೇ 6.69 ಲಕ್ಷ ಮತದಾರರ ಹೆಸರು ರದ್ದು..!

Update: 2022-11-18 17:36 GMT

ಬೆಂಗಳೂರು (Bengaluru) , ನ.18: ಮತದಾರರ ಮಾಹಿತಿ ಕಳವು ಪ್ರಕರಣದ ರೂವಾರಿ ಎನ್ನಲಾದ ಚಿಲುವೆ ಸಂಸ್ಥೆಯ ಅಕ್ರಮ ಬಗೆದಷ್ಟು ಬಯಲಿಗೆ ಬರುತ್ತಿರುವ ನಡುವೆ ಬರೀ ಬೆಂಗಳೂರಿನಲ್ಲಿಯೇ 6.69 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ.

ಈ ಹಿಂದೆ 243 ವಾರ್ಡ್‍ಗಳ ಚುನಾವಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ವೇಳೆ ಕೆಲವರು ಸಮೀಕ್ಷೆ ಹೆಸರಿನಲ್ಲಿ ಮನೆ ಮನೆಗೂ ತೆರಳಿ ಮಾಹಿತಿ ಕಲೆಹಾಕಿದ್ದು ಮಾತ್ರವಲ್ಲದೆ, ಒಟ್ಟು 6,69,652 ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಅದು ಅಲ್ಲದೆ, ಕ್ಷುಲ್ಲಕ ಕಾರಣಗಳನ್ನು ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಹಿಂದೆ ಚಿಲುಮೆ ಸಂಸ್ಥೆಯ ಕೈವಾಡ ಇದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಎಲ್ಲಿ ಎಷ್ಟು ಮತದಾರರು?: ಕೆಲ ಮಾಹಿತಿಗಳ ಪ್ರಕಾರ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ 21,968 ಮತದಾರರನ್ನು ಪಟ್ಟಿಯಿಂದ ಕೈಬಿಟ್ಟರೆ, ಕೆ.ಆರ್.ಪುರಂ ಕ್ಷೇತ್ರದಿಂದ 39,763, ಬ್ಯಾಟರಾಯನಪುರ 30,757 ಮತದಾರರ ಹೆಸರೇ ಇಲ್ಲದಂತೆ ಆಗಿದೆ.

ಅದೇ ರೀತಿ, ದಾಸರಹಳ್ಳಿ 35,086, ಯಶವಂತಪುರ 35,829, ಆರ್.ಆರ್.ನಗರ 33,009, ಮಹಾಲಕ್ಷ್ಮೀ ಲೇಔಟ್ 20,404, ಮಲ್ಲೇಶ್ವರಂ 11,788, ಹೆಬ್ಬಾಳ್ 20,039, ಪುಲಕೇಶಿನಗರ 22,196, ಸರ್ವಜ್ಞ ನಗರ 28,691, ಸಿವಿ ರಾಮನ್ ನಗರ 21,457, ಶಿವಾಜಿನಗರ 14,679, ಶಾಂತಿನಗರ 20,386, ಗಾಂಧಿನಗರ 16,465.

ಇದನ್ನೂ ಓದಿ: ಮತದಾರರ ಮಾಹಿತಿ ಕಳವು ಪ್ರಕರಣ: ಚಿಲುಮೆ ಸಂಸ್ಥೆ ಕಚೇರಿ ಮೇಲೆ ದಾಳಿ, ನಾಲ್ವರು ವಶಕ್ಕೆ

ರಾಜಾಜಿನಗರ 12,757, ಗೋವಿಂದರಾಜ್ ನಗರ 20,067, ವಿಜಯನಗರ 28,562, ಚಾಮರಾಜಪೇಟೆ 19,304, ಚಿಕ್ಕಪೇಟೆ 16,231, ಬಸವನಗುಡಿ 18,838, ಪದ್ಮನಾಭ ನಗರ 17,435, ಬಿಟಿಎಂಲೇಔಟ್ 16,141, ಜಯನಗರ 13,061, ಮಹಾದೇವಪುರ 33,376, ಬೊಮ್ಮನಹಳ್ಳಿ 31,157, ಬೆಂಗಳೂರು ಸೌತ್ 45,927, ಆನೇಕಲ್ 24,279 ಮತದಾರರ ಹೆಸರನ್ನು ರದ್ದು ಮಾಡಲಾಗಿದೆ ಎಂದು ತಿಳಿದು ಬಂದಿದೆ.

► 6.69 ಲಕ್ಷ ಮತದಾರರ ಹೆಸರು ರದ್ದು: ಪರಿಶೀಲನೆ

ಬೆಂಗಳೂರು ನಗರ ವ್ಯಾಪ್ತಿಯಲ್ಲಿ 6.69 ಲಕ್ಷ ಮತದಾರರ ಹೆಸರು ರದ್ದು ಮಾಡಿರುವ ಆರೋಪ ಪ್ರಕರಣ ಸಂಬಂಧ ಪರಿಶಳನೆ ನಡೆಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರ ವೈಯಕ್ತಿಕ ಮಾಹಿತಿ ಪಡೆದು ದುರ್ಬಳಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ  ಈಗಾಗಲೇ ಪೊಲೀಸ್ ಠಾಣೆಗಳಿಗೆ ನಾವು ದೂರು ನೀಡಿದ್ದೇವೆ. ಇನ್ನೂ, ನಗರ ಜಿಲ್ಲಾಧಿಕಾರಿ ನೀಡಿರುವ ವರದಿಯನ್ನು ಪೊಲೀಸರಿಗೆ ನಾವು ಸಲ್ಲಿಸಿದ್ದೇವೆ ಎಂದರು.

ಮತದಾರರ ನೊಂದಣಾಧಿಕಾರಿಗಳು ಸೇರಿ ಇತರ ಅಧಿಕಾರಿಗಳು ಸಂಸ್ಥೆ ಸಿಬ್ಬಂದಿಗೆ ಗುರುತು ಚೀಟಿ ನೀಡಿರವುದು ತನಿಖೆಯಲ್ಲಿ ಕಂಡುಬಂದರೆ ಮುಲಾಜಿಲ್ಲದೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಮತದಾರರ ಪಟ್ಟಿ ಪರಿಷ್ಕರಣೆ ಚೆನ್ನಾಗಿ ನಡೆಯಬೇಕೆಂಬ ಹಿನ್ನೆಲೆಯಲ್ಲಿ ಈ ಹಿಂದೆ ಚಿಲುಮೆ ಸಂಸ್ಥೆ ಮಾಡಿರುವ ಕೆಲಸ ಆಧಾರದ ಮೇಲೆ ಅನುಮತಿ ನೀಡಲಾಗಿದೆ. ಖಾಸಗಿ ಮತದಾರರ ಮಾಹಿತಿ ಸಂಗ್ರಹಿಸಿರುವ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಇದರ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ಬಳಿಕ ಗೊತ್ತಾಗಿದೆ. ಅಲ್ಲದೆ,  ಒಂದು ವೇಳೆ ಖಾಸಗಿಯಾಗಿ ಮತದಾರರ ದತ್ತಾಂಶ ಸಂಗ್ರಹಿಸಿದ್ದಾರೆ ಅಥವಾ ಇಲ್ಲವೋ ಎಂಬುದರ ಬಗ್ಗೆ ಸಂಸ್ಥೆ ವಿರುದ್ಧ ತನಿಖೆ ನಡೆಸುವಂತೆ ಪ್ರಾದೇಶಿಕ ಆಯುಕ್ತರು ಈಗಾಗಲೇ ಆದೇಶಿಸಿದ್ದಾರೆ ಎಂದು ವಿವರಿಸಿದರು.

Similar News