ಮುಸ್ಲಿಮ್ ಮತದಾರರು ಹೆಚ್ಚಿರುವ ಕ್ಷೇತ್ರಗಳಲ್ಲೇ ಬೀಡುಬಿಟ್ಟಿದ್ದ ‘ಚಿಲುಮೆ’..!

Update: 2022-11-21 17:10 GMT

ಬೆಂಗಳೂರು, ನ. 21: ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆಯ ಒಂದೊಂದೇ ಕೃತ್ಯ ಬಹಿರಂಗವಾಗುತ್ತಿರುವ ನಡುವೆ ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಮುಸ್ಲಿಮ್ ಸಮುದಾಯ ಹೆಚ್ಚಿರುವ ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡಿದ್ದರು ಎನ್ನುವ ಮಾಹಿತಿ ಗೊತ್ತಾಗಿದೆ.

ಬಿಬಿಎಂಪಿ ನಡೆಸಿರುವ ತನಿಖೆಯಲ್ಲಿ ಚಿಲುಮೆ ಸಂಸ್ಥೆಯ ಅಕ್ರಮ ಬಯಲಾಗಿದ್ದು, ಮುಸ್ಲಿಮ್ ಮತದಾರರು ಹೆಚ್ಚಿರುವ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿಯೇ ಚಿಲುಮೆ ಸಂಸ್ಥೆಯ 14 ಸಿಬ್ಬಂದಿ ಕಾರ್ಯ ನಿರ್ವಹಿಸಿರುವುದು ಹಲವು ಅನುಮಾನ ಹುಟ್ಟುಹಾಕಿದೆ.

ಇಲ್ಲಿನ ಶಿವಾಜಿನಗರದ ಮತದಾರರ ನೋಂದಾಣಾಧಿಕಾರಿ ಆಗಿದ್ದ ಕಂದಾಯ ಅಧಿಕಾರಿ ಸುಹೈಲ್ ಅಹ್ಮದ್ ಬಳಿ ಚಿಲುಮೆ ಸಂಸ್ಥೆಯ ಪರವಾಗಿ ಬಂದಿದ್ದ ಆರೋಪಿ ಚಂದ್ರಶೇಖರ್, 14 ಗುರುತಿನ ಚೀಟಿಗಳನ್ನು ಪಡೆದುಕೊಂಡಿದ್ದ. ಅಷ್ಟೇ ಅಲ್ಲದೆ, ಮತಗಟ್ಟೆ ಮಟ್ಟದಲ್ಲಿ ಕಾರ್ಯನಿರ್ವಹಿಸಿದ್ದ ಚಿಲುಮೆ ಸಿಬ್ಬಂದಿ, ಕ್ಷುಲ್ಲಕ ಕಾರಣಗಳನ್ನು ನೀಡಿ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿರುವ ದೂರು ಕೇಳಿಬಂದಿದೆ.

ಅದೇ ರೀತಿ, ಮತ್ತೊಂದು ವಿಧಾನಸಭಾ ಕ್ಷೇತ್ರದ ಚಿಕ್ಕಪೇಟೆಯಲ್ಲೂ ಮುಸ್ಲಿಮ್ ಸಮುದಾಯದ ಮತದಾರರು ಹೆಚ್ಚಿರುವುದನ್ನು ಗುರಿಯಾಗಿಸಿಕೊಂಡಿದ್ದ ಸಂಸ್ಥೆಯ ಇಬ್ಬರು ಸಿಬ್ಬಂದಿ, ಆರೇಳು ದಿನಗಳ ಕಾಲ ಇಲ್ಲಿ ಕಾರ್ಯ ನಿರ್ವಹಿಸಿದ್ದರು ಎನ್ನುವ ಮಾಹಿತಿ ಗೊತ್ತಾಗಿದೆ.
ಈ ಸಂದರ್ಭದಲ್ಲಿ ಹಲವು ಮತದಾರರ ಹೆಸರನ್ನೆ ರದ್ದು ಮಾಡಿರಬಹುದು ಎಂದು ಸಂಶಯ ವ್ಯಕ್ತವಾಗಿದೆ.

ಹಾಗೇ, ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲೂ ಅಕ್ರಮವಾಗಿ ಗುರುತಿನ ಚೀಟಿ ಪಡೆದಿದ್ದ ಚಿಲುಮೆ ಸಿಬ್ಬಂದಿಗಳು, ಕ್ಷೇತ್ರದ ವಿವಿಧೆಡೆ ಸಂಚಾರ ಮಾಡಿ, ಮತದಾರರ ಹೆಸರನ್ನು ಪರಿಷ್ಕರಣೆ ಮಾಡಿದ್ದರು. ಈ ವೇಳೆಯೂ ಅರ್ಹ ಮತದಾರರನ್ನು ಕೈಬಿಟ್ಟಿರುವ ಮಾಹಿತಿ ಗೊತ್ತಾಗಿದೆ.

ಆರೋಪಿಗಳು ಕಸ್ಟಡಿಗೆ..!: ‘ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಬಂಧಿತರಾದ ಮೂವರು ಆರೋಪಿಗಳನ್ನು ಡಿ.2ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ನಗರದ 4ನೆ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ. ಹಲಸೂರು ಗೇಟ್ ಠಾಣೆ ಪೊಲೀಸರು ಚಿಲುಮೆ ಸಂಸ್ಥೆಯ ಮುಖ್ಯಸ್ಥ, ಪ್ರಮುಖ ಆರೋಪಿ ರವಿಕುಮಾರ್, ಸಹೋದರ ಕೆಂಪೇಗೌಡ, ಪ್ರಾಜೆಕ್ಟ್ ಎಕ್ಸಿಕ್ಯೂಟಿವ್ ಪ್ರಜ್ವಲ್‍ನನ್ನು ಸೋಮವಾರ ಕೋರ್ಟ್‍ಗೆ ಹಾಜರುಪಡಿಸಿದ್ದರು. ನ್ಯಾಯಪೀಠವು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿ ತೀಪು ಹೊರಡಿಸಿದೆ’  

Similar News