ಕೌಟುಂಬಿಕ ಹಿಂಸೆಗೆ ಹೆಣ್ಣು ಬಲಿಯಾಗದಂತೆ ಹೇಗೆ ತಡೆಯಬಹುದು?

Update: 2022-11-19 08:00 GMT

ದುಃಖಕರವೆಂದರೆ, ಕೌಟುಂಬಿಕ ಹಿಂಸೆಯನ್ನು ಹೆಚ್ಚಾಗಿ ಖಾಸಗಿ ವಿಷಯ, ಪ್ರೇಮಿಗಳ ಜಗಳ ಎಂದು ನೋಡಲಾಗುತ್ತದೆ ಮತ್ತು ಅಷ್ಟೇನೂ ಯಾರೂ ಹಸ್ತಕ್ಷೇಪ ಮಾಡುವುದಿಲ್ಲ. ಇದಲ್ಲದೆ, ಮಹಿಳೆಯ ಸ್ವಂತ ಪೋಷಕರು ಕೂಡ ಅಂಥ ವಿವಾಹ ಸಂಬಂಧವನ್ನು ಬಿಡಲು ಹೆಣ್ಣಿಗೆ ಸಮ್ಮತಿಸುವುದಿಲ್ಲ. ಬದಲಿಗೆ ಹೊಂದಿಕೊಳ್ಳುವಂತೆ ಹೇಳುತ್ತಾರೆ ಅಥವಾ ಪತಿ ಉತ್ತಮವಾಗಿ ವರ್ತಿಸುವಂತೆ ಮಾಡಲು ಪ್ರಯತ್ನಿಸುವುದು ನಡೆಯುತ್ತದೆ, ಏಕೆಂದರೆ ಭಾರತೀಯ ಸಮಾಜದಲ್ಲಿ ವಿಚ್ಛೇದಿತ ಮಹಿಳೆಯರಿಗೆ ಕಳಂಕಿತರ ಪಟ್ಟ ಸಾಮಾನ್ಯ.

ದಿಲ್ಲಿಯಲ್ಲಿ ನಡೆದಿರುವ ಶ್ರದ್ಧಾ ವಾಲ್ಕರ್ ಎಂಬ 26 ವರ್ಷದ ಯುವತಿಯ ಭೀಕರ ಹತ್ಯೆ ದೇಶವನ್ನೇ ಬೆಚ್ಚಿಬೀಳಿಸಿದೆ. ಕೊಂದವನು ಆಕೆಯೊಡನೆ ಲಿವ್-ಇನ್ ಸಂಬಂಧದಲ್ಲಿದ್ದ 28 ವರ್ಷದ ಅಫ್ತಾಬ್ ಅಮೀನ್ ಪೂನಾವಾಲಾ ಎಂಬಾತ. ಈ ಅತ್ಯಂತ ಕ್ರೂರ ಹತ್ಯೆ ಎಲ್ಲರಲ್ಲೂ ಬಹಳಷ್ಟು ನೋವು ಮತ್ತು ಕೋಪವನ್ನು ಉಂಟುಮಾಡಿದೆ. ಅಫ್ತಾಬ್‌ನನ್ನು ಕ್ರೂರ ಹತ್ಯೆಗಾಗಿ ಮತ್ತು ಅವನ ಅಪರಾಧವನ್ನು ಮುಚ್ಚಿಟ್ಟಿದ್ದಕ್ಕಾಗಿ ವಿಚಾರಣೆ ಮಾಡುವುದು, ಶಿಕ್ಷೆ ವಿಧಿಸುವುದು ಎಲ್ಲವೂ ಪೊಲೀಸ್ ಮತ್ತು ಪ್ರಾಸಿಕ್ಯೂಷನ್‌ನ ಕೆಲಸ. ಆದರೆ ಈ ಹತ್ಯೆಯಿಂದ ಆಘಾತಕ್ಕೊಳಗಾದ ಸಾಮಾನ್ಯ ಜನರು, ಬದಲಾವಣೆಯನ್ನು ತರಲು ಮತ್ತು ಮಹಿಳೆಯರು ಎದುರಿಸುತ್ತಿರುವ ಇಂತಹ ದೌರ್ಜನ್ಯವನ್ನು ತಡೆಯಲು ಏನು ಮಾಡಬಹುದು? ಇಂತಹ ಕೊಲೆಗಳನ್ನು ತಡೆಗಟ್ಟಲು ಸಮಾಜದಲ್ಲಿ ಏನು ಬದಲಾಗಬೇಕು ಮತ್ತು ಬದಲಾವಣೆಯನ್ನು ತರಲು ಪ್ರತಿಯೊಬ್ಬರೂ ಏನು ಮಾಡಬಹುದು ಮತ್ತು ಮಾಡಬೇಕು ಎಂಬುದರ ಕುರಿತು ನನ್ನ ಆರು ಆಲೋಚನೆಗಳು ಇಲ್ಲಿವೆ.

1) ಕೌಟುಂಬಿಕ ಹಿಂಸೆಯ ವಿರುದ್ಧ ಸಕಾಲಿಕ ಕ್ರಮಕ್ಕಾಗಿ ಅಭಿಯಾನ

ಅವರು ಪ್ರೀತಿಸುತ್ತಿದ್ದರು, ಒಟ್ಟಿಗೆ ವಾಸಿಸುತ್ತಿದ್ದರು ಮತ್ತು ಆಕೆ ಮದುವೆಯಾಗಲು ಒತ್ತಾಯಿಸಿದಾಗ ಅಫ್ತಾಬ್ ಅವಳನ್ನು ಕತ್ತು ಹಿಸುಕಿ ಕೊಂದನೆಂಬ ಸುದ್ದಿಗಳನ್ನು ನಾನು ನೋಡಿದ್ದೇನೆ. ದುಃಖದ ವಿಷಯವೆಂದರೆ, ಇದು ಹಠಾತ್ ಆದದ್ದಲ್ಲ ಎಂದು ನನಗೆ ಖಾತ್ರಿಯಿದೆ. ಸಾಮಾನ್ಯವಾಗಿ, ದೀರ್ಘಾವಧಿಯ ಕೌಟುಂಬಿಕ ಹಿಂಸೆಯ ನಂತರ ಬಾಯ್‌ಫ್ರೆಂಡ್/ಗಂಡ ಮಹಿಳೆಯನ್ನು ಕೊಲ್ಲುತ್ತಾನೆ. ಕೌಟುಂಬಿಕ ಹಿಂಸೆಯ ಬಗ್ಗೆ ಜನರು ಪ್ರತಿಕ್ರಿಯಿಸಿದರೆ ಮತ್ತು ಅದನ್ನು ತಡೆಯಲು ಕ್ರಮ ಕೈಗೊಂಡರೆ, ಅದು ಮಹಿಳೆಯರ ಜೀವವನ್ನು ಉಳಿಸಬಹುದು. ದುಃಖಕರವೆಂದರೆ, ಕೌಟುಂಬಿಕ ಹಿಂಸೆಯನ್ನು ಹೆಚ್ಚಾಗಿ ಖಾಸಗಿ ವಿಷಯ, ಪ್ರೇಮಿಗಳ ಜಗಳ ಎಂದು ನೋಡಲಾಗುತ್ತದೆ ಮತ್ತು ಅಷ್ಟೇನೂ ಯಾರೂ ಹಸ್ತಕ್ಷೇಪ ಮಾಡುವುದಿಲ್ಲ. ಇದಲ್ಲದೆ, ಮಹಿಳೆಯ ಸ್ವಂತ ಪೋಷಕರು ಕೂಡ ಅಂಥ ವಿವಾಹ ಸಂಬಂಧವನ್ನು ಬಿಡಲು ಹೆಣ್ಣಿಗೆ ಸಮ್ಮತಿಸುವುದಿಲ್ಲ. ಬದಲಿಗೆ ಹೊಂದಿಕೊಳ್ಳುವಂತೆ ಹೇಳುತ್ತಾರೆ ಅಥವಾ ಪತಿ ಉತ್ತಮವಾಗಿ ವರ್ತಿಸುವಂತೆ ಮಾಡಲು ಪ್ರಯತ್ನಿಸುವುದು ನಡೆಯುತ್ತದೆ, ಏಕೆಂದರೆ ಭಾರತೀಯ ಸಮಾಜದಲ್ಲಿ ವಿಚ್ಛೇದಿತ ಮಹಿಳೆಯರಿಗೆ ಕಳಂಕಿತರ ಪಟ್ಟ ಸಾಮಾನ್ಯ.

2) ಸಂತ್ರಸ್ತರಿಗೆ ನಿರಂತರ ಬೆಂಬಲ, ಸಹಾಯ ಮತ್ತು ಆಶ್ರಯ ಸಿಗುವಂತಾಗಬೇಕು.

ಕೌಟುಂಬಿಕ ಹಿಂಸಾಚಾರ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳುವುದರಿಂದ, ಹೆಚ್ಚಿನ ಮಹಿಳೆಯರು ವಾಸ್ತವವಾಗಿ ಕೌಟುಂಬಿಕ ಹಿಂಸಾಚಾರವನ್ನು ಹೇಳಿಕೊಳ್ಳುವುದೇ ಇಲ್ಲ. ಏಕೆಂದರೆ ಅಂತಹ ಹಿಂಸಾಚಾರದ ಸ್ವರೂಪವು ಪಶ್ಚಾತ್ತಾಪದ ಪ್ರದರ್ಶನಗಳಿಂದ ಕೂಡಿರುತ್ತದೆ. ಅಪರಾಧಿಯು ತಮ್ಮನ್ನು ಪ್ರೀತಿಸುತ್ತಾನೆ ಮತ್ತು ಹಿಂಸೆಯನ್ನು ಪುನರಾವರ್ತಿಸುವುದಿಲ್ಲ ಎಂದು ಮಹಿಳೆಯರು ನಿಜವಾಗಿಯೂ ನಂಬುತ್ತಾರೆ; ಮತ್ತು ಬಹುಪಾಲು ಪ್ರಕರಣಗಳಲ್ಲಿ, ಅಪರಾಧಿಯು ಹೆಣ್ಣೇ ತನ್ನಲ್ಲಿ ಹಿಂಸಾಚಾರದ ಪ್ರಚೋದನೆಗೆ ಜವಾಬ್ದಾರಳು ಎಂದು ನಂಬುವಂತೆ ಮಾಡುತ್ತದೆ. ಪುರುಷರು ಮಾಡುವ ಹಿಂಸೆಗೆ ಮಹಿಳೆಯರನ್ನು ದೂಷಿಸುವ ಸಂಸ್ಕೃತಿಯು ಮತ್ತೊಂದು ತೊಡಕು. ಹೆಚ್ಚಿನ ಸಂದರ್ಭಗಳಲ್ಲಿ, ಮಹಿಳೆಯರು ಸ್ತ್ರೀವಾದಿ ಸಂಘಟನೆಗಳು ಅಥವಾ ಪೊಲೀಸರನ್ನು ಸಂಪರ್ಕಿಸಿದಾಗಲೂ ಹೇಗಾದರೂ ಗಂಡನ ವರ್ತನೆಯನ್ನು ಬದಲಿಸಬಹುದು ಎಂಬ ಭರವಸೆಯೊಂದಿಗೆ ಮದುವೆಯನ್ನು ಉಳಿಸುವ ಪ್ರಯತ್ನವೇ ನಡೆಯುತ್ತದೆ.

3) ಅಂತರ್ಜಾತಿ ಅಥವಾ ಅಂತರ್‌ಧರ್ಮೀಯ ವಿವಾಹವಾದ ಮಹಿಳೆಯನ್ನು ಕುಟುಂಬದಿಂದ ದೂರ ಮಾಡಕೂಡದು.

ಅಂತರ್ಜಾತಿ ಅಥವಾ ಅಂತರ್‌ಧರ್ಮೀಯ ಪ್ರೀತಿ/ವಿವಾಹದಲ್ಲಿ, ಕೌಟುಂಬಿಕ ಹಿಂಸಾಚಾರಕ್ಕೆ ಸಹಾಯವನ್ನು ಪಡೆಯುವುದು ಮಹಿಳೆಯರಿಗೆ ಇನ್ನೂ ಕಷ್ಟಕರವಾಗಿದೆ, ಏಕೆಂದರೆ ಮಹಿಳೆಯ ಕುಟುಂಬವು ಸಾಮಾನ್ಯವಾಗಿ ಅವಳನ್ನು ನಿರಾಕರಿಸುತ್ತದೆ. ಹೀಗೆ ತನ್ನದೇ ಕುಟುಂಬದಿಂದಲೂ ದೂರವಾಗಿರುವ ಮಹಿಳೆ ತನ್ನ ಸಂಗಾತಿಯ ಬಗ್ಗೆ ದೂರು ನೀಡಲು ಹಿಂಜರಿಯುತ್ತಾಳೆ. ಅಂದಹಾಗೆ, ಹಿಂದೂ ಬ್ರಾಹ್ಮಣ ಸ್ತ್ರೀಯರು ಹಿಂದೂ ಬ್ರಾಹ್ಮಣ ಪುರುಷರನ್ನು ಪ್ರೀತಿಸಿ ಮದುವೆಯಾದ ಪ್ರೇಮವಿವಾಹಗಳಲ್ಲಿಯೂ ಇದೇ ರೀತಿ ಸಂಭವಿಸುತ್ತದೆ ಎಂದು ನನಗೆ ತಿಳಿದಿದೆ. ಮಹಿಳೆಯ ಪೋಷಕರು ನಿಜವಾಗಿಯೂ ‘ಪ್ರೇಮವಿವಾಹ’ವನ್ನು ಒಪ್ಪದಿರುವುದು ಪತಿ ಮದ್ಯವ್ಯಸನಿ ಮತ್ತು ಮದುವೆ ಅಸಹನೀಯವಾಗಿದೆ ಎಂದು ಹೇಳಲು ಮಹಿಳೆಯನ್ನು ಹಿಂಜರಿಯುವಂತೆ ಮಾಡಿದೆ. ಅಂತೆಯೇ, ಯುವತಿಯರು ಲೈಂಗಿಕ ಕಿರುಕುಳ ಅಥವಾ ಅತ್ಯಾಚಾರದ ಬಗ್ಗೆ ದೂರು ನೀಡಲು ಹಿಂಜರಿಯುತ್ತಾರೆ, ಪೋಷಕರು ಹೆಣ್ಣುಮಕ್ಕಳ ಸುರಕ್ಷತೆ ಹೆಸರಿನಲ್ಲಿ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸುತ್ತಾರೆ ಎಂಬ ಭಯವೂ ಇದಕ್ಕೆ ಕಾರಣ. ಪೋಷಕರು ಯಾವಾಗಲೂ ತಮ್ಮ ಬೆಂಬಲವಿದೆ ಎಂಬ ಧೈರ್ಯ ಕೊಟ್ಟಲ್ಲಿ ಅದು ಮಹಿಳೆಗೆ ದೊಡ್ಡ ಸುರಕ್ಷೆ.

4) ಅಪರಿಚಿತರಿಂದ ಮಾತ್ರವಲ್ಲದೆ ಹತ್ತಿರದವರಿಂದಲೇ ಹಿಂಸೆ ಹೆಚ್ಚೆಂಬುದರ ಬಗ್ಗೆ ಗೊತ್ತಿರಬೇಕು.

ಮಹಿಳೆಯರು ತಮ್ಮ ಮನೆಗಳಲ್ಲಿ ಅಪರಿಚಿತರಿಂದ ಕೊಲೆಯಾಗು ವುದಕ್ಕಿಂತ ಹೆಚ್ಚಾಗಿ ತಮ್ಮ ಪ್ರೀತಿಪಾತ್ರರಿಂದಲೇ ಕೊಲೆಯಾಗುತ್ತಿದ್ದಾರೆ.

ಎ) ಯುಎನ್ ಅಧ್ಯಯನಗಳು ಜಗತ್ತಿನಾದ್ಯಂತ ಕೊಲೆಯಾದ ಮಹಿಳೆಯರಲ್ಲಿ ಅರ್ಧದಷ್ಟು ಹತ್ತಿರದವರಿಂದಲೇ ಕೊಲೆಯಾದವರಾಗಿದ್ದಾರೆ ಎನ್ನುತ್ತಿವೆ.

ಬಿ) ಐರ್‌ಲ್ಯಾಂಡ್‌ನಲ್ಲಿನ ಅಧ್ಯಯನವು 1996 ಮತ್ತು 2016ರ ನಡುವೆ ದೇಶದಲ್ಲಿ ಕೊಲೆಯಾದ ಮಹಿಳೆಯರಲ್ಲಿ ಶೇ.87ರಷ್ಟು ಮಹಿಳೆಯರು ಅವರು ತಿಳಿದಿರುವ ವ್ಯಕ್ತಿಯಿಂದಲೇ ಕೊಲೆಯಾದವರು ಮತ್ತು ಶೇ.63ರಷ್ಟು ಮಂದಿ ತಮ್ಮ ಸ್ವಂತ ಮನೆಯಲ್ಲೇ ಕೊಲೆಯಾದರು ಎಂದು ಹೇಳಿದೆ.

ಸಿ) 2014ರ ಸೆಪ್ಟಂಬರ್‌ನಲ್ಲಿ, ದಿಲ್ಲಿ ಹೈಕೋರ್ಟ್ ಪೀಠವು, ಗಂಡನ ಮನೆಯಲ್ಲಿಯೇ ಹೆಚ್ಚಿನ ಸಂಖ್ಯೆಯ ಮಹಿಳೆಯರ ಹತ್ಯೆಗಳ ಬಗ್ಗೆ ಪ್ರತಿಕ್ರಿಯಿಸುತ್ತ, ಪತಿಯನ್ನು ಪ್ರಧಾನ ಆರೋಪಿಯನ್ನಾಗಿಸುತ್ತ, ‘‘ಭಾರತದಲ್ಲಿ ವಿವಾಹಿತ ಮಹಿಳೆಯರು ಅವರ ಗಂಡಂದಿರ ಮನೆಗಿಂತಲೂ ಬೀದಿಗಳಲ್ಲಿ ಸುರಕ್ಷಿತವಾಗಿರುತ್ತಾರೆ’’ ಎಂದು ತೋರುತ್ತದೆ ಎಂದಿತ್ತು.

5) ಕೌಟುಂಬಿಕ ದೌರ್ಜನ್ಯವನ್ನು ಎದುರಿಸುತ್ತಿರುವ ಮಹಿಳೆಯರ ಪರವಾಗಿರಿ.

ತನ್ನ ಭೀಕರ ಅಪರಾಧಕ್ಕೆ ಶ್ರದ್ಧಾಗೆ ನ್ಯಾಯ ಸಿಗಬೇಕು ಮತ್ತು ಅಫ್ತಾಬ್‌ಗೆ ಶಿಕ್ಷೆಯಾಗಬೇಕು ಎಂದು ಹೇಳುವ ಅಗತ್ಯವಿಲ್ಲ. ಆದರೆ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ಅಫ್ತಾಬ್ ಬಗ್ಗೆ ಅಸಹ್ಯ ಮತ್ತು ಕೋಪವನ್ನು ವ್ಯಕ್ತಪಡಿಸಿದರೆ ಸಾಕೇ? ಮಹಿಳೆಯರು ಎದುರಿಸುತ್ತಿರುವ ದೌರ್ಜನ್ಯದ ವಿರುದ್ಧ ನಾವು ಹೋರಾಡಬೇಕಾದರೆ, ನಾವು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ.

ಎ) ಕೌಟುಂಬಿಕ ಹಿಂಸಾಚಾರವನ್ನು ಎದುರಿಸುತ್ತಿರುವ ಮಹಿಳೆಯರಿಗೆ ನಾವು ನೆರವಾಗುವುದಲ್ಲದೆ, ಹೆಚ್ಚು ಉತ್ತಮವಾದ ಸಹಾಯವಾಣಿಗಳು ಮತ್ತು ಆಶ್ರಯಕ್ಕಾಗಿ ಸರಕಾರದ ನೆರವಿಗಾಗಿ ಒತ್ತಾಯಿಸಬೇಕಾಗಿದೆ. ಇದೀಗ, ಹೆಚ್ಚಿನ ಸಹಾಯವಾಣಿಗಳು ಉಪಯೋಗಕ್ಕೇ ಬರುತ್ತಿಲ್ಲ. ಆಶ್ರಯ ವ್ಯವಸ್ಥೆ ಕೂಡ ಸಂಪನ್ಮೂಲಗಳ ಕೊರತೆಯನ್ನೆದುರಿಸುತ್ತಿದೆ. ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರನ್ನು ರಕ್ಷಿಸುವ ಕಾನೂನಿನಡಿ ಸಂರಕ್ಷಣಾ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿಯಿದೆ. ತರಬೇತಿ, ರಿಫ್ರೆಶ್ ತರಬೇತಿ, ಮಾರ್ಗದರ್ಶನ ಮತ್ತು ಸಂಪನ್ಮೂಲಗಳ ಕೊರತೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಆಶ್ರಯ ಕಲ್ಪಿಸುವ ವ್ಯವಸ್ಥೆ ಮಹಿಳೆಯರು ಆತ್ಮವಿಶ್ವಾಸವನ್ನು ಮರಳಿ ಪಡೆಯುವ ಮತ್ತು ಸುರಕ್ಷಿತ ಭಾವವನ್ನು ಅನುಭವಿಸುವ ಹಾಗಿರಬೇಕೇ ಹೊರತು ಜೈಲುಗಳಂತೆ ಇರಕೂಡದು. ಕೌಟುಂಬಿಕ ಹಿಂಸಾಚಾರಕ್ಕೆ ಬಲಿಯಾದವರನ್ನು ಬೆಂಬಲಿಸಲು ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳು ಮತ್ತು ತರಬೇತಿ ಪಡೆದ ಸಿಬ್ಬಂದಿ ಅಲ್ಲಿರುವಂತಾಗಬೇಕು.

ಬಿ) ಆ ಪರಿಸ್ಥಿತಿಯಲ್ಲಿರುವ ಅನೇಕ ಮಹಿಳೆಯರು ಪೊಲೀಸರ ಮಧ್ಯಸ್ಥಿಕೆಯ ನೆರವು ಪಡೆಯುವುದು ಕಡಿಮೆ. ಅಂಥ ಮಹಿಳೆಯರಿಗೆ ಯಾವ ಥರದ ನೆರವು ಬೇಕೆಂದು ಅವರನ್ನೇ ನಿರ್ಣಯಿಸಲು ಬಿಡದೆ ಕಾಳಜಿ ವಹಿಸುವುದು ಆಗಬೇಕು. ಅವರಿಗೆ ಯಾವಾಗ ಮತ್ತು ಎಷ್ಟು ಸಹಾಯ ಬೇಕು ಎಂದು ಸೂಕ್ತವಾಗಿ ನಿರ್ಧರಿಸಬೇಕು. ಅಗತ್ಯವಿರುವ ಪ್ರತೀ ಬಾರಿ ಅವರು ಆಯ್ಕೆ ಮಾಡುವ ರೀತಿಯ ಸಹಾಯನೀಡುವುದು ನಮ್ಮ ಕೆಲಸವಾಗಿದೆ. ಪ್ರತೀ ಬಾರಿ ಅಪಾಯದಲ್ಲಿರುವಾಗಲೂ ಆಕೆಗೆ ತಕ್ಷಣದ ನೆರವು ದೊರಕಿದರೆ ಅವಳ ಜೀವವನ್ನು ಉಳಿಸಬಹುದು.

ಸಿ) ನಾವು ಒಂದು ಸಮಾಜವಾಗಿ ಅಂತರ್ಜಾತಿ, ಅಂತರ್‌ಧರ್ಮೀಯ ಮುಂತಾದ ಎಲ್ಲಾ ರೀತಿಯ ಪ್ರೇಮ ವಿವಾಹಗಳನ್ನು ಬೆಂಬಲಿಸಲು ಹೆಚ್ಚಿನದನ್ನು ಮಾಡಬೇಕಾಗಿದೆ. ಅಂತಹ ಸಂಬಂಧಗಳಲ್ಲಿ ಮಹಿಳೆಯರನ್ನು ಸಮಾಜ ದೂರವಿಡದೆ, ಅವರು ಹಿಂಸೆ ಮತ್ತು ನಿಂದನೆಯನ್ನು ಎದುರಿಸುವ ಸಂದರ್ಭದಲ್ಲಿ ಅವರ ಬೆಂಬಲಕ್ಕಿರುವ ವಾತಾವರಣ ಏರ್ಪಡಬೇಕು.

6) ‘ಲವ್ ಜಿಹಾದ್’ ಎಂದುಬಿಡುವ ಮೂಲಕ ಮಹಿಳೆಗೆ ಇನ್ನಷ್ಟು ಅನ್ಯಾಯವಾಗದಂತೆ ನೋಡಿಕೊಳ್ಳಬೇಕು

ಬಹಳಷ್ಟು ಸಲ ಮುಸ್ಲಿಮ್ ಸಂಗಾತಿಯಿಂದ ಹಿಂದೂ ಮಹಿಳೆಯ ವಿರುದ್ಧ ಹಿಂಸೆಯ ಪ್ರಕರಣಗಳು ನಡೆದಾಗ ಅದನ್ನು ಲವ್ ಜಿಹಾದ್ ಎಂದುಬಿಡುವುದು ನಡೆಯುತ್ತದೆ. ಅದರಿಂದಾಗಿ ಲಿಂಗ ಆಧಾರಿತ ಹಿಂಸಾಚಾರದ ವಿರುದ್ಧ ನಡೆಯುತ್ತಿರುವ ಸ್ತ್ರೀವಾದಿ ಹೋರಾಟಗಳಿಗೆ ದೊಡ್ಡ ಹಾನಿ.

ಎ) ಮೊದಲನೆಯದಾಗಿ, ಹಿಂದೂ ಮಹಿಳೆಯರನ್ನು ನಿಂದಿಸುವ ಅಥವಾ ಕೊಲ್ಲುವ ಮುಸ್ಲಿಮ್ ಪುರುಷರು, ಮಹಿಳೆಯರನ್ನು ನಿಂದಿಸುವ ಅಥವಾ ಕೊಲ್ಲುವ ಇತರ ಪುರುಷರಿಗಿಂತ ಬೇರೆಯೇನಲ್ಲ. ಅವು ಲವ್ ಜಿಹಾದ್ ಆಗಿರುವುದಿಲ್ಲ. 2009ರಿಂದ ಈಚಿನ ವರ್ಷಗಳಲ್ಲಿ ಅನೇಕ ರಾಜ್ಯಗಳ ಪೊಲೀಸ್ ತನಿಖೆಗಳಲ್ಲಿ ಇದು ಸುಳ್ಳು ಎಂದು ಸಾಬೀತಾಗಿದೆ.

ಬಿ) ಹಿಂದೂ ಮಹಿಳೆಯರು ಮುಸ್ಲಿಮ್ ಪುರುಷರ ಕೈಯಲ್ಲಿ ಮಾತ್ರ ಲೈಂಗಿಕ ಅಥವಾ ಕೌಟುಂಬಿಕ ಹಿಂಸೆಯನ್ನು ಎದುರಿಸುತ್ತಾರೆ ಎಂದು ನಂಬಿಸುವ ಈ ರೀತಿಯು, ಹಿಂದೂ ಪುರುಷರ ಕೈಯಲ್ಲಿ ಗೃಹ ಮತ್ತು ಲೈಂಗಿಕ ಹಿಂಸೆಯನ್ನು ಎದುರಿಸುತ್ತಿರುವ ಹಿಂದೂ ಮಹಿಳೆಯರ ಪ್ರಕರಣಗಳನ್ನು ಗಮನಿಸದಂತೆ ಮಾಡುತ್ತದೆ.

ಸಿ) ಸಮಸ್ಯೆಯನ್ನು ಹಿಂದೂ ಮಹಿಳೆಯರ ಮೇಲಿನ ಮುಸ್ಲಿಮ್ ಹಿಂಸೆ ಎಂದು ತಪ್ಪಾಗಿ ರೂಪಿಸುವ ಮೂಲಕ, ಶ್ರದ್ಧಾ ಥರದವರ ಹತ್ಯೆಯು ಸೂಚಿಸುವ ನೈಜ ಸಮಸ್ಯೆಯನ್ನು ಗುರುತಿಸಲು ಮತ್ತು ಪರಿಹರಿಸುವುದಕ್ಕೆ ಅಡ್ಡಿಯಾದಂತಾಗುತ್ತದೆ.

ಕೃಪೆ thewire.in

Similar News