ಕೆದಂಬಾಡಿ ರಾಮಯ್ಯ ಗೌಡರ ಹೋರಾಟ ಶಾಲಾ ಪಠ್ಯದಲ್ಲಿ ಶೀರ್ಘ ಸೇರ್ಪಡೆ: ಸಿಎಂ ಬೊಮ್ಮಾಯಿ

Update: 2022-11-19 13:08 GMT

ಮಂಗಳೂರು, ನ.19: ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕವನ್ನು ಬೆಂಗಳೂರಿನಲ್ಲಿ ಮಾಡುವ ಜೊತೆಗೆ ಅವರ ಹೋರಾಟವನ್ನು ಪಠ್ಯದಲ್ಲಿ ಸೇರಿಸುವ ಕಾರ್ಯವನ್ನು ಸರಕಾರದ ವತಿಯಿಂದ ಶೀಘ್ರವೇ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಬಾವುಟಗುಡ್ಡೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ, ಸಂಘಟನಾ ಚತುರ, ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಕಂಚಿನ‌ ಪ್ರತಿಮೆಯನ್ನು ಅನಾವರಣ ಗೊಳಿಸಿದ ಬಳಿಕ ಕರಾವಳಿ ಉತ್ಸದ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಭಾಗದ ಜನರ ನಿರೀಕ್ಷೆಯಂತೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಅಬ್ಬಕ್ಕ ರಾಣಿ  ಹಾಗೂ ರೈಲ್ವೇ ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣಗುರು ನಾಮಕರಣ ಬಗ್ಗೆಯೂ ಸೂಕ್ತ ನಿರ್ಣಯ ಕೈ ಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನಿದ್ಯ ವಹಿಸಿದ್ದರು.

ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಮಾತನಾಡಿ,  ನಮ್ಮ ಸಮಾಜದಲ್ಲಿ ಇಂತಹ ಮಹಾ ಪುರುಷರನ್ನು ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದವರನ್ನು ಮರೆಯಲು  ಸಾಧ್ಯ ಇಲ್ಲ ಎಂಬುದಕ್ಕೆ ಕೆದಂಬಾಡಿ ರಾಮಯ್ಯ ಅವರ ಸ್ಮಾರಕ ಸಾಕ್ಷಿ. ನಮ್ಮ ನೆಲದಲ್ಲಿ ನಮ್ಮವರೇ ಆಳಬೇಕು ಎಂಬ ನಿಟ್ಟಿನಲ್ಲಿ 200ವರ್ಷಗಳ ಹಿಂದೆ ದೇಶಕ್ಕಾಗಿ ನಡೆಸಿದ ಹೋರಾಟ ನಮಗೆ ಮಾದರಿ ಎಂದು ಅವರು ಹೇಳಿದರು.

ಶಾಸಕ ಯು. ಟಿ. ಖಾದರ್ ಮತನಾಡಿ, ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಕಂಚಿನ‌ ಪ್ರತಿಮೆ ಅನಾವರಣ ಕರ್ನಾಟಕಕ್ಕೆ ಹೆಮ್ಮೆಯ ವಿಚಾರ ಎಂದರು.
ಕೆದಂಬಾಡಿ ರಾಮಯ್ಯ ಗೌಡರು ಸೇರಿದಂತೆ ಜಿಲ್ಲೆಯ ಇತಿಹಾಸ ಪುರುಷರ ಹೋರಾಟದ ಬಗ್ಗೆ ಶಾಲಾ ಪಠ್ಯದಲ್ಲಿ ಅಳವಡಿಸಬೇಕು ಎಂದು ಆಗ್ರಹಿಸಿದ ಯು. ಟಿ. ಖಾದರ್, ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಬ್ಬಕ್ಕ ರಾಣಿ ಹಾಗೂ ಮಂಗಳೂರು ರೈಲ್ವೇ ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣಗುರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.

ಕೇಂದ್ರದ ಮಾಜಿ ಸಚಿವ, ಲೋಕಸಭಾ ಸದಸ್ಯರಾದ ಡಿ.ವಿ. ಸದಾನಂದ ಗೌಡ ಮಾತನಾಡಿ, 7ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಇತಿಹಾಸದ ಪುಟದಲ್ಲಿ ಸಾವಿರಾರು ಸಂಖ್ಯೆಯ  ಸ್ವಾತಂತ್ರ್ಯ ಹೋರಾಟಗಾರರ ಹೆಸರಿಲ್ಲ. 75ನೆ ವರ್ಷದ ಸ್ವಾತಂತ್ರ್ಯದ ಸಂದರ್ಭ ಅವರನ್ನು ಹುಡುಕುವ ಪ್ರಯತ್ನ ಆಗಬೇಕು ಅಂದಿದ್ದ ರು. ಅದಕ್ಕೆ ಪೂರಕವಾಗಿ ಸ್ವಾತಂತ್ರ್ಯ ಹೋರಾಟದ ಪ್ರಥಮ ಕಹಳೆ ಓದಿದ  ಕೆದಂಬಾಡಿ ರಾಮಯ್ಯರ ಪ್ರತಿಮೆ ಅನಾವರಣಗೊಂಡಿದೆ  ಎಂದರು.

ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಪುನರ್ ರಚಿಸುವ ಕೆಲಸ ಆಗಬೇಕು. ಅದಕ್ಕಾಗಿ ಕೆದಂಬಾಡಿ ರಾಮಯ್ಯ ಗೌಡರ ಹೋರಾಟದ ಕುರಿತಂತೆ ಅವರ ಪ್ರತಿಮೆ ಅನಾವರಣದ ಕುರಿತಾದ ಕಾರ್ಯದ ಕ್ಯಾಸೆಟ್ ಮಾಡಿಕೊಂಡು ಪ್ರಧಾನಿ ಕಾರ್ಯಾಲಯಕ್ಕೆ ಸಲ್ಲಿಸುವ ಕೆಲಸ ಆಗಬೇಕು ಎಂದು ಸದಾನಂದ ಗೌಡ ಹೇಳಿದರು.

ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಮಾತನಾಡಿ ಸುಳ್ಯದ ಬಂಗ್ಲೆಗುಡ್ಡೆ ಯಲ್ಲಿರುವ ಬ್ರಿಟಿಷರ ಖಜಾನೆಗೆ ಕೆದಂಬಾಡಿ ರಾಮಯ್ಯ ನೇತ್ರತ್ವದಲ್ಲಿ ಲಗ್ಗೆ ಹಾಕಲಾಗಿತ್ತು.  ಖಜಾನೆಯನ್ನು ಸ್ಮಾರಕವಾಗಿ ಉಳಿಸುವ ಕಾರ್ಯ ನಡೆಯುತ್ತಿದೆ ಎಂದರು.

ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ, 1837ರಲ್ಲಿ ಜಿಲ್ಲೆಯಲ್ಲಿ ಬ್ರಿಟಿಷರ ವಿರುದ್ದ ದಂಗೆ ಎದ್ದು 13ದಿನಗಳ ಕಾಲ ತುಳುನಾಡಿನ ದ್ವಜ ಹಾಕಿದ್ದ ರಾಮಯ್ಯ ಗೌಡ ರ ಸ್ಮಾರಕ ಮೂಲಕ ಗೌರವ ಸಲ್ಲಿಸಲಾಗಿದೆ. ಕಳೆದ 75 ವರ್ಷಗಳಲ್ಲಿ ಆಡಳಿತ ನಡೆಸಿದ ಸರಕಾರಗಳು ಮಾಡಿರದ್ದನ್ನು ನಮ್ಮ ಸರಕಾರ ಮಾಡಿದೆ. ಇತಿಹಾಸವನ್ನು ಸೃಷ್ಟಿ ಮಾಡುವ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಇತಿಹಾಸ ಪುರುಷರ ಹೆಸರನ್ನು ಪಠ್ಯದಲ್ಲಿ ಸೇರಿಸುವ ಕಾರ್ಯ ನಡೆಯಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಧರ್ಮಪಾಲನಾಥ ಸ್ವಾಮೀಜಿ,  ಶಾಸಕರಾದ ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಸಂಜೀವ ಮಟ್ಟಂದೂರು,  ಹರೀಶ್ ಪೂಂಜಾ,  ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಹರೀಶ್ ಕುಮಾರ್,  ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ವಿಪಕ್ಷ ನಾಯಕ ನವೀನ್ ಡಿಸೋಜಾ,  ಹರಿಕೃಷ್ಣ ಬಂಟ್ವಾಳ, ಎ.ವಿ. ತೀರ್ಥರಾಮ, ಬೋಪಯ್ಯ,  ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಹಾಗೂ ಇತರೆ ಗಣ್ಯರು ಉಪ್ಥಿತರಿದ್ದರು.

ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸಮಿತಿ ಅಧ್ಯಕ್ಷ ಕಿರಣ್ ಗುಡ್ಲೆಗುತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಸ್ವಾಗತಿಸಿದರು. ಕೆದಂಬಾಡಿ ರಾಮಯ್ಯ ಗೌಡರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

Similar News