ಮತದಾರರ ಮಾಹಿತಿ ಕದ್ದ ಪ್ರಕರಣ; ಭಾರತ ರಾಜಕಾರಣ ಕಂಡ ವಿದ್ರೋಹಿ ಹಗರಣ: ಪರಿಷತ್ ಸದಸ್ಯ ಟಿ.ಎ.ಶರವಣ

Update: 2022-11-23 17:12 GMT

ಬೆಂಗಳೂರು, ನ.23: ವೋಟರ್ ಐಡಿ ಮಾಹಿತಿ ಕಳ್ಳತನದ ಕರ್ಮಕಾಂಡವು ಭಾರತ ರಾಜಕಾರಣ ಕಂಡ ವಿದ್ರೋಹಿ ಹಗರಣವಾಗಿದ್ದು, ಇದು ಪ್ರಜಾಸತ್ತೆಯನ್ನೇ ಬುಡಮೇಲು ಮಾಡುವ ನೀಚ ಕೆಲಸ ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಕಿಡಿಕಾರಿದ್ದಾರೆ.

ವೋಟರ್ ಐಡಿ ಮಾಹಿತಿ ಕಳ್ಳತನ ಪ್ರಕರಣದ ತನಿಖೆಗೆ ಆಗ್ರಹಿಸಿ ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಈ ಹಗರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. 2017ರಿಂದಲೂ ಚಿಲುಮೆ ಸಂಸ್ಥೆಗೆ ಮತದಾನದ ಜಾಗೃತಿ ಹೆಸರಲ್ಲಿ ಮತಪಟ್ಟಿ ಪರಿಷ್ಕರಣೆ ಹೆಸರಲ್ಲಿ ಅವಕಾಶ ಕೊಡಲಾಗಿದೆ. ಬಿಜೆಪಿ ಸರಕಾರ ಬಂದ ನಂತರ ಭೂತ್ ಲೆವೆಲ್ ಆಫೀಸರ್ಸ್ ಎನ್ನುವ ಸರಕಾರಿ ಅಧಿಕಾರಿಗಳ ಸೀಲು ಸಹಿ ಇರುವ ಗುರುತಿನ ಚೀಟಿ ಯಾಕೆ ಕೊಟ್ಟರು? ಎಂದು ಪ್ರಶ್ನಿಸಿದರು.

ಈಗ ಸುಮಾರು 6.7 ಲಕ್ಷ ಮತದಾರರ ಹೆಸರನ್ನು ವಿಶೇಷವಾಗಿ ಪ್ರತಿಪಕ್ಷ ಬೆಂಬಲಿಗರ ಮತದಾರರನ್ನು, ಅದರಲ್ಲೂ ಅಲ್ಪಸಂಖ್ಯಾತ ಮತದಾರರನ್ನು ಮತಪಟ್ಟಿಯಿಂದ ಕೈ ಬಿಡಲಾಗಿದೆ ಎನ್ನುವ ಮಾಹಿತಿ ಬಂದಿದೆ. ಆದರೂ, ಸುಮಾರು 27 ಲಕ್ಷ ಮತಗಳು ಮಾಯವಾಗಿವೆ ಎನ್ನುವುದು ನಮಗೆ ಬಂದಿರುವ ಮಾಹಿತಿ ಆಗಿದೆ. ಹೀಗಾಗಿ, ಪ್ರಜಾಪ್ರಭುತ್ವದಲ್ಲಿ ಮತದಾರ ಪ್ರಭುವಿನ ಹಕ್ಕು ಕಸಿಯುವ ಈ ಹಗರಣವನ್ನು ಹೈ ಕೋರ್ಟ್‍ನ ಹಾಲಿ ನ್ಯಾಯಮೂರ್ತಿ ಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದರು.

ಇದು ಒಂದು ಭಾಗವಾದರೆ ಬರೀ ಬಿಬಿಎಂಪಿ ಅಧಿಕಾರಿಗಳು ಅಷ್ಟೇ  ಅಲ್ಲ ಕಂದಾಯ ಇಲಾಖೆಯ ಆಧಿಕಾರಿಗಳು, ಬಿಬಿಎಂಪಿಯ ಉನ್ನತ ಮಟ್ಟದ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಅವರ ವಿರುದ್ಧ ಕ್ರಮ ಯಾಕಿಲ್ಲ. ಸಣ್ಣ ಪುಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಪ್ರಕರಣ ಮುಚ್ಚಿಹಾಕುವ ಸಂಚು ನಡೆದಿದೆ ಎಂದು ಆರೋಪಿಸಿದರು.

ಚಿಲುಮೆ ಸಂಸ್ಥೆ ವಾಣಿಜ್ಯ ಉದ್ದೇಶಕ್ಕೆ ಮಾರಿಕೊಂಡಿದೆ: ಇಲ್ಲಿ ಮತಪಟ್ಟಿ ಪರಿಷ್ಕರಣೆ ಹೆಸರಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಈ ಚಿಲುಮೆ ಸಂಸ್ಥೆ ವಾಣಿಜ್ಯ ಉದ್ದೇಶಕ್ಕೆ ಮಾರಿಕೊಂಡಿದೆ. ಇದೂ ಮತದಾರರ ಗೌಪ್ಯತ ಹಕ್ಕಿಗೆ ಧಕ್ಕೆ ತಂದಿದೆ. ವ್ಯಕ್ತಗತ ಸ್ವಾತಂತ್ರ ಕಾಯಿದೆಯ ಉಲ್ಲಂಘನೆ ಆಗಿದೆ. ಈ ಬಗ್ಗೆ ತನಿಖೆ ನಡೆಯಲಿ ಎಂದು ಶರವಣ ಒತ್ತಾಯಿಸಿದರು.

ಚಿಲುಮೆ ಸಂಸ್ಥೆ ತಾನು ಸಂಗ್ರಹಿಸಿದ ಮಾಹಿತಿಯನ್ನು ಚುನಾವಣೆ ಆಯೋಗ, ಬಿಬಿಎಂಪಿ ಗೆ ನೀಡುವ ಬದಲಾಗಿ ತನ್ನದೇ ಆದ ಡಿಜಿಟಲ್ ಆಪ್ ಗೆ ಲೋಡ್ ಮಾಡಿದ್ದೇಕೆ? ಬಿಜೆಪಿಯ ಕೆಲವು ಪ್ರಭಾವಿ ರಾಜಕಾರಣಿಗಳಿಗೆ ಚುನಾವಣೆ ವೇಳೆ ಮತದಾರರ ವ್ಯಕ್ತಿಗತ ಮಾಹಿತಿ ಮಾರಲು ಈ ಸಂಸ್ಥೆ ವಹಿವಾಟು ನಡೆಸಿದೆ. ಇದರಲ್ಲಿ ಈ ಸರಕಾರದ ಪ್ರಭಾವಿ ಮಂತ್ರಿಗಳು ಶಾಮೀಲಾಗಿದ್ದಾರೆ. ಎದುರಾಳಿ ಪಕ್ಷಗಳ ಮತಗಳನ್ನು ಮತಪಟ್ಟಿ ಯಿಂದ ತೆಗೆದು ಹಾಕಲು ಸಂಸ್ಥೆಯನ್ನ ಬಳಸಲಾಗಿದ್ದು, ಬಿಜೆಪಿಯ ಚುನಾವಣೆ ಅಕ್ರಮ ಆಗಿದೇ ಎಂದು ರಾಜ್ಯ ಸರಕಾರದ ವಿರುದ್ಧ ಟಿ.ಎ.ಶರವಣ ವಾಗ್ದಾಳಿ ನಡೆಸಿದರು.

Similar News