ಯಾವುದೇ ಕಾರಣಕ್ಕೂ ಏಕಭಾಷಾ ಯಜಮಾನಿಕೆ ನಡೆಯಲ್ಲ: ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ

Update: 2022-11-24 13:22 GMT

ಬೆಂಗಳೂರು, ನ. 24: ‘ನಮ್ಮದು ಬಹುಭಾಷಾ ರಾಷ್ಟ್ರವಾಗಿದ್ದು, ಯಾವುದೇ ಕಾರಣಕ್ಕೂ ನಮ್ಮಲ್ಲಿ  ಏಕಭಾಷಾ ಯಜಮಾನಿಕೆ ನಡೆಯುವುದಿಲ್ಲ’ ಎಂದು ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಅಭಿಪ್ರಾಯಪಟ್ಟರು.

ಗುರುವಾರ ‘ಹಿಂದಿ ಹೇರಿಕೆಗೆ ಖಂಡನೆ ಹಾಗೂ ಸಂವಿಧಾನ ಬದ್ಧ ಎಲ್ಲ ಭಾಷೆಗಳಲ್ಲಿ ಶಿಕ್ಷಣ ಹಕ್ಕು ರಕ್ಷಣೆಗಾಗಿ ಆಗ್ರಹಿಸಿ ನಗರದ ಅಲುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‍ಎಫ್‍ಐ) ಆಯೋಜಿಸಿದ್ದ ಬೃಹತ್ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ಸರಕಾರ ಶಿಕ್ಷಣ ಪದ್ಧತಿಯಲ್ಲಿ ಗೊಂದಲಗಳನ್ನು ಸೃಷ್ಟಿಸಿದೆ. ಹಿಂದಿ ಹೇರಿಕೆಯ ಮೂಲಕ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಿದೆ.ಅದರಲ್ಲೂ ಆತುರವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ತರಾತುರಿ ನಿರ್ಧಾರ ಸರಿಯಲ್ಲ ಎಂದರು. 

ಪಠ್ಯಕ್ರಮ ಚೌಕಟ್ಟಿಲ್ಲದೆ ಪಠ್ಯ ಪರಿಷ್ಕರಣೆ, ಅಲ್ಪಸಂಖ್ಯಾತರ ಹೆಣ್ಣು ಮಕ್ಕಳ ಶಿಕ್ಷಣವನ್ನು ಕಸಿಯುವ ಹಿಜಾಬ್ ನಿಷೇಧ, ವೈಜ್ಞಾನಿಕ ಶಿಕ್ಷಣವನ್ನು ಅಣಿಕಿಸುವ ರೀತಿಯಲ್ಲಿ ಧ್ಯಾನ, ವೇದಗಣಿತ, ಸನಾತನ ಶಿಕ್ಷಣ ಪದ್ಧತಿ, ಶಾಲಾ ಗೋಡೆಗಳಿಗೆ ಕೇಸರಿ ಬಣ್ಣ ಇತ್ಯಾದಿ ಗೊಂದಲಗಳನ್ನು ಸರಕಾರವೇ ಸೃಷ್ಟಿಸಿದೆ ಎಂದು ಆಪಾದಿಸಿದರು. 

ಅದು ಅಲ್ಲದೆ, ಕೋವಿಡ್ ಸೋಂಕಿನ ನಂತರ ಶಾಲೆಗಳು ಪ್ರಾರಂಭವಾದಾಗ ಮಕ್ಕಳ ಕಲಿಕೆಗೆ ತೀವ್ರ ಹಿನ್ನಡೆಯುಂಟಾಗಿದೆ. ಅದನ್ನು ತುಂಬಿಕೊಡುವ ಮೂಲಕ ಮಕ್ಕಳ ಕಲಿಕೆಯನ್ನು ಮುಖ್ಯ ವಾಹಿನಿಗೆ ತರಬೇಕೆಂದು ಹಲವು ಸಾಮಾಜಿಕ ಸಂಘಟನೆಗಳು ಸರಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದರೂ ಸರಕಾರ ನಿರ್ಲಕ್ಷ್ಯವಹಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಸ್‍ಎಫ್‍ಐ ಅಖಿಲ ಭಾರತ ಜಂಟಿ ಕಾರ್ಯದರ್ಶಿ ನಿತೀಶ್ ನಾರಾಯಣ್ ಮಾತನಾಡಿ, ಸರಕಾರ ಆನ್‍ಲೈನ್ ಶಿಕ್ಷಣದ ಹೆಸರಲ್ಲಿ ಡಿಜಿಟಲ್ ಡಿವೈಡ್ ಮಾಡುತ್ತಿದೆ. ಇಂತಹ ಕ್ರಮಗಳಿಂದ ಹಲವು ಮಕ್ಕಳು ಶಿಕ್ಷಣದಿಂದ ನೇರವಾಗಿ ದೂರವಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು. 

ಎಸ್‍ಎಫ್‍ಐ ರಾಜ್ಯಾಧ್ಯಕ್ಷ ಅಮರೇಶ್ ಕಡಗಡ್, ರಾಜ್ಯ ಕಾರ್ಯದರ್ಶಿ ವಾಸುದೇವ ರೆಡ್ಡಿ, ರಮೇಶ ವೀರಾಪೂರು ಭೀಮನಗೌಡ, ಶಿವಕುಮಾರ್ ಮ್ಯಾಗಳಮನಿ, ಗಾಯತ್ರಿ ಸೇರಿದಂತೆ ಪ್ರಮುಖರಿದ್ದರು.

Full View

Similar News