ಮೀಸಲಾತಿ ಹೆಚ್ಚಳಕ್ಕಾಗಿ ಹೋರಾಟ: ನ.27ಕ್ಕೆ ಒಕ್ಕಲಿಗ ಸಮುದಾಯದ ಮುಖಂಡರ ಸಭೆ

Update: 2022-11-24 12:35 GMT

ಬೆಂಗಳೂರು, ನ. 24: ‘ಮೀಸಲಾತಿ ಪ್ರಮಾಣ ಹೆಚ್ಚಳಕ್ಕಾಗಿ ಆಗ್ರಹಿಸಿ ನಡೆಸುವ ಹೋರಾಟದ ಪೂರ್ವಭಾವಿ ರೂಪುರೇಷೆಗಳ ಕುರಿತು ಚರ್ಚಿಸಲು ನ.27ಕ್ಕೆ ಸಮುದಾಯದ ನಾಯಕರೊಂದಿಗೆ ಸಭೆಯನ್ನು ಆಯೋಜಿಸಲಾಗಿದೆ’ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರೂ ಆಗಿರುವ ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದ್ದಾರೆ.

ಗುರುವಾರ ಒಕ್ಕಲಿಗರ ಸಂಘದ ಆವರಣದಲ್ಲಿನ ಕೆಂಪೇಗೌಡರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮುದಾಯದ ಶೇ.70ರಷ್ಟು ಮಂದಿ ಆರ್ಥಿಕವಾಗಿ ಹಿಂದುಳಿದಿದ್ದು, ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.4ರಷ್ಟು ಮೀಸಲಾತಿ ನೀಡಿ, ಅನ್ಯಾಯ ಮಾಡಲಾಗುತ್ತಿದೆ. ಶೇ.16ಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ಸಮುದಾಯಕ್ಕೆ ಪ್ರವರ್ಗ-3 ‘ಎ’ ಮೀಸಲಾತಿ ಪ್ರಮಾಣ ಹೆಚ್ಚಿಸುವ ಮೂಲಕ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.

‘ಕುವೆಂಪು ಕಲಾಕ್ಷೇತ್ರದಲ್ಲಿ ಪ್ರಮುಖರ ಸಭೆ ನಡೆಯಲಿದ್ದು, ಆದಿಚುಂಚನಗಿರಿ ಮಠದ ಡಾ.ನಿರ್ಮಲಾ ನಂದನಾಥ ಸ್ವಾಮಿ, ಪಟ್ಟನಾಯಕನಹಳ್ಳಿ ಮಠದ ಡಾ.ನಂಜಾವಧೂತ ಸ್ವಾಮಿ ಮತ್ತು ವಿಶ್ವ ಒಕ್ಕಲಿಗರ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮಿ ಸಾನಿಧ್ಯ ವಹಿಸಲಿದ್ದು, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಎಸ್ಸೆಂ ಕೃಷ್ಣ, ಸಂಸದ ಡಿ.ವಿ.ಸದಾನಂದಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಸಮುದಾಯದ ಪಾಲ್ಗೊಳ್ಳಲಿದ್ದಾರೆಂದು ಅವರು ತಿಳಿಸಿದರು.

ಹೆಚ್ಚಳ ಸ್ವಾಗತಾರ್ಹ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ.17ಕ್ಕೆ ಮತ್ತು ಶೇ.7ಕ್ಕೆ ಹೆಚ್ಚಳ ಮಾಡಿರುವುದನ್ನು ಒಕ್ಕಲಿಗರ ಸಂಘವು ಸ್ವಾಗತಿಸುತ್ತದೆ. ಅದೇ ರೀತಿ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಳ ಮಾಡಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರ ಮೀಸಲಾತಿಯಲ್ಲೂ ನಗರ ಪ್ರದೇಶದಲ್ಲಿ ಆರ್ಥಿಕವಾಗಿ ಬಡವರಾಗಿರುವ ಹಾಗೂ ಮೀಸಲಾತಿಯಿಂದ ಹೊರಗಿರುವ ಒಕ್ಕಲಿಗ ಸಮುದಾಯದವರಿಗೂ ಮೀಸಲಾತಿ ಒದಗಿಸಬೇಕು ಎಂದು ಬಾಲಕೃಷ್ಣ ಆಗ್ರಹಿಸಿದರು.

ಡಾ.ಗಾ.ನಂ.ಶ್ರೀಕಂಠಯ್ಯ ಮಾತನಾಡಿ, ‘ಒಕ್ಕಲಿಗ ಜನಾಂಗದ ಎಲ್ಲ ಜಾತಿ ಉಪಜಾತಿಗಳು ಹೋರಾಟ ಬೆಂಬಲಿಸಲಿವೆ. ಸಮುದಾಯದವರಿಗೆ ಕೇವಲ ಶೇ.2.5ರಷ್ಟು ಮೀಸಲಾತಿ ಸಿಗುತ್ತಿದೆ. ಅದನ್ನು ಹೆಚ್ಚಳ ಮಾಡಬೇಕು. ಸರಕಾರವು ಡಿಸೆಂಬರ್‍ನೊಳಗೆ ಮೀಸಲಾತಿ ಹೆಚ್ಚಿಸದಿದ್ದರೆ, ರಾಜ್ಯದಲ್ಲಿ ಹೋರಾಟದ ಶಕ್ತಿ ಪ್ರದರ್ಶನ ಮಾಡಲಾಗುವುದು ಎಂದು ಎಚ್ಚರಿಸಿದರು. ಸಮಿತಿಯ ಪ್ರಧಾನ ಸಂಚಾಲಕ ಆಡಿಟರ್ ನಾಗರಾಜ್ ಯಲಚವಾಡಿ, ಒಕ್ಕೂಟದ ರಾಜ್ಯಾಧ್ಯಕ್ಷ ಸಿ.ವಿ.ದೇವರಾಜು ಉಪಸ್ಥಿತರಿದ್ದರು.

Similar News