ಲೂಟಿ ಹೊಡೆಯುವುದು, ಸುಳ್ಳು ಹೇಳುವುದೇ ಬಿಜೆಪಿ ಸಾಧನೆ: ಸಿದ್ದರಾಮಯ್ಯ

Update: 2022-11-21 15:51 GMT

ಬೆಂಗಳೂರು, ನ.21: ರಾಜ್ಯದಲ್ಲಿ ಬಿಜೆಪಿ ಸರಕಾರ ಅನೈತಿಕ ದಾರಿಯಲ್ಲಿ ಅಧಿಕಾರಕ್ಕೆ ಬಂದಿದೆ. ಆಪರೇಶನ್ ಕಮಲ ಮೂಲಕ ಶಾಸಕರಿಗೆ ಕೋಟ್ಯಂತರ ರೂಪಾಯಿ ಕೊಟ್ಟು ಪಕ್ಷಕ್ಕೆ ಕರೆದುಕೊಂಡು ಅಧಿಕಾರ ಹಿಡಿದರು. ಮೂರು ವರ್ಷಗಳಿಂದ ಅಧಿಕಾರದಲ್ಲಿ ಇರುವ ಬಿಜೆಪಿ ಸರಕಾರದ್ದು ಲೂಟಿ ಹೊಡೆಯುವುದು, ಸುಳ್ಳು ಹೇಳುವುದೇ ಸಾಧನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಹಿರೆಕೇರೂರು ಬಿಜೆಪಿ ಮಾಜಿ ಶಾಸಕ ಯು.ಬಿ.ಬಣಕಾರ್, ತುಮಕೂರು ಗ್ರಾಮಾಂತರ ಜೆಡಿಎಸ್ ಮಾಜಿ ಶಾಸಕ ಎಚ್.ನಿಂಗಪ್ಪ, ಬಿಜಾಪುರದ ಮುಖಂಡ ಮಲ್ಲಿಕಾರ್ಜುನ ರೋಣಿ ಹಾಗೂ ಕೂಡ್ಲಿಗಿಯ ಜೆಡಿಎಸ್ ಮುಖಂಡ ಡಾ.ಎನ್.ಟಿ.ಶ್ರೀನಿವಾಸ್‍ರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.

ಈ ಸರಕಾರ ‘40 ಪರ್ಸೆಂಟ್ ಸರಕಾರ’ ಎಂದು ಹೆಸರು ಪಡೆದಿದೆ. ಹಣ ನೀಡದೆ ಈ ಸರಕಾರದಲ್ಲಿ ಯಾವುದೇ ಕೆಲಸ, ನೇಮಕಾತಿ, ವರ್ಗಾವಣೆ ಆಗುವುದಿಲ್ಲ. ಮುಖ್ಯಮಂತ್ರಿ ಸೇರಿದಂತೆ ಎಲ್ಲ ಮಂತ್ರಿಗಳು ಲೂಟಿಗೆ ಇಳಿದಿದ್ದು, ರಾಜ್ಯ ಹಾಳು ಮಾಡುತ್ತಿದ್ದಾರೆ. ಮತ್ತೊಂದೆಡೆ ದ್ವೇಷದ ರಾಜಕಾರಣ ಮಾಡಿ ಸಮಾಜದಲ್ಲಿ ಸಾಮರಸ್ಯ ನಾಶ ಮಾಡುತ್ತಿದ್ದಾರೆ. ಜನ ಭಯದಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯ ನಾಶವಾಗಲಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಯು.ಬಿ.ಬಣಕಾರ್ ಬಿಜೆಪಿ ತೊರೆದು ಬೇಷರತ್ತಾಗಿ ಪಕ್ಷ ಸೇರುತ್ತಿದ್ದಾರೆ. ಡಾ.ಶ್ರೀನಿವಾಸ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಮಲ್ಲಿಕಾರ್ಜುನ ರೊಣಿ ನಮ್ಮ ಪಕ್ಷದಲ್ಲೇ ಇದ್ದವರು. ಅವರು ಕಳೆದ ಬಾರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದರು. ಈಗ ಮತ್ತೆ ಕಾಂಗ್ರೆಸ್ ಸೇರುತ್ತಿದ್ದಾರೆ. ಇವರೆಲ್ಲರನ್ನೂ ಹಾರ್ದಿಕವಾಗಿ ಸ್ವಾಗತ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು. 

‘ಬಣಕಾರ್ ಅವರು ಹಿರೇಕೆರೂರು ಕ್ಷೇತ್ರದಲ್ಲಿ ಪಕ್ಷ ಗೆಲ್ಲಿಸುವುದು ಗುರಿ ಎಂದರು. ಅದೇ ರೀತಿ ನಾವೆಲ್ಲರೂ ಬಿಜೆಪಿ ಸೋಲಿಸಲು ಹೋರಾಡಬೇಕು. ಇಂತಹ ಕೆಟ್ಟ, ಕೋಮುವಾದಿ ಸರಕಾರವನ್ನು ನಾವು ನೋಡಿರಲಿಲ್ಲ. ರಾಜ್ಯ, ಜನರು, ಸಂವಿಧಾನ, ಪ್ರಜಾಪ್ರಭುತ್ವ ಉಳಿಸಬೇಕಾದರೆ ಬಿಜೆಪಿ ಸೋಲಿಸಬೇಕು. ಹೀಗಾಗಿ ಹಿರೇಕೆರೂರು ಕ್ಷೇತ್ರದಲ್ಲಿ ಬಣಕಾರ್ ಆಗಮನದಿಂದ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬಂದಿದ್ದು, ಪಕ್ಷ ಗೆಲ್ಲಿಸಲು ಶ್ರಮಿಸಿ’ ಎಂದು ಸಿದ್ದರಾಮಯ್ಯ ಕರೆ ನೀಡಿದರು. 

‘ಬಿ.ಸಿ.ಪಾಟೀಲ್ ಆಪರೇಷನ್ ಕಮಲಕ್ಕೆ ಒಳಗಾದ ವ್ಯಕ್ತಿ. ದುಡ್ಡಿನ ಆಸೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಆತ ಜನಪ್ರತಿನಿಧಿ ಆಗಲು ಯೋಗ್ಯರಲ್ಲ. ಶ್ರೀನಿವಾಸ್ ಅವರದ್ದು ರಾಜಕೀಯ ಮನೆತನ. ಕೂಡ್ಲಿಗಿಯಲ್ಲಿ ಅವರ ತಂದೆ ನಾಯಕರಾಗಿದ್ದರು. ಅಲ್ಲಿಯೂ ಈ ಬಾರಿ ಕಾಂಗ್ರೆಸ್ ಗೆಲ್ಲಬೇಕು. ಕೋಮುವಾದಿ ಬಿಜೆಪಿ ಮಣಿಸಲು ಕಾಯಾ ವಾಚಾ ಮನಸಾ ಶ್ರಮಿಸಬೇಕು’ ಎಂದು ಅವರು ಹೇಳಿದರು. 

Similar News