ಪರಿಸರ ಸ್ನೇಹಿ ವಾಹನಗಳು ರಸ್ತೆಗಿಳಿಯಲಿವೆ: ಸಚಿವ ಡಾ.ಅಶ್ವತ್ಥ ನಾರಾಯಣ

Update: 2022-11-23 11:45 GMT

ಬೆಂಗಳೂರು, ನ. 21: ‘ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಸಂಚಾರ ವ್ಯವಸ್ಥೆ ಬದಲಾಗಲಿದ್ದು, ಪರಿಸರ ಸ್ನೇಹಿ ವಾಹನಗಳು ರಸ್ತೆಗಿಳಿಯಲಿವೆ. ಈ ಪರಿವರ್ತನೆಯಲ್ಲಿ ಕಾಂಟಿನೆಂಟಲ್ ಕಂಪೆನಿಯು ನಿರ್ಣಾಯಕ ಪಾತ್ರ ವಹಿಸಲಿದೆ’ ಎಂದು ಐಟಿ-ಬಿಟಿ ಸಚಿವ ಡಾ.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಬುಧವಾರ ವಾಹನ ತಯಾರಿಕಾ ಕ್ಷೇತ್ರದಲ್ಲಿ ಅಗ್ರಗಣ್ಯವಾಗಿರುವ ಕಾಂಟಿನೆಂಟಲ್ ಕಂಪೆನಿಯು 1ಸಾವಿರ ಕೋಟಿ ರೂ.ವೆಚ್ಚದಲ್ಲಿ ಎಲೆಕ್ಟ್ರಾನಿಕ್ ಸಿಟಿ ಸಮೀಪ ನಿರ್ಮಿಸಿರುವ ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಟಿನೆಂಟಲ್ ಕಂಪೆನಿಯ ಈ ಸಂಶೋಧನಾ ಕೇಂದ್ರದಲ್ಲಿ 6,500 ಸಂಶೋಧಕರು ಮತ್ತು ತಂತ್ರಜ್ಞಾನ ಪರಿಣತರಿಗೆ ಅವಕಾಶವಿದೆ. ನಗರದಲ್ಲಿ ಈಗಾಗಲೇ 450 ಕಂಪೆನಿಗಳ ಆರ್ ಅಂಡ್ ಡಿ ಕೇಂದ್ರಗಳಿದ್ದು, ನಮ್ಮಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯ ಪರಿಸರವಿದೆ ಎಂದು ನುಡಿದರು.

‘ಪ್ರವರ್ಧಮಾನಕ್ಕೆ ಬರುತ್ತಿರುವ ಎಲ್ಲ ತಂತ್ರಜ್ಞಾನ ಆಧಾರಿತ ಉದ್ದಿಮೆಗಳೆಗೆ ಸಂಬಂಧ ಪಟ್ಟಂತೆಯೂ ರಾಜ್ಯದಲ್ಲಿ ಪಾರದರ್ಶಕ ಮತ್ತು ಸಮಕಾಲೀನ ನೀತಿಗಳನ್ನು ಹೊರತರಲಾಗಿದೆ. ಇಂತಹ ಉಪಕ್ರಮಗಳು ಬೇರೆ ರಾಜ್ಯಗಳಲ್ಲಿ ಇಲ್ಲ. ಕರ್ನಾಟಕವು ಹೂಡಿಕೆ ಸೇರಿದಂತೆ ಆರ್ ಅಂಡ್ ಡಿ ವಿಚಾರದಲ್ಲೂ ಮುಂಚೂಣಿಯಲ್ಲಿದೆ’ ಎಂದು ಅವರು ವಿವರಿಸಿದರು.

‘ಕಾಂಟಿನೆಂಟಲ್ ಇಂಡಿಯಾ ಕಂಪೆನಿಯು 2009ರಿಂದಲೂ ಬೆಂಗಳೂರಿನಲ್ಲಿ ಸಂಶೋಧನಾ ಚಟುವಟಿಕೆಗಳನ್ನು ನಡೆಸುತ್ತಿದೆ. ಈಗ ಅಭಿವೃದ್ಧಿ ಪಡಿಸಿರುವ ಕೇಂದ್ರವು ವಾಹನ ತಯಾರಿಕಾ ಕಂಪನಿಗಳಿಗೆ ಮಹತ್ತ್ವದ ತಾಂತ್ರಿಕ ನೆರವನ್ನು ನೀಡಲಿದೆ. ಹಾಗೆಯೇ ರಾಜ್ಯದಲ್ಲಿ ಇರುವ ಗುಣಮಟ್ಟದ ಶಿಕ್ಷಣ ಮತ್ತು ಎಂಜಿನಿಯರುಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಅವರು ಹೇಳಿದರು. 

ಕಾರ್ಯಕ್ರಮದಲ್ಲಿ ಜರ್ಮನಿಯ ಕಾನ್ಸುಲ್ ಜನರಲ್ ಅಕಿಂ ಬರ್ಕಾರ್ಟ್, ಕಾಂಟಿನೆಂಟಲ್ ಕಂಪೆನಿಯ ಭಾರತ ಘಟಕದ ಅಧ್ಯಕ್ಷ ಹಾಗೂ ಸಿಇಒ ಪ್ರಶಾಂತ್ ದೊರೆಸ್ವಾಮಿ, ತಾಂತ್ರಿಕ ಕೇಂದ್ರದ ಮುಖ್ಯಸ್ಥೆ ಲತಾ ಚೆಂಬ್ರಕಳಂ ಉಪಸ್ಥಿತರಿದ್ದರು.

‘ಸಂಪೂರ್ಣ ಸೆನ್ಸರ್ ಆಧಾರದ ಮೇಲೆ ಕೆಲಸ ಮಾಡುವ ಕಾರಿನಲ್ಲಿ ಒಂದು ಸುತ್ತು ಹಾಕಿದ ಸಚಿವ ಅಶ್ವತ್ಥ ನಾರಾಯಣ, ಮುದ ಅನುಭವಿಸಿದರು. ಸ್ಟಿಯರಿಂಗ್ ಅನ್ನು ಮುಟ್ಟದೆಯೆ, ಎದುರುಗಡೆ ವಾಹನ ಬಂದರೆ ತಾನಾಗಿಯೆ ನಿಲ್ಲುವ, ಸಂಚಾರ ದಟ್ಟಣೆಗೆ ತಕ್ಕಂತೆ ತನ್ನ ವೇಗವನ್ನು ತಾನೇ ನಿರ್ಧರಿಸಿಕೊಳ್ಳುವ ಈ ಕಾರ್‍ನಲ್ಲಿ ಅಳವಡಿಸಿರುವ ತಂತ್ರಜ್ಞಾನ ಕಂಡು ರೋಮಾಂಚಿತರಾದರು. ಕಾಂಟಿನೆಂಟಲ್ ಕಂಪೆನಿ ಅಧ್ಯಕ್ಷ ಹಾಗೂ ಸಿಇಒ ಪ್ರಶಾಂತ್ ದೊರೆಸ್ವಾಮಿ ವಿಶೇಷ ಕಾರನ್ನು ಚಾಲನೆ ಮಾಡಿದರು. ‘ಇಂತಹ ಕಾರುಗಳು ಆಧುನಿಕ ಜೀವನ ಶೈಲಿಯಲ್ಲಿ ವರದಾನ. ಇದರಿಂದ ಮಾಲಿನ್ಯ ಸಮಸ್ಯೆ ಇಲ್ಲ. ಜತೆಗೆ ಮನುಷ್ಯನ ಸಮಯ ಇದರಿಂದ ಉಳಿಯುತ್ತದೆ’ ಅಶ್ವತ್ಥ ನಾರಾಯಣ ತಿಳಿಸಿದರು.

Similar News