ಫಿಫಾ ವಿಶ್ವಕಪ್: ಕೆನಡಾ ವಿರುದ್ಧ ಬೆಲ್ಜಿಯಂಗೆ ಗೆಲುವಿನ ಮುನ್ನುಡಿ

Update: 2022-11-24 02:07 GMT

ಹೊಸದಿಲ್ಲಿ: ವಿಶ್ವದ ನಂ.2 ತಂಡವಾದ ಬೆಲ್ಜಿಯಂ (World No. 2 Belgium) ಬುಧವಾರ ಕತರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‍ನ (FIFA World Cup 2022 in Qatar) ತಮ್ಮ ಮೊದಲ ಪಂದ್ಯದಲ್ಲಿ ಕೆನಡಾ ವಿರುದ್ಧ 1-0 ಗೋಲುಗಳ ಗೆಲುವು ಸಾಧಿಸಿದೆ.

ಅಹ್ಮದ್ ಬಿನ್ ಅಲಿ ಸ್ಟೇಡಿಯಂ(Ahmad Bin Ali Stadium) ನಲ್ಲಿ ನಡೆದ ಎಫ್ ಗುಂಪಿನ ಪಂದ್ಯದಲ್ಲಿ ಪೆನಾಲ್ಟಿ ತಪ್ಪುವ ಮೂಲಕ ಪಂದ್ಯ ರೋಚಕವಾಗಿ ಅಂತ್ಯಗೊಂಡಿತು.

ಮಿಚಿ ಬತ್ಸುವಾಯಿ ಪಂದ್ಯದ ಮೊದಲಾರ್ಧದಲ್ಲಿ ಏಕೈಕ ಗೋಲು ಹೊಡೆದರು. ಈ ಮೂಲಕ ಬೆಲ್ಜಿಯಂ ತಂಡದ ವಿಶ್ವಕಪ್ ಅಭಿಯಾನಕ್ಕೆ ಗೆಲುವಿನ ಮುನ್ನುಡಿ ಬರೆದರು. ಆದರೆ ಇದಕ್ಕೂ ಮುನ್ನ 11ನೇ ನಿಮಿಷದಲ್ಲಿ ಎದುರಾಳಿ ಗೋಲ್‍ಕೀಪರ್ ಥಿಬೂಟ್ ಕರ್ಟೊಯಿಸ್ ಅದ್ಭುತವಾಗಿ ಪೆನಾಲ್ಟಿ ಹೊಡೆತವನ್ನು ತಡೆದಿದ್ದರು.

36 ವರ್ಷಗಳಲ್ಲಿ ಮೊದಲ ಬಾರಿಗೆ ವಿಶ್ವಕಪ್ ಆಡುತ್ತಿರುವ ಉತ್ಸಾಹಭರಿತ ಕೆನಡಾ ತಂಡ, ಪಂದ್ಯದ ಆರಂಭದಲ್ಲಿ ಉತ್ತಮ ಮುನ್ನಡೆ ಸಾಧಿಸಿತ್ತು. ಆದರೆ ಈ ಹಂತದಲ್ಲಿ ಅಲ್ಫೋನ್ಸೋ ಡೇವಿಸ್ ಸ್ಪಾಟ್ ಕಿಕ್ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲರಾದರು.

ಗಾಯಾಳು ರೊಮೆಲು ಲುಕಾಕು ಅವರ ಅನುಪಸ್ಥಿತಿಯಲ್ಲಿ ಬೆಲ್ಜಿಯಂ ದಾಳಿಯ ಮುಂದಾಳುತ್ವ ವಹಿಸಿಕೊಂಡಿದ್ದ ಬತ್ಸುವಾಯಿ ಅರ್ಧವಿರಾಮಕ್ಕಿಂತ ಮುನ್ನ ಗೆಲುವಿನ ಗೋಲು ಹೊಡೆದರು. ಗುಂಪಿನ ಇನ್ನೊಂದು ಪಂದ್ಯವನ್ನು ಮೊರಾಕ್ಕೊ ಹಾಗೂ ಕ್ರೊವೇಷಿಯಾ 0-0 ಡ್ರಾ ಮಾಡಿಕೊಂಡಿದ್ದರಿಂದ ಬೆಲ್ಜಿಯಂ ಗುಂಪಿನಲ್ಲಿ 3 ಅಂಕಗಳೊಂದಿಗೆ ಅಗ್ರಸ್ಥಾನಲ್ಲಿದೆ.

ಇದಕ್ಕೂ ಮುನ್ನ 1986ರಲ್ಲಿ ವಿಶ್ವಕಪ್ ಆಡಿದ್ದ ಕೆನಡಾ ತಂಡ ಎಲ್ಲ ಮೂರು ಪಂದ್ಯಗಳನ್ನು ಸೋತದ್ದು ಮಾತ್ರವಲ್ಲದೇ, ಯಾವುದೇ ಗೋಲು ಗಳಿಸಲು ವಿಫಲವಾಗಿತ್ತು.

Similar News