ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು

Update: 2022-11-23 11:42 GMT

ಬೆಂಗಳೂರು, ನ.23: ''ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ (Siddaramaiah ) ಚಾಣಾಕ್ಷತನದಿಂದ ನಗರಾಭಿವೃದ್ಧಿ ಇಲಾಖೆಯ ಕಾನೂನು ಕೋಶದ ಮುಖ್ಯಸ್ಥರ ಮೂಲಕ 400ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಸರಕಾರಿ ಸ್ವತ್ತು ಮೂರನೇ ವ್ಯಕ್ತಿಯ ಪಾಲಾಗುವಂತೆ ಮಾಡಿದ್ದಾರೆ. ಹಾಗಾಗಿ ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ'' ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ತಿಳಿಸಿದ್ದಾರೆ. 

ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಬಡಾವಣೆ ನಿರ್ಮಾಣಕ್ಕೆಂದು ಭೂ ಸ್ವಾಧೀನಪಡಿಸಿಕೊಂಡು, ಬಡಾವಣೆ ನಿರ್ಮಿಸಿದ ನಂತರದ ಬೆಳವಣಿಗೆಗಳಲ್ಲಿ ನ್ಯಾಯಾಲಯವು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪರ ತೀರ್ಪನ್ನು ನೀಡಿದೆ. ಆದರೂ ಕಾನೂನು ಬಾಹಿರವಾಗಿ ನಿರ್ಣಯ ತೆಗೆದುಕೊಂಡು, ಸ್ವತ್ತಿಗೆ ಸಂಬಂಧಪಡದ ಮೂರನೆ ವ್ಯಕ್ತಿಯ ವಶಕ್ಕೆ ಜಮೀನನ್ನು ನೀಡಲಾಗಿದೆ. ಹಾಗಾಗಿ ಹಗರಣದಲ್ಲಿ ಶಾಮೀಲಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು'' ಎಂದರು.  

''ಹೊಸ ಬಡಾವಣೆ ನಿರ್ಮಾಣಕ್ಕಾಗಿ ಭೂಪಸಂದ್ರ ಗ್ರಾಮದ ಸರ್ವೆ ನಂ.20ರಲ್ಲಿನ 3 ಎಕರೆ 34 ಗುಂಟೆ ಮತ್ತು ಸರ್ವೆ ನಂ.21 ರಲ್ಲಿ 2 ಎಕರೆ 32 ಗುಂಟೆ ಸೇರಿದಂತೆ ಒಟ್ಟು 6 ಎಕರೆ 26 ಗುಂಟೆ ವಿಸ್ತೀರ್ಣದ ಜಮೀನಿಗೆ ಭೂಸ್ವಾಧೀನ ಪ್ರಕ್ರಿಯೆ ಮುಗಿಸಿದ್ದ ಬಿಡಿಎ ಸಂಬಂಧಪಟ್ಟ ಭೂ ಮಾಲಕರಿಗೆ ಸಲ್ಲಬೇಕಾದ ಪರಿಹಾರದ ಮೊತ್ತವನ್ನು ನಗರ ಸಿವಿಲ್ ನ್ಯಾಯಾಲಯದಲ್ಲಿ ಠೇವಣಿ ಇಟ್ಟಿರುತ್ತದೆ'' ಎಂದು ಅವರು ಮಾಹಿತಿ ನೀಡಿದರು. 

Similar News