ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕ್ ಗಳಿಗೆ ಕೋಟ್ಯಂತರ ರೂ. ವಂಚನೆ: ಮೂವರು ಆರೋಪಿಗಳ ಬಂಧನ

Update: 2022-11-23 14:12 GMT

ಬೆಂಗಳೂರು, ನ.23: ನಕಲಿ ಚಿನ್ನಾಭರಣಗಳನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅಡಮಾನ ಮಾಡಿ ಕೋಟ್ಯಂತರ ರೂ. ಸಾಲವಾಗಿ ಪಡೆದುಕೊಂಡು, ಮೋಸ ಮಾಡಿರುವ ಮೂವರು ಆರೋಪಿಗಳನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಅರುಣ್ ರಾಜು ಕಾನಡೆ(30), ಸತ್ಯಾನಂದ (28) ಹಾಗೂ ದತ್ತಾತ್ರೇಯ ಬಾಕಳೆ(28) ಎಂದು ಗುರುತಿಸಲಾಗಿದ್ದು, ತಲೆಮರೆಸಿಕೊಂಡಿರುವ ಮಹಿಳೆಯೊಬ್ಬರ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ಅವರು ತಿಳಿಸಿದ್ದಾರೆ.

ಆರೋಪಿಗಳು 15 ಕೆ.ಜಿ ಗಳಷ್ಟು ನಕಲಿ ಚಿನ್ನಾಭರಣಗಳನ್ನು ಅಡಮಾನ ಮಾಡಿ ಕೋಟ್ಯಂತರ ರೂಪಾಯಿಗಳನ್ನು ಸಾಲವಾಗಿ ಪಡೆದುಕೊಂಡು ವಾಪಸ್ ಕಟ್ಟದೇ ಬ್ಯಾಂಕುಗಳಿಗೆ ಮೋಸ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದರು.

ಸೆಪ್ಟಂಬರ್ 23ರ ಮಧ್ಯಾಹ್ನ 12:30ಕ್ಕೆ ವಿಜಯನಗರದ ಬ್ಯಾಂಕ್ ಆಫ್ ಬರೋಡಾ ಶಾಖೆಗೆ ಆರೋಪಿ ಅರುಣ್ ರಾಜು ಕಾನಡೆ ಮತ್ತೊಬ್ಬ ಆರೋಪಿ ಸತ್ಯಾನಂದ ತಲೆಮರೆಸಿಕೊಂಡಿರುವ ಜಯಲಕ್ಷ್ಮೀ ಸೇರಿ ಮೂವರು 235.6 ಗ್ರಾಂ ನಕಲಿ ಚಿನ್ನಾಭರಣಗಳನ್ನು ತೆಗೆದುಕೊಂಡು ಬಂದು ಆರೋಪಿತೆ ಜಯಲಕ್ಷ್ಮೀ ರವರ ಹೆಸರಿನಲ್ಲಿ ಅಡಮಾನ ಮಾಡಿ 7 ಲಕ್ಷ 15 ಸಾವಿರ ರೂ.ಗಳನ್ನು ಸಾಲವಾಗಿ ಪಡೆದುಕೊಂಡು ಮೋಸ ಮಾಡಿದ್ದಾರೆ.

ನಂತರ ಬ್ಯಾಂಕ್ ಮ್ಯಾನೇಜರ್ ರವರಿಗೆ ಅನುಮಾನ ಬಂದು ಸದರಿ ನಕಲಿ ಚಿನ್ನಾಭರಣಗಳನ್ನು ಪರೀಕ್ಷೆಗೆ ಒಳಪಡಿಸಿ ನಕಲಿ ಚಿನ್ನಾಭರಣಗಳೆಂದು ಖಚಿತಪಡಿಸಿಕೊಂಡು ಬ್ಯಾಂಕ್ ಮ್ಯಾನೇಜರ್ ಮಹೇಶ್ ಸಿ ಹೂಗಾರ್ ರವರು ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿಗಳನ್ನು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಹೇಳಿದರು.  

Similar News