ದಲಿತ ಸಮಾಜ ಒಗ್ಗಟ್ಟಾಗಲು, ದಲಿತ ಸಮಾವೇಶಕ್ಕೆ ನಿರ್ಧಾರ: ಸಂಸದ ಕೆ.ಎಚ್. ಮುನಿಯಪ್ಪ

Update: 2022-11-22 16:26 GMT

ಬೆಂಗಳೂರು, ನ.22: 'ದಲಿತ ಸಮುದಾಯಗಳು ವಿವಿಧ ರಾಜಕೀಯ ಕಾರಣಗಳಿಂದ ಗುಂಪುಗಳಾಗಿ ವಿಂಗಡನೆಗೊಂಡಿದ್ದು, ದಲಿತ ಸಮಾಜ ಒಗ್ಗಟ್ಟಾಗಿ ಸೇರಬೇಕಿದೆ' ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

ಮಂಗಳವಾರ ಇಲ್ಲಿನ ಸಂಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಲತಃ ದಲಿತ ಸಮುದಾಯ ಕಾಂಗ್ರೆಸ್ ಪರವಾಗಿದ್ದು, ರಾಜಕೀಯ ಕಾರಣಗಳಿಂದ ಗುಂಪುಗಳಾಗಿ ವಿಂಗಡಣೆ ಆಗಿರುವುದು ಸರಿಯಲ್ಲ. ಹಾಗಾಗಿ ನಾನೂ, ಪರಮೇಶ್ವರ್ ಒಟ್ಟಾಗಿ ಸೇರಿ ದೊಡ್ಡ ಮಟ್ಟದಲ್ಲಿ ದಲಿತ ಸಮಾವೇಶ ಆಯೋಜನೆಗೆ ನಿರ್ಧಾರ ಮಾಡಿದ್ದೇವೆ. ಇದರಿಂದ ಕಾಂಗ್ರೆಸ್‍ಗೆ ಶಕ್ತಿ ಬರುತ್ತದೆ ಎಂದರು.

ಬಹಳಷ್ಟು ಯೋಜನೆಗಳು ಸಿದ್ದರಾಮಯ್ಯ ಕಾಲದಲ್ಲಿ ಆಗಿದ್ದು, 28 ರಿಂದ 30 ಸಾವಿರ ಕೋಟಿ ರೂ.ಗಳಷ್ಟು ದೊಡ್ಡ ಮೊತ್ತದ ಅನುದಾನ ಬಜೆಟ್‍ನಲ್ಲಿ ನೀಡಲಾಗಿತ್ತು. ಈಗ ಬಜೆಟ್ ಗಾತ್ರದ ಆಧಾರದ ಮೇಲೆ 42 ಸಾವಿರ ಕೋಟಿ ಎಸ್‍ಸಿ ಎಸ್‍ಟಿ ಸಮುದಾಯಕ್ಕೆ ಮೀಸಲು ಇಡಬೇಕಿತ್ತು. ಆದರೆ ಬಿಜೆಪಿ ಸರಕಾರ ಅನುದಾನವನ್ನು ಬೇರೆಕಡೆ ಬಳಕೆ ಮಾಡುತ್ತಿದೆ ಎಂದು ಆರೋಪಿಸಿದರು.

ಸದನದಲ್ಲಿ ದಲಿತರ ಹಣ ದುರ್ಬಳಕೆ ಕುರಿತು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಹಾಗಾಗಿ ದಲಿತರ ಸಂಘಟನೆ ಮಾಡಬೇಕಿದೆ. ಮತ್ತೆ ಎಲ್ಲ ಕಾರ್ಯಕ್ರಮ ಜಾರಿ ಮಾಡಬೇಕಿದೆ. ದಲಿತರ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರಕಾರ ಬರಬೇಕು. ಆ ನಿಟ್ಟಿನಲ್ಲಿ ಸಮುದಾಯ ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಅವರು ಭರವಸೆ ನೀಡಿದರು.

Similar News