ಸರಕಾರಿ ಶಾಲೆಗಳಿಗೆ ಬಣ್ಣಕ್ಕಿಂತ ಮೂಲಸೌಕರ್ಯ ಅಗತ್ಯ: ಜಯಪ್ರಕಾಶ್ ಶೆಟ್ಟಿ

Update: 2022-11-20 12:06 GMT

ಕುಂದಾಪುರ: ತಳ ಸಮುದಾಯ ಅಕ್ಷರದತ್ತ ತೆರೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಸರಕಾರಿ ಶಾಲೆಗಳು ಮುಚ್ಚುತ್ತಿದ್ದು ಉದ್ಯೋಗ ಕ್ಷೇತ್ರ ಬತ್ತಿ ಹೋಗುವ ವಾಸ್ತವ ವಿಚಾರ ಮರೆಯಬಾರದು. ಶಾಲೆಗಳ ಗೋಡೆಗಳಿಗೆ ಚಿತ್ರ, ಬಣ್ಣ ಬಳಿಯುವ ಮೊದಲಿಗೆ ಸರಕಾರಿ ಶಾಲೆಗಳಿಗೆ ಮೂಲಸೌಕರ್ಯ ನೀಡ ಬೇಕಾಗಿದೆ ಎಂದು ತೆಂಕನಿಡಿ ಯೂರು ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಜಯಪ್ರಕಾಶ್ ಶೆಟ್ಟಿ ಹೇಳಿದ್ದಾರೆ.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕೊರಗರ ಸಂಘಟನೆ ವತಿಯಿಂದ ರವಿವಾರ ಕುಂಭಾಶಿ ಮಕ್ಕಳ ಮನೆಯಲ್ಲಿ ನಡೆದ 2022ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಬು ಪಾಂಗಳ ಅವರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿಷ್ಕಲ್ಮಷ ಮನಸ್ಸಿನ ಕೊರಗ ಸಮುದಾಯವನ್ನು ಹಿಂದಿನಿಂದಲೂ ಯಾರೂ ಗುರುತಿಸದಿದ್ದರೂ ಅವರು ಕೊರಗಿಲ್ಲ. ಸಂಗೀತ ಪರಂಪರೆ ಕಾಪಾಡಿಕೊಂಡು ಬಂದ ಕೊರಗರ ಕೊಳಲಿನ ದನಿಯಲ್ಲಿ ಅವರ ನೋವು, ದುಃಖ, ಸಂಕಟ ಸಂಗೀತದ ಮೂಲಕವಾಗಿ ಹೊರಬರುತ್ತಿದೆ. ಶಿಕ್ಷಣದಿಂದ ಮುನ್ನೆಲೆಗೆ ಬರುತ್ತಿ ರುವ ಕಾಲಘಟ್ಟದಲ್ಲಿ ಈ ಸಮುದಾಯವನ್ನು ಜತನದಿಂದ ಮುನ್ನೆಡಸಬೇಕಾದ ಜವಬ್ದಾರಿ ಯುವಪೀಳಿಗೆಗಿದೆ ಎಂದರು.

ಈ ತಲೆಮಾರಿನ ಮಾದರಿ ಪುರುಷರ ಅನುಕರಣೆಯೂ ಅಗತ್ಯವಾಗಿದೆ. ಅಲ್ಲದೆ ಆಸ್ತಿಕ, ಅನಾಸ್ತಿಕತೆ ನಡುವೆ ದೈವ, ಭಾಷೆ, ಆಹಾರದ ಬಗ್ಗೆ ತಿಳುವಳಿಕೆ ಮುಖ್ಯ. ಯಾರೋ ಹೇಳುವ ಆಚರಣೆ ಸರಿಯಲ್ಲ ಎಂದು ಅವರು ತಿಳಿಸಿದರು.

ಸಾಹಿತ್ಯ, ಸಂಗೀತ, ಕಲೆ ವಿಚಾರದಲ್ಲಿ ಹಿಂದಿನಿಂದಲೂ ಬಲಿಷ್ಟ ಸಮಾಜ ಪ್ರಶಸ್ತಿಗಳನ್ನು ಪಡೆಯುತ್ತಿರುವುದು ಸಾಮಾನ್ಯ ಸಂಗತಿ. ಆದರೆ ದಕ್ಕದಿರುವ ಸಮುದಾಯಕ್ಕೆ ಪ್ರಶಸ್ತಿಗಳು ದಕ್ಕಿದಾಗ ಸಂಭ್ರಮ ಇರುತ್ತದೆ. ತುಳಿತಕ್ಕೊಳಗಾದ ಕೊರಗ ಸಮುದಾಯ ಇತ್ತೀಚೆಗೆ ಕೆಲವು ವರ್ಷಗಳಿಂದ  ತನ್ನದೇ ಪ್ರತಿಭೆಗಳ ಮೂಲಕ ಪ್ರಶಸ್ತಿಗಳಿಗೆ ಭಾಜನರಾಗುತ್ತಿದ್ದು ಈ ವೇಳೆ ಸಂಭ್ರಮದ ಜೊತೆಗೆ ವಿವೇಕ ಹಾಗೂ ಎಚ್ಚರವೂ ಅಗತ್ಯ ಎಂದು ಅವರು ಅಭಿಪ್ರಾಯ ಪಟ್ಟರು.

ದಕ್ಷಿಣ ಕನ್ನಡ ಜಿಲ್ಲಾ ಕೊರಗರ ಸಂಘದ ಅಧ್ಯಕ್ಷ ಸುಂದರ ಬೆಳ್ವಾಯಿ, ಉಡುಪಿ ಜಿಲ್ಲಾ ಕೊರಗರ ಸಂಘದ ಅಧ್ಯಕ್ಷೆ ಗೌರಿ ಕೆಂಜೂರು, ಕುಂಭಾಸಿ ಮಕ್ಕಳ ಮನೆಯ ಮುಖ್ಯಸ್ಥ ಗಣೇಶ್ ಕುಂದಾಪುರ ಉಪಸ್ಥಿತರಿದ್ದರು. ಈ ಸಂದರ್ಭ ದಲ್ಲಿ ಬಾಬು ಪಾಂಗಳ ಅವರನ್ನು ಕೊರಗ ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಬಹುಭಾಷಿಕಾ ಕೊರಗರ ಯುವ ಕಲಾ ವೇದಿಕೆಯ ಅಧ್ಯಕ್ಷ ಗಣೇಶ್ ಬಾರ್ಕೂರು ವಹಿಸಿದ್ದರು. ಬೈಂದೂರು ಮಹತ್ಮಾ ಜ್ಯೋತಿ ಬಾಪುಲೆ ಕೊರಗರ ಯುವ ಕಲಾ ವೇದಿಕೆ ಅಧ್ಯಕ್ಷ ಲಕ್ಷ್ಮಣ್ ಬೈಂದೂರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಶ್ವಿನಿ ಬಾರ್ಕೂರು ಸ್ವಾಗತಿಸಿದರು. ರಮೇಶ ಮಂಚಕಲ್ಲು ಆಶಯ ಗೀತೆ ಹಾಡಿದರು. ರಮೇಶ್ ಗುಂಡಾವು ಕಾರ್ಯಕ್ರಮ ನಿರೂಪಿಸಿದರು. ಶೇಖರ್ ಮರವಂತೆ ವಂದಿಸಿದರು. ಇದಕ್ಕೂ ಮೊದಲು ಬಾಬು ಪಾಂಗಾಳ ಅವರನ್ನು ಆನೆಗುಡ್ಡೆ ಸ್ವಾಗತ ಗೋಪುರದಿಂದ ಡೋಲು, ಕೊಳಲು ವಾದನದೊಂದಿಗೆ ಮೆರವಣಿಗೆ ಮೂಲಕ ಅವರನ್ನು ಕರೆತರಲಾಯಿತು.

"ಪ್ರಶಸ್ತಿಗಾಗಿ ಯಾವುದೇ ಕೆಲಸ ಮಾಡಬಾರದು. ಶತಮಾನಗಳಿಂದ ಶೋಷಣೆ ಗೊಳಗಾಗುತ್ತ ಬಂದ ನನ್ನ ಸಮುದಾಯದ ತಳಸ್ತರದ ಜನರಿಗೆ ಈ ಪ್ರಶಸ್ತಿ ಸಲ್ಲುತ್ತದೆ. ನನಗೆ ಪ್ರಶಸ್ತಿ ಬಂದಾಗ ಇಡೀ ಸಮುದಾಯ ಖುಷಿಪಟ್ಟಿದ್ದು ಬೆನ್ನುತಟ್ಟಿ ಪ್ರಶಂಸಿಸಿದ್ದಾರೆ. ಸಾಧನೆ ಮೂಲಕವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ದೊರಕಿಸುವ ಪ್ರಯತ್ನವಾಗಬೇಕು".

-ಬಾಬು ಪಾಂಗಳ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

Similar News