PSU ಖಾಸಗೀಕರಣದ ನಿರ್ಧಾರವನ್ನು ಮರುಪರಿಶೀಲಿಸಿ: ಕೇಂದ್ರಕ್ಕೆ ಆರೆಸ್ಸೆಸ್ ಸಂಯೋಜಿತ ಭಾರತೀಯ ಮಝ್ದೂರ್‌ ಸಂಘ ಒತ್ತಾಯ

Update: 2022-11-19 17:08 GMT

ಹೊಸದಿಲ್ಲಿ: ಆರ್‌ಎಸ್‌ಎಸ್ ಬೆಂಬಲಿತ ಟ್ರೇಡ್ ಯೂನಿಯನ್ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್)ದ ಸಾವಿರಾರು ಕಾರ್ಮಿಕರು ಗುರುವಾರ ಹೊಸದಿಲ್ಲಿಯಲ್ಲಿ ಕೇಂದ್ರದ ಸಾರ್ವಜನಿಕ ವಲಯದ ಉದ್ಯಮಗಳ (ಪಿಎಸ್‌ಯು) ಖಾಸಗೀಕರಣ ಮತ್ತು ಕಾರ್ಪೊರೇಟೀಕರಣದ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಬಿಎಂಎಸ್ ಮುಖಂಡರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ಶಸ್ತ್ರಾಸ್ತ್ರ ಕಾರ್ಖಾನೆಗಳನ್ನು ಕಾರ್ಪೊರೇಟ್ ಮಾಡುವ ನಿರ್ಧಾರವನ್ನು ಪರಿಶೀಲಿಸುವಂತೆ ಒತ್ತಾಯಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಬಿಎಂಎಸ್, ಕೇಂದ್ರವು ತರ್ಕಬದ್ಧ ಆಧಾರದ ಮೇಲೆ ಪಿಎಸ್‌ಯುಗಳ ಖಾಸಗೀಕರಣದ ನಿರ್ಧಾರವನ್ನು ಮರುಪರಿಶೀಲಿಸಬೇಕು ಮತ್ತು ಸರಿಯಾದ ಒಳನೋಟ ಮತ್ತು ನೈಜ ವಿಚಾರವನ್ನು ಪಡೆಯಲು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಬೇಕು ಎಂದು ಹೇಳಿದೆ.

ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ನಾಯಕರು, ಪಿಎಸ್‌ಯುಗಳನ್ನು ಕೋರ್ ಮತ್ತು ನಾನ್-ಕೋರ್ ವಲಯಗಳಾಗಿ ವಿಭಜಿಸುವುದು, ವೃತ್ತಿಪರೀಕರಣದ ಹೆಸರಿನಲ್ಲಿ ರಕ್ಷಣಾ ಮತ್ತು ರೈಲ್ವೆ ಸಂಸ್ಥೆಗಳ ಕಾರ್ಪೊರೇಟೀಕರಣ ಮತ್ತು ವಿವಿಧ ರೂಪಗಳಲ್ಲಿ ಉದ್ಯೋಗಗಳ ಗುತ್ತಿಗೆಯಂತಹ ನೀತಿ ಕ್ರಮಗಳು ತಪ್ಪಾದ ನೀತಿಗಳಾಗಿವೆ ಮತ್ತು ದೀರ್ಘಾವಧಿಯಲ್ಲಿ ನಿರೀಕ್ಷಿತ ಫಲಿತಾಂಶಗಳನ್ನು ನೀಡುವುದಿಲ್ಲ ಎಂದು ಹೇಳಿದರು. ಯುರೇನಿಯಂ ಗಣಿಗಳು, ಕಲ್ಲಿದ್ದಲು ಗಣಿಗಳು, ರಕ್ಷಣಾ ಸಂಸ್ಥೆಗಳಾದ ಡಿಆರ್‌ಡಿಒ, ಆರ್ಡಿನೆನ್ಸ್ ಕಾರ್ಖಾನೆಗಳು ಮತ್ತು ವಿವಿಧ ರೈಲ್ವೆ ವಲಯಗಳ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪಿಎಸ್ಯುಗಳ ಖಾಸಗೀಕರಣ ಮತ್ತು ಕಾರ್ಪೊರೇಟೀಕರಣದಿಂದ ಕೇಂದ್ರವು ಸಂಗ್ರಹಿಸಲು ಉದ್ದೇಶಿಸಿರುವ 1,75,000 ಕೋ.ರೂ.ಹಾಸ್ಯಾಸ್ಪದ ಮೊತ್ತವಾಗಿದೆ,ಏಕೆಂದರೆ ಪಿಎಸ್ಯುಗಳು ಸರಕಾರಕ್ಕೆ ಸಲ್ಲಿಸುತ್ತಿರುವ ಲಾಭಾಂಶ ಇದಕ್ಕಿಂತಲೂ ಅಧಿಕವಾಗಿದೆ ಎಂದು ಬಿಎಂಎಸ್ ಬೆಟ್ಟು ಮಾಡಿದೆ.

Similar News