×
Ad

ಸ್ಟಾರ್ಟಪ್‍ಗಳ ನೆರವಿಗೆ ಬೂಸ್ಟರ್ ಕಿಟ್ ಉಪಕ್ರಮ; ಸಚಿವರ ಸಮ್ಮುಖದಲ್ಲಿ 9 ಒಡಂಬಡಿಕೆಗೆ ಅಂಕಿತ

Update: 2022-11-19 00:13 IST

ಬೆಂಗಳೂರು, ನ. 18: ‘ನವೋದ್ಯಮಗಳ ಬೆಳವಣಿಗೆಗೆ ಇಂಬು ನೀಡುವ ನಿಟ್ಟಿನಲ್ಲಿ ಮತ್ತಷ್ಟು ರಚನಾತ್ಮಕ ನೆರವು ನೀಡುವ ಉದ್ದೇಶದ ಬೂಸ್ಟರ್ ಕಿಟ್ ಉಪಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಇದೇ ವೇಳೆ ಒಟ್ಟು 9 ಸಂಸ್ಥೆಗಳ ಜತೆಗೆ ಕರ್ನಾಟಕ ಇನ್ನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿ (ಕಿಟ್ಸ್) ವ್ಯವಸ್ಥಾಪಕ ನಿರ್ದೇಶಕಿ ಮೀನಾ ನಾಗರಾಜ ಅವರು ಸರಕಾರದ ಪರವಾಗಿ ಐಟಿ-ಬಿಟಿ ಸಚಿವ ಡಾ.ಅಶ್ವತ್ಥ ನಾರಾಯಣ್ ಅವರ ಸಮ್ಮುಖದಲ್ಲಿ ಒಡಂಬಡಿಕೆಗೆ ಸಹಿ ಹಾಕಿದರು.

ಈ ಸಂಬಂಧವಾಗಿ ಗೂಗಲ್, ಪೇಟಿಎಂ, ಎಚ್‍ಡಿಎಫ್‍ಸಿ, ರೇಜರ್ ಪೇ, ಮೈಕ್ರೋಸಾಫ್ಟ್, ಗೆಯ್ನ್, ದಯಾನಂದ ಸಾಗರ್ ಉದ್ಯಮಶೀಲತಾ ಮತ್ತು ವಾಣಿಜ್ಯ ಪರಿಪೋಷಣಾ ಕೇಂದ್ರ, ಎಡಬ್ಲ್ಯುಎಸ್ ಮತ್ತು ಸ್ಟ್ರಾಂಗ್‍ಹರ್ ವೆಂಚರ್‍ಗಳ ಜತೆಗೆ ಐಟಿ-ಬಿಟಿ ಇಲಾಖೆ ಮತ್ತು ಕರ್ನಾಟಕ ಇನ್ನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿಗಳು (ಕಿಟ್ಸ್) ಸಚಿವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಅಂಕಿತ ಹಾಕಿದವು.

ಈ ವೇಳೆ ಮಾತನಾಡಿ ಡಾ.ಅಶ್ವತ್ಥ ನಾರಾಯಣ, ‘ಕರ್ನಾಟಕ ಸ್ಟಾರ್ಟಪ್ ಸೆಲ್‍ನಲ್ಲಿ ನೋಂದಣಿ ಮಾಡಿಕೊಂಡಿರುವ ನವೋದ್ಯಮಗಳಿಗೆ ಇನ್ನುಮುಂದೆ ಎಚ್‍ಡಿಎಫ್‍ಸಿ, ಪೇಟಿಎಂ ಮತ್ತು ರೇಜರ್‍ಪೇ ಸಂಸ್ಥೆಗಳ ಮೂಲಕ ಬ್ಯಾಂಕಿಂಗ್ ಹಾಗೂ ಫಿನ್-ಟೆಕ್ ಸೇವೆಗಳು ಸಿಗಲಿವೆ. ಜತೆಗೆ ಸ್ಮಾರ್ಟ್‍ಅಪ್ ಉಪಕ್ರಮದಡಿ ಹೆಚ್ಚಿನ ಮಾರುಕಟ್ಟೆ ಪ್ರಸ್ತುತಿ, ಬೇಡಿಕೆ ಸೃಷ್ಟಿ ಮತ್ತು ವ್ಯಾಪಾರ-ವಹಿವಾಟುಗಳ ಸುಸ್ಥಿರ ಬೆಳವಣಿಗೆ ಸಾಧ್ಯವಾಗಲಿದೆ' ಎಂದು ಹೇಳಿದರು.

ಬೂಸ್ಟರ್ ಕಿಟ್ ಉಪಕ್ರಮದಿಂದಾಗಿ ನವೋದ್ಯಮಗಳಿಗೆ ಅಗತ್ಯವಾಗಿರುವ ಕಚೇರಿ ಮೂಲಸೌಲಭ್ಯ, ಪ್ರಯೋಗಾಲಯ, ಪರಿಣತರ ಅನುಭವಗಳು, ಅಗತ್ಯ ನಿಧಿ ಲಭ್ಯವಾಗಲಿವೆ. ರಾಜ್ಯದ ಆರ್ಥಿಕತೆಯ ಬೆಳವಣಿಗೆಯಲ್ಲಿ ನವೋದ್ಯಮಗಳು ನಿರ್ಣಾಯಕ ಪಾತ್ರ ವಹಿಸಬೇಕಾಗಿದ್ದು, ಡಿಜಿಟಲ್ ಅರ್ಥವ್ಯವಸ್ಥೆಗೆ ಹೆಚ್ಚಿನ ಕೊಡುಗೆ ನೀಡಬೇಕಾದ ಅಗತ್ಯವಿದೆ’ ಎಂದು ಅವರು ನುಡಿದರು.

ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಕಿಟ್ಸ್ ವ್ಯವಸ್ಥಾಪಕ ನಿರ್ದೇಶಕಿ ಮೀನಾ ನಾಗರಾಜ್ ಮತ್ತು ಒಡಂಬಡಿಕೆಗೆ ಅಂಕಿತ ಹಾಕಿದ ಕಂಪೆನಿಗಳ ಉನ್ನತ ಮಟ್ಟದ ಪ್ರತಿನಿಧಿಗಳು ಉಪಸ್ಥಿತರಿದ್ದರು. 

Similar News