ಕಬ್ಬು ಎಫ್‍ಆರ್ ಪಿ ದರ ಏರಿಕೆಗೆ ಆಗ್ರಹಿಸಿ ಧರಣಿ: ರೈತ ನಾಯಕರು ವಶಕ್ಕೆ

Update: 2022-11-22 14:38 GMT

ಬೆಂಗಳೂರು, ನ.22: ಮಾರುಕಟ್ಟೆ ದರಕ್ಕೆ ಅನ್ವಯವಾಗುವಂತೆ ಕಬ್ಬಿಗೆನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರ (ಎಫ್‍ಆರ್‍ಪಿ) ಏರಿಕೆ ಮಾಡಬೇಕೆಂದು ಆಗ್ರಹಿಸಿ ಧರಣಿ ನಡೆಸಿದ ರೈತ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

ಮಂಗಳವಾರ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ನೇತೃತ್ವದಲ್ಲಿ ಇಲ್ಲಿನ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಜಮಾಯಿಸಿದ ರೈತರು, ಕಬ್ಬಿನ ಎಫ್‍ಆರ್‍ಪಿ ಹೆಚ್ಚುವರಿ ದರ ಏರಿಕೆ ಮಾಡಬೇಕೆಂದು ರಾಜ್ಯ ಸರಕಾರಕ್ಕೆ ಆಗ್ರಹಿಸಿದರು.

ಧರಣಿ ಭಾಗವಾಗಿ ರೈತರಿಂದ ಉಗುಳುವ ಚಳುವಳಿ ಮೂಲಕ ಇಲ್ಲಿನ ಆರ್‍ಟಿನಗರದಲ್ಲಿರುವ ಮುಖ್ಯಮಂತ್ರಿ ಮನೆ ಬಳಿ ತೆರಳಲು ಮುಂದಾದ ರೈತರನ್ನು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.

ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ರೈತ ನಾಯಕ ಕುರುಬೂರು ಶಾಂತಕುಮಾರ್, ಕರ್ನಾಟಕ ರಾಜ್ಯಕ್ಕಿಂತ ಸಕ್ಕರೆ ಇಳುವರಿ ಕಡಿಮೆ ಇರುವ ಪಂಜಾಬ್ ರಾಜ್ಯದಲ್ಲಿ 3800 ರೂ., ಹರಿಯಾಣದಲ್ಲಿ 3750 ರೂ., ಉತ್ತರ ಪ್ರದೇಶದಲ್ಲಿ 3500 ರೂ., ಗುಜರಾತ್‍ನಲ್ಲಿ 4400 ರೂ., ಸೇರಿದಂತೆ ಹಲವಡೆ ರಾಜ್ಯ ಸರಕಾರಗಳೇ ಎಫ್‍ಆರ್‍ಪಿದರ ನಿಗದಿ ಮಾಡಿದ್ದಾರೆ ಎಂದರು.

ರಾಜ್ಯ ಸರಕಾರ ಹೆಚ್ಚುವರಿ ದರ ನಿಗದಿ ಮಾಡುವ ತನಕ ಚಳುವಳಿ ಕೈ ಬಿಡುವುದಿಲ್ಲ.ಅಲ್ಲದೆ, ಅತಿವೃಷ್ಟಿ ಮಳೆಹಾನಿ ಕಾರಣ ಭತ್ತದ ಬೆಳೆ ಸ್ವಲ್ಪಮಟ್ಟಿಗೆ ಇಳುವರಿ ಕಡಿಮೆಯಾಗುತ್ತಿದೆ. ಬೆಲೆ ಕಡಿಮೆಯಾಗುವ ಕಾರಣ ಕೂಡಲೇ ಭತ್ತ ಖರೀದಿ ಕೇಂದ್ರಗಳನ್ನು ತಕ್ಷಣ ತೆರೆಯಬೇಕು ಹೆಚ್ಚುವರಿ ಪ್ರೋತ್ಸಾಹ ಧನ ಕ್ವಿಂಟಾಲ್‍ಗೆ 500 ರೂ. ನೀಡಬೇಕು ಎಂದು ಒತ್ತಾಯಿಸಿದರು.

ಬ್ಯಾಂಕುಗಳು ರೈತರಿಗೆ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಪರಿಗಣಿಸಿ ಸಾಲ ನೀಡುವ ಪದ್ಧತಿ ಕೈಬಿಡಬೇಕು ಎಂದ ಅವರು, ಐದು ತಿಂಗಳ ಹಿಂದೆ ರಿಸರ್ವ್ ಬ್ಯಾಂಕ್ ಮುಂದೆ ಚಳುವಳಿ ನಡೆಸಿದಾಗ,ಮುಖ್ಯಸ್ಥರು ಸಭೆ ಕರೆಯುವ ಭರವಸೆ ನೀಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಮ್ಮ ನ್ಯಾಯಯುತ ಬೇಡಿಕೆಗಳನ್ನು ರಾಜ್ಯ ಸರಕಾರ ಈಡೇರಿಸುವ ನಿರ್ಧಾರ ಕೈಗೊಳ್ಳುವವರೆಗೆ ನಿರಂತರ ಆಹೋ ರಾತ್ರಿ ಹೋರಾಟ ಒಂದೊಂದು ಜಿಲ್ಲೆಯಲ್ಲೂ ಒಂದು ದಿನ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರೈತ ಹೋರಾಟಗಾರ ನಾರಾಯಣರೆಡ್ಡಿ ಸೇರಿದಂತೆ ಪ್ರಮುಖರಿದ್ದರು.

Similar News