ವಾಯುಮಾಲಿನ್ಯ ಹೆಚ್ಚಳ: ದಾವಣಗೆರೆ ಸ್ಮಾರ್ಟ್‌ಸಿಟಿಗೆ ಕಪ್ಪು ಚುಕ್ಕೆ

Update: 2022-11-18 18:29 GMT

ದಾವಣಗೆರೆ, ನ.18: ಸ್ಮಾರ್ಟ್ ನಗರಗಳಲ್ಲಿ 9ನೇ ಸ್ಥಾನಕ್ಕೇರಲು ದಾಪುಗಾಲಿಡುತ್ತಿರುವ ದಾವಣಗೆರೆ ಸ್ಮಾರ್ಟ್‌ಸಿಟಿಗೆ (davanagere smart city) ಕೇಂದ್ರ ಮಾಲಿನ್ಯ ಮಂಡಳಿ ನಡೆಸಿದ ವಾಯುವಿನ ಗುಣಮಟ್ಟ ಸರ್ವೇಯ ವರದಿಯಲ್ಲಿ ದಾವಣಗೆರೆಯೂ ಸೇರ್ಪಡೆ ಆಗಿರುವುದು ಆತಂಕದ ಛಾಯೆ ಮೂಡಿಸಿದೆ.

ಹೌದು, ಕೇಂದ್ರ ಮಾಲಿನ್ಯ ಮಂಡಳಿಯು ದೇಶದಲ್ಲಿ ವಾಯುವಿನ ಗುಣಮಟ್ಟ ಪಾಲನೆ ಯಾಗದ ಒಟ್ಟು 132 ನಗರಗಳನ್ನು ಕಳೆದ ನ.2ರಂದು ವರದಿ ನೀಡಿದೆ. ಆ ವರದಿಯಲ್ಲಿ ಕರ್ನಾಟಕ ರಾಜ್ಯದ ನಾಲ್ಕು ಜಿಲ್ಲೆಗಳು ಸೇರಿವೆ. ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಮತ್ತು ದಾವಣಗೆರೆ ಜಿಲ್ಲೆ ಸೇರಿದ್ದು, ದಾವಣಗೆರೆ ಸ್ಮಾರ್ಟ್‌ಸಿಟಿ ಎಂಬ ಹೆಗ್ಗಳಿಕೆಗೆ ಕಪ್ಪು ಚುಕ್ಕೆಯಾಗಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ವರದಿಯಲ್ಲಿ ವಾತಾವರಣದಲ್ಲಿ ಜೀವಕ್ಕೆ ಹಾನಿ ಉಂಟು ಮಾಡುವ ಧೂಳಿನ ಕಣಗಳು ಹೆಚ್ಚು ಇವೆ ಎಂಬ ಅಂಶ ಇದೆ. ಹೀಗಾಗಿ ವಾತಾವರಣದಲ್ಲಿ ಇರುವ ಧೂಳಿನ ಕಣಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಅದರ ನಿರ್ಮೂಲನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದೆ. ದಾವಣಗೆರೆ ನಗರದ ಹಳೆಯ ಬಸ್ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಪಿ.ಬಿ.ರಸ್ತೆ, ಹದಡಿ ರಸ್ತೆ, ಎವಿಕೆ ಕಾಲೇಜು ರಸ್ತೆ ಹಾಗೂ ನಗರದ ಹಳೆಯ ಭಾಗದ ರಸ್ತೆಗಳು ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ಹೆಚ್ಚಿದೆ. ಇದರಿಂದಾಗಿ ಧೂಳಿನ ಪ್ರಮಾಣ ಹೆಚ್ಚಾಗಿರುವುದರಿಂದ ಪಾದಚಾರಿಗಳು, ವಾಹನ ಸವಾರರು, ರಸ್ತೆ ಬದಿಯ ನಿವಾಸಿಗಳ ಆರೋಗ್ಯದ ಮೇಲೆ ಸಣ್ಣ ಸಣ್ಣ ಮಣ್ಣಿನ ಕಣಗಳ ಧೂಳು ದುಷ್ಪರಿಣಾಮ ಬೀರುತ್ತಿವೆ.

ಆರೋಗ್ಯದ ಮೇಲೆ ದುಷ್ಪರಿಣಾಮ:

ವಾಹನಗಳ ದಟ್ಟಣೆಯಿಂದ ಹೊರಸೂಸುವ ಇಂಗಾಲವು ಗಾಳಿಯಲ್ಲಿ ಸೇರುತ್ತಿದೆ. ಇದರ ಜೊತೆಗೆ ತುಸು ಗಾಳಿ ಬೀಸಿದರೂ ರಸ್ತೆ ಬದಿಯ ಧೂಳು ಮುಖಕ್ಕೆ ರಾಚುತ್ತದೆ. ಇದರಿಂದಾಗಿ ಜನರಿಗೆ ಹೃದಯ ಸಂಬಂಧಿ ರೋಗ, ಒಣ ಕೆಮ್ಮು, ಅಸ್ತಮಾ ಸೇರಿದಂತೆ ಶ್ವಾಸಕೋಶ ತೊಂದರೆ ಕಾಣಿಸಿಕೊಳ್ಳುತ್ತಿವೆ.

► ವಾಯುವಿನ ಗುಣಮಟ್ಟದ ವಿವರ:

ದೇವರಾಜ್ ಅರಸು ಬಡಾವಣೆಯ ಸತತ ವಾಯುಗುಣಮಟ್ಟ ಮಾಪನ ಕೇಂದ್ರ ಹಾಗೂ ದಕ್ಷಿಣ ಟ್ರಾಫಿಕ್ ಪೊಲೀಸ್ ಸ್ಟೇಷನ್‌ನಲ್ಲಿ ಮಾನವ ಚಾಲಿತ ಮಾಪನ ಕೇಂದ್ರದಲ್ಲಿ ದಾವಣಗೆರೆ ನಗರದ ವಾಯುವಿನ ಗುಣಮಟ್ಟ ಸಂಗ್ರಹಿಸಲಾಗುತ್ತಿದೆ. ನಗರವು ಹೆಚ್ಚು ಸಣ್ಣ ಸಣ್ಣ ಧೂಳಿನ ಕಣಗಳಿಂದ ಕೂಡಿದ್ದು, ಇದನ್ನು ವಾಯು ಗುಣಮಟ್ಟ ಮಾಪನ ಯಂತ್ರದ ಮೂಲಕ ಅಧ್ಯಯನ ಮಾಡಲಾಗುತ್ತಿದೆ. ಪ್ರಸಕ್ತ ದಾಖಲಾದ ಪಿಎಂ 2.5 (particulate matter-pm2.5)) ಮತ್ತು ಪಿಎಂ 10 ಮಾಲಿನ್ಯ ಕಾರಕ ಕಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಪರಿಸರ ಅಧಿಕಾರಿ ಸಂತೋಷ್ ತಿಳಿಸಿದ್ದಾರೆ.

► ವಿವಿಧೆಡೆ ವಾಯುಮಾಲಿನ್ಯ ಮಾಹಿತಿ ಫಲಕ

ನಗರದಲ್ಲಿ ಹೆಚ್ಚಾಗುತ್ತಿರುವ ಧೂಳಿನ ಪ್ರಮಾಣ ಮಾಹಿತಿ ಸಂಗ್ರಹಿಸಲು ನಗರದಲ್ಲಿ ವಿವಿಧೆಡೆ ವಾಯು ಮಾಲಿನ್ಯ ಮಾಹಿತಿ ಫಲಕ ಅಳವಡಿಸಲಾಗಿದೆ. ಮಹಾನಗರಪಾಲಿಕೆ ಕಚೇರಿ, ಪರಿಸರ ಮಾಲಿನ್ಯ ಪ್ರಾದೇಶಿಕ ಕಚೇರಿ ಸೇರಿದಂತೆ ವಿವಿಧೆಡೆ ಅಳವಡಿಸಲಾಗಿದೆ. ಗಾಳಿಯ ವೇಗ, ಬಿಸಿಗಾಳಿ, ಉಷ್ಣಾಂಶ, ಧೂಳಿನ ಸಣ್ಣ, ಸಣ್ಣ ಕಣಗಳ ಮಾಹಿತಿ ನೀಡಲಾಗುತ್ತದೆ ಎಂದು ಜಿಲ್ಲೆಯ ಪರಿಸರ ಅಧಿಕಾರಿ ಸಂತೋಷ್ ತಿಳಿಸಿದ್ದಾರೆ.

------------------------------------------

''ವಾಯು ಮಾಲಿನ್ಯ ಹೆಚ್ಚಳದಿಂದ ಅಲರ್ಜಿ, ನೆಗಡಿ, ಅಲರ್ಜಿ ಕೆಮ್ಮು, ಕಣ್ಣುಗಳು ಉರಿಯುವುದು, ಅಸ್ತಮಾ ಕಾಯಿಲೆ, ಈ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಪರಿಹಾರವೆಂದರೆ ಮಾಸ್ಕ್ ಧರಿಸುವುದು, ಕಣ್ಣಿಗೆ ಕನ್ನಡಕ ಬಳಸುವುದು ಒಳ್ಳೆಯದು.''

- ಡಾ. ಎನ್.ಎಚ್. ಕೃಷ್ಣ, ಸಲಹಾ ತಜ್ಞ ವೈದ್ಯರು (ಅಸ್ತಮಾ, ಅಲರ್ಜಿ, ಟಿಬಿ ಮತ್ತು ಶ್ವಾಸಕೋಶ)

------------------------------------------------

''ಧೂಳಿನಿಂದ ಅಸ್ತಮಾ, ಒಣ ಕೆಮ್ಮು ಇಂತಹ ಕಾಯಿಲೆಗಳು ಸಾಮಾನ್ಯವಾಗಿವೆ ಬದುಕು ಕಟ್ಟಿಕೊಳ್ಳಲು ಮಾರುಕಟ್ಟೆಯ ರಸ್ತೆ ಬದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತೇವೆ. ನಮ್ಮ ಕಾಳಜಿ ಯಾರಿಗೂ ಬೇಕಿಲ್ಲ.''

- ಹನುಮಂತಪ್ಪ, ವ್ಯಾಪಾರಿ, ಮಂಡಿಪೇಟೆ

-----------------------------------------------------

''ನಗರದಲ್ಲಿ ವಾಹನಗಳ ದಟ್ಟಣೆ, ರಭಸವಾಗಿ ಬೀಸುವ ಗಾಳಿಯಿಂದ ಧೂಳಿನ ಕಣಗಳು ಮುಖಕ್ಕೆ ರಾಚಿ ನಮ್ಮ ದೇಹದೊಳಗೆ ಸೇರಿಕೊಳ್ಳುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ''

ರಾಮಚಂದ್ರಪ್ಪ, ಹಿರಿಯ ನಾಗರಿಕ

Similar News