ಆಯ್ಕೆಯಾಗದ ವಿವಿ ಕುಲಪತಿ ಹುದ್ದೆ: ಶೋಧನಾ ಸಮಿತಿಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ರಾಜ್ಯಪಾಲರೇ ಪ್ರತಿವಾದಿ

Update: 2022-11-25 03:30 GMT

ಬೆಂಗಳೂರು: ಬೆಂಗಳೂರು, ಧಾರವಾಡ ಕೃಷಿ ವಿವಿ ಕುಲಪತಿ ಹುದ್ದೆಗೆ ಏಕೆ ಆಯ್ಕೆ ಮಾಡಿಲ್ಲವೆಂದು ಶೋಧನಾ ಸಮಿತಿಯನ್ನೇ ಪ್ರಶ್ನಿಸಿ ಆಕಾಂಕ್ಷಿ ಪ್ರಾಧ್ಯಾಪಕ ಭಾಸ್ಕರ್ ಎಂಬವರು ರಾಜ್ಯಪಾಲರನ್ನು ಪ್ರತಿವಾದಿಯನ್ನಾಗಿಸಿ ಹೈಕೋರ್ಟ್ ಮೆಟ್ಟಿಲೇರಿರುವುದು ಇದೀಗ ಬಹಿರಂಗವಾಗಿದೆ.

ಬೆಂಗಳೂರು ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆಗೆ ಆಕಾಂಕ್ಷಿ ಪ್ರಾಧ್ಯಾಪಕರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸದ ಶೋಧನಾ ಸಮಿತಿಗಳು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿದ್ಯಾನಿಲಯದ ಶೋಧನಾ ಸಮಿತಿಯು ಪರಿಗಣಿಸಿದ್ದನ್ನು ಆಧರಿಸಿ ಹೈಕೋರ್ಟ್ ಮೆಟ್ಟಿಲೇರಿರುವುದು ಶೋಧನಾ ಸಮಿತಿಗಳ ಕಾರ್ಯವೈಖರಿ ಮತ್ತು ಪಾರದರ್ಶಕತೆಯನ್ನು ಒರೆಗೆ ಹಚ್ಚಿದಂತಾಗಿದೆ.

ವಿವಿಧ ವಿಶ್ವವಿದ್ಯಾನಿಲಯಗಳ ಕುಲಪತಿ ಆಯ್ಕೆಗಾಗಿ ರಚನೆಯಾಗುವ ಶೋಧನಾ ಸಮಿತಿ (ಸರ್ಚ್ ಕಮಿಟಿ) ಗಳ ಕಾರ್ಯ ವೈಖರಿ ಮತ್ತು ಶಿಫಾರಸಿನ ಹಿಂದೆ ಹಣದ ವಹಿವಾಟು ನಡೆಯುತ್ತವೆ ಎಂಬ ಗುರುತರ ಆರೋಪಗಳು ಕೇಳಿ ಬರುತ್ತಿರುವ ನಡುವೆಯೇ ಮುನ್ನೆಲೆಗೆ ಬಂದಿರುವ ಬೆಂಗಳೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಆಯ್ಕೆಗೆ ಶೋಧನಾ ಸಮಿತಿಯು ನಡೆಸಿದ್ದ ಆಯ್ಕೆ ಪ್ರಕ್ರಿಯೆಗಳು ಹಲವು ಅನುಮಾನಕ್ಕೆ ದಾರಿಮಾಡಿಕೊಟ್ಟಿವೆ.

ಬೆಂಗಳೂರು, ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆಗೆ ಹೊಸದಿಲ್ಲಿಯ ಡಾ.ಎಸ್. ಭಾಸ್ಕರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಈ ಎರಡೂ ವಿಶ್ವವಿದ್ಯಾನಿಲಯಗಳ ಶೋಧನಾ ಸಮಿತಿಗಳು ಪರಿಗಣಿಸಿರಲಿಲ್ಲ. ಆದರೆ ಇದೇ ಭಾಸ್ಕರ್ ಅವರು ಸಲ್ಲಿಸಿದ್ದ ಅರ್ಜಿ ಯನ್ನು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಶೋಧನಾ ಸಮಿತಿಯು ಅರ್ಜಿಯನ್ನು ಪರಿಗಣಿಸಿತ್ತಲ್ಲದೇ ಶಿಫಾರಸು ಮಾಡಿದ್ದ ಪಟ್ಟಿಯಲ್ಲಿಯೂ ಅವರ ಹೆಸರಿತ್ತು.

ಹೀಗಾಗಿ ಇದನ್ನೇ ಆಧರಿಸಿ ಭಾಸ್ಕರ್ ಎಂಬುವರು ಇದೀಗ ಹೈಕೋರ್ಟ್ ಮೆಟ್ಟಿಲೇರಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ’ಬೆಂಗಳೂರು, ಧಾರವಾಡ ಕುಲಪತಿಗಳ ಹುದ್ದೆಯ ಆಯ್ಕೆ ಸಂದರ್ಭದಲ್ಲಿ ಏಕೆ ಆಯ್ಕೆ ಮಾಡಿಲ್ಲವೆಂದು ತಿಳಿಯದೇ ಬೇರೆ ದಾರಿಯಿಲ್ಲದೇ ನ್ಯಾಯಾಲಯದ ಮೊರೆ ಹೋಗಿದ್ದೇನೆ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೂ ಧಾರವಾಡ, ಬೆಂಗಳೂರು ಕೃಷಿ ವಿವಿ ಕುಲಪತಿ ಹುದ್ದೆ ಆಯ್ಕೆಯನ್ನು ತಡೆಹಿಡಿಯಬೇಕು ಎಂದು ದಾವೆಯಲ್ಲಿ ಕೋರಿದ್ದಾರೆ. ಈ ಸಂಬಂಧ ಕೆಲ ಟಿಪ್ಪಣಿ ಹಾಳೆಗಳು ‘the-file.in’ಗೆ ಲಭ್ಯವಾಗಿವೆ.

ಆದರೆ, ಈಗಾಗಲೇ ಧಾರವಾಡ ಕೃಷಿ ವಿಶ್ವವಿದ್ಯಾನಿಲಯಕ್ಕೆ ಪಿ.ಎಲ್. ಪಾಟೀಲ್ ಅವರನ್ನು ಕುಲಪತಿಯನ್ನಾಗಿ ರಾಜ್ಯಪಾಲರು ಆಯ್ಕೆಗೊಳಿಸಿ ಆದೇಶ ಹೊರಡಿಸಿರುವುದರಿಂದ ಅವರ ಆಯ್ಕೆ ಪ್ರಕ್ರಿಯೆಯನ್ನು ತಡೆಹಿಡಿಯಲು ಅವಕಾಶವಿರುವುದಿಲ್ಲ ಎಂದು ಕೃಷಿ ಇಲಾಖೆಯು ನಿಲುವು ತಳೆದಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಅಲ್ಲದೇ, ಈ ಪ್ರಕರಣದಲ್ಲಿ ರಾಜ್ಯಪಾಲರು ಮತ್ತು ಕುಲಾಧಿಪತಿ ಯವರ ಕಾರ್ಯದರ್ಶಿಯವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.
ಈ ಪ್ರಕರಣವು ಮಹತ್ವದ ಪ್ರಕರಣವಾಗಿದೆ. ಆದ್ದರಿಂದ ಈ ಪ್ರಕರಣದಲ್ಲಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅವರನ್ನು ನೇಮಕಗೊಳಿಸಬೇಕು ಎಂದು ಇಲಾಖೆಯು ಕಾನೂನು ಕೋಶವನ್ನು ಕೋರಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಬೆಂಗಳೂರು ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆಗಳ ಆಯ್ಕೆಗಾಗಿ ರಚಿಸಿದ್ದ ಶೋಧನಾ ಸಮಿತಿಗೆ ವಿಶ್ರಾಂತ ಕುಲಪತಿ ಡಾ ಪಿ.ಜಿ. ಚಂಗಪ್ಪ ಅವರನ್ನು ಅಧ್ಯಕ್ಷರನ್ನಾಗಿಸಲಾಗಿತ್ತು. ಮತ್ತೊಬ್ಬ ವಿಶ್ರಾಂತ ಕುಲಪತಿ ಡಾ.ಎಂ.ಎನ್.ಶೀಲವಂತರ ಅವರನ್ನು ಸರ್ಚ್ ಕಮಿಟಿ ಸದಸ್ಯರನ್ನಾಗಿಸಲಾಗಿತ್ತು. ಈ ಸಮಿತಿಯು ಭಾಸ್ಕರ್ ಎಂಬವರ ಅರ್ಜಿಯನ್ನು ಪರಿಗಣಿಸಿರಲಿಲ್ಲ.

ಶಿಫಾರಸು ಮಾಡುವಾಗ ಸಲ್ಲಿಸಲಾಗಿರುವ ಮಾಹಿತಿಯು ಅಪೂರ್ಣವಾಗಿದೆಯೆಂದು ಭಾಸ್ಕರ್ ಅವರ ಅರ್ಜಿಯನ್ನು ಪರಿಗಣಿಸಿರಲಿಲ್ಲ. ಆದರೆ, ಇದೇ ಅರ್ಜಿಯನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ಕುಲಪತಿ ಹುದ್ದೆಗೆ ಸಲ್ಲಿಸಿದ್ದರು. ಈ ವಿಶ್ವವಿದ್ಯಾನಿಲಯದ ಕುಲಪತಿ ಆಯ್ಕೆಗೆ ರಚನೆಗೊಂಡಿದ್ದ ಶೋಧನಾ ಸಮಿತಿಯು ಭಾಸ್ಕರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ್ದರು. ಮತ್ತು ಶಿಫಾರಸ್ಸು ಪಟ್ಟಿಯಲ್ಲಿ ಅವರ ಹೆಸರನ್ನೂ ಸೇರಿಸಿ ಆಯ್ಕೆ ಮಾಡಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದುಬಂದಿದೆ.

ಬೆಂಗಳೂರು, ಧಾರವಾಡ ಕುಲಪತಿಗಳ ಹುದ್ದೆಯ ಆಯ್ಕೆ ಸಂದರ್ಭದಲ್ಲಿ ಏಕೆ ಆಯ್ಕೆ ಮಾಡಿಲ್ಲವೆಂದು ತಿಳಿಯದೇ ಬೇರೆ ದಾರಿ ಯಿಲ್ಲದೇ ನ್ಯಾಯಾಲಯದ ಮೊರೆ ಹೋಗಿದ್ದೇನೆ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೂ ಧಾರವಾಡ, ಬೆಂಗಳೂರು ಕೃಷಿ ವಿವಿ ಕುಲಪತಿ ಹುದ್ದೆ ಆಯ್ಕೆಯನ್ನು ತಡೆಹಿಡಿಯಬೇಕು ಎಂದು ಕೋರಿರುವ ರಿಟ್ (WP 20144/2022) ಅರ್ಜಿಯಲ್ಲಿ ರಾಜ್ಯಪಾಲರು ಮತ್ತು ಕುಲಾಧಿಪತಿಯೂ ಆಗಿರುವ ರಾಜ್ಯಪಾಲರ ಕಾರ್ಯದರ್ಶಿಯನ್ನೂ ಪ್ರತಿವಾದಿಯನ್ನಾಗಿಸಲಾಗಿದೆ.

Similar News