ಕ್ಲಬ್‌ ನೊಂದಿಗಿನ ವಿವಾದದಿಂದ ಪೋರ್ಚುಗಲ್ ತಂಡದ ಮೇಲೆ ಪರಿಣಾಮವಿಲ್ಲ : ರೊನಾಲ್ಡೊ

Update: 2022-11-21 19:03 GMT

ದೋಹಾ, ನ. 21: ನನ್ನ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್(Club Manchester United) ನೊಂದಿಗೆ ನಾನು ಹೊಂದಿರುವ ವಿವಾದವು ವಿಶ್ವಕಪ್ ನಲ್ಲಿ ಪೋರ್ಚುಗಲ್ (Portugal)ತಂಡದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮಗಳನ್ನು ಬೀರುವುದಿಲ್ಲ ಎಂದು ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo)ಸೋಮವಾರ ಹೇಳಿದ್ದಾರೆ.

ಪ್ರಸಕ್ತ ಫುಟ್ಬಾಲ್ ಋತುವಿನಲ್ಲಿ, ಮ್ಯಾಂಚೆಸ್ಟರ್ ಯುನೈಟೆಡ್ನಲ್ಲಿ ಅವರಿಗೆ ಮಹತ್ವದ್ದಲ್ಲದ ಪಾತ್ರವನ್ನು ವಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ, ಕಳೆದ ವಾರ ರೊನಾಲ್ಡೊ ಟಿವಿ ಸಂದರ್ಶನವೊಂದನ್ನು ನೀಡಿ ತನ್ನ ಕ್ಲಬ್ ಮತ್ತು ಅದರ ಕೋಚ್ ಎರಿಕ್ ಟೆನ್ ಹಾಗ್ ವಿರುದ್ಧ ಹರಿಹಾಯ್ದಿದ್ದರು.

‘‘ಇತ್ತೀಚಿನ ಘಟನೆ, ಆ ಸಂದರ್ಶನ ಮತ್ತು ಆಟಗಾರರ ಜೊತೆ ಸಂಭವಿಸುವ ಇತರ ಘಟನೆಗಳು ಕೆಲವು ಸಲ ಆಟಗಾರನ ಮೇಲೆ ಪರಿಣಾಮ ಬೀರಬಹುದು. ಆದರೆ, ಅದು ತಂಡದ ಮೇಲೆ ಪರಿಣಾಮ ಬೀರುವುದಿಲ್ಲ’’ ಎಂದು ಪೋರ್ಚುಗಲ್ ತಂಡದ ಶಿಬಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೊನಾಲ್ಡೊ ಹೇಳಿದರು.


ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಕಳೆದ ತಿಂಗಳು ನಡೆದ ಟೋಟನ್ಹ್ಯಾಮ್ (Tottenham) ವಿರುದ್ಧದ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ನ ಬದಲಿ ಆಟಗಾರನಾಗಿ ಆಡಲು ರೊನಾಲ್ಡೊ ನಿರಾಕರಿಸಿದ್ದರು. ಹಾಗಾಗಿ, ನಂತರ ನಡೆದ ಚೆಲ್ಸಿ ವಿರುದ್ಧದ ಪಂದ್ಯಕ್ಕೆ ಅವರನ್ನು ಅಮಾನತುಗೊಳಿಸಲಾಗಿತ್ತು. ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಚೆಲ್ಸಿ ನಡುವಿನ ಆ ಪಂದ್ಯವು 1-1ರಲ್ಲಿ ಡ್ರಾಗೊಂಡಿತ್ತು.

Similar News