ಉದ್ಯೋಗ, ಚಿನ್ನಾಭರಣ ಕೊಡಿಸುವುದಾಗಿ ಆಮಿಷವೊಡ್ಡಿ ವಂಚನೆ ಆರೋಪ: ದಂಪತಿ ಬಂಧನ

Update: 2022-11-24 12:14 GMT

ಬೆಂಗಳೂರು, ನ. 24: ಉದ್ಯೋಗ, ಚಿನ್ನಾಭರಣ ಕೊಡಿಸುವುದಾಗಿ ಆಮಿಷವೊಡ್ಡಿ ವಂಚನೆ ಮಾಡುತ್ತಿದ್ದ ಆರೋಪದಡಿ ದಂಪತಿಯನ್ನು ಇಲ್ಲಿನ ಕೊಡಿಗೇಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ದರ್ಬಿನ್ ದಾಸ್ ಹಾಗೂ ಧನುಷ್ಯ ಬಂಧಿತ ದಂಪತಿಯಾಗಿದ್ದು, ಬಂಧಿತರಿಂದ 34 ಲಕ್ಷದ 50 ಸಾವಿರ ನಗದು, 106.965 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.

ಇಂದಿರಾನಗರದಲ್ಲಿ ನೈಲ್‍ಬಾಕ್ಸ್ ಅಕಾಡೆಮಿ ನಡೆಸುತ್ತಿರುವ ಸ್ನೇಹಾ ಭಗವತ್ ಎಂಬುವರಿಗೆ ಪರಿಚಯ ಮಾಡಿಕೊಂಡಿದ್ದ ಆರೋಪಿ ಧನುಷ್ಯ, ತನ್ನ ಪತಿ ದಾರ್ಬಿನ್ ದಾಸ್, ಕೆಂಪೇಗೌಡ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಜಪ್ತಿ ಮಾಡಿರುವ ಚಿನ್ನಾಭರಣಗಳು ಅವರಿಗೆ ಕಡಿಮೆ ಬೆಲೆಗೆ ಸಿಗುವುದಾಗಿ, ನಿಮಗೂ ಸಹ ಚಿನ್ನಾಭರಣಗಳನ್ನು ಕಡಿಮೆ ಬೆಲೆಗೆ ಕೊಡಿಸುತ್ತೇನೆ ಎಂದು ನಂಬಿಸಿರುವುದಾಗಿ ಆರೋಪಿಸಲಾಗಿದೆ.  

ಆನಂತರ, 68 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಹಣ ಪಡೆದು ಕೊಂಡು ನಂತರ ಯಾವುದೇ ಚಿನ್ನಾಭರಣಗಳನ್ನು ಕೊಡಿಸದೆ ಮೊಬೈಲ್ ಸಂಪರ್ಕ ಕಡಿತಗೊಳಿಸಿ ತಲೆಮರೆಸಿಕೊಂಡಿದ್ದರು. ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿತ್ತು. ಇದರನ್ವಯ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ಹೇಳಿದ್ದಾರೆ.

Similar News